ಹಿರಿಯ ಪತ್ರಕರ್ತ ಸದಾನಂದ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು..

ಬೆಂಗಳೂರು, ಜು.06, 2021 : (www.justkannada.in news ) ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಕೆ.ಸಿ.ಸದಾನಂದ ಇಂದು ಮುಂಜಾನೆ ತೀವ್ರ ಹೃದಯಘಾತದಿಂದ ನಿಧನಹೊಂದಿದ್ದಾರೆ. ಸದಾನಂದ ಅವರ ನಿಧನಕ್ಕೆ ರಾಜಕಾರಣಿಗಳು, ಹಿರಿಯ ಪತ್ರಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.

ನೇರ ನಿಷ್ಠುರ ಮನೋಭಾವದ ಸದಾನಂದ ಅವರು, ʼಸಂಜೆವಾಣಿʼ, ʼಈ ಸಂಜೆʼ ಹಾಗೂ ʼಕನ್ನಡಪ್ರಭʼ ಪತ್ರಿಕೆಗಳಲ್ಲಿ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿದ್ದರು. ಬರವಣಿಗೆಯಲ್ಲಿ ತೀಕ್ಷ್ಣತೆ, ಬರೆಯಬೇಕಾದ್ದನ್ನು ನೇರವಾಗಿ ಮುಲಾಜಿಲ್ಲದೆ ಬರೆಯುತ್ತಿದ್ದವರು. ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಬಂಧುಬಳಗ, ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ.

jk

ಆತ್ಮೀಯ ಕಿರಿಯ ಗೆಳೆಯ, ಸದಾ ಕ್ರಿಯಾಶೀಲವಾಗಿದ್ದ ಸದಾನಂದ ಅವರ ಅಗಲಿಕೆ ಆಘಾತ ತಂದಿದೆ. ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ದುಖಃಕರ ಸಂಗತಿ. ಮುಂಬೈನ ‘ಕರ್ನಾಟಕ ಮಲ್ಲ ‘ ಪತ್ರಿಕೆ ಮೂಲಕ ವೃತ್ತಿ ಆರಂಭಿಸಿದ ಸದಾನಂದ, ನಂತರದ ದಿನಗಳಲ್ಲಿ ‘ಸಂಜೆವಾಣಿ’, ಕನ್ನಡಪ್ರಭ ಪತ್ರಿಕೆಗಳ ಮೂಲಕ ವೃತ್ತಿಪರತೆ ಮೆರೆದು ತನ್ನದೇ ಛಾಪು ಮೂಡಿಸಿದ್ದ. ಆತನ ಅಗಲಿಕೆಯ ನೋವನ್ನು ಕುಟುಂಬದವರಿಗೆ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಎಂ.ಸಿದ್ದರಾಜು ಕಂಬನಿ ಮಿಡಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಾದ್ಯಮ ಸಲಹೆಗಾರ ಕೆ.ಸಿ. ಸದಾನಂದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ರಾತ್ರಿ ಹೃದಯಾಘಾತವಾದ ತಕ್ಷಣ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಪುತ್ರ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲವಾಗಿದ್ದ ಚನ್ನಪಟ್ಟಣದ ಸದಾನಂದ, ಸಂಜೆವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರ ನಂಬಿಕಸ್ಥನಾಗಿದ್ದ ಸದಾನಂದ, ಈಗಲೂ ಅವರ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಕೆ.ಸಿ.ಸದಾನಂದ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕೆ ಎಸ್ ಈಶ್ವರಪ್ಪ ಸಂತಾಪ.
ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಸದಾನಂದ ರವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ತಿಳಿದು ತೀವ್ರ ದುಃಖವಾಯಿತು. ಮೃತರಿಗೆ ಚಿರಶಾಂತಿ ಸಿಗಲಿ,ಮತ್ತು ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

—–

key words : sadananda-journalist-media-dead-condolence-message