ಕೋವಿಡ್  3ನೇ ಅಲೆ ಅಷ್ಟೊಂದು ಕೆಟ್ಟದಾಗಿರುವುದಿಲ್ಲ ಎನ್ನುತ್ತಾರೆ ಬೆಂಗಳೂರಿನ ವೈದ್ಯರು.

ಬೆಂಗಳೂರು, ಜುಲೈ 6, 2021 (www.justkannada.in): ಕಳೆದ ಸುಮಾರು ಒಂದೂವರೆ ವರ್ಷದಿಂದ ಕೋವಿಡ್ ಸೋಂಕು ಇಡೀ ಮನುಕುಲದ ಮೇಲೆ ಹಿಂದೆಂದೂ ಕಾಣದಿರುವಂತಹ ಅತ್ಯಂತ ಕೆಟ್ಟ ಪರಿಣಾಮ ಬೀರಿ ಬಹುದೊಡ್ಡ ಪಾಠವನ್ನು ಕಲಿಸಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಆರೋಗ್ಯಸೇವಾ ಸಿಬ್ಬಂದಿಗಳು ಅತ್ಯಂತ ಪ್ರಶಂಸಾರ್ಹರು. ಆದರೂ ಸಹ ವೈದ್ಯರ ಪರ ಹಾಗೂ ವಿರುದ್ಧ ಅನೇಕ ಚರ್ಚೆಗಳಾದವು. ಕೆಲವು ಕಡೆ ಮೃತಪಟ್ಟ ಸೋಂಕಿತರ ಸಂಬಂಧಿಕರು ಹಾಗೂ ಸ್ನೇಹಿತರಿಂದ ವೈದ್ಯರ ಮೇಲೆ ದಾಳಿ ನಡೆದ ಪ್ರಸಂಗಗಳೂ ನಡೆದವು. ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆಯಿತ್ತು. ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ಬೆಂಗಳೂರಿನ ವೈದ್ಯರು ಎಂತಹ ಕಷ್ಟಗಳು ಹಾಗೂ ಸವಾಲುಗಳನ್ನು ಎದುರಿಸಿದರು ಎಂದು ತಿಳಿದುಕೊಳ್ಳುವ ಪ್ರಯತ್ನ ನಡೆಯಿತು.jk

ಈ ಸಂಬಂಧ ಮಾತನಾಡಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಹಾಗೂ ಸುಟ್ಟಗಾಯಗಳ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ರಮೇಶ ಕೆ.ಟಿ. ಅವರು ಸುಟ್ಟಗಾಯಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ವೈದ್ಯರನ್ನೂ ಸಹ ಕೋವಿಡ್ ಡ್ಯೂಟಿಗೆ ನಿಯೋಜಿಸಲಾಗಿತ್ತಂತೆ!

“ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ಪ್ರತಿ ದಿನ 50 ರಿಂದ 70 ಸುಟ್ಟಗಾಯಗಳಿಗೆ ಡ್ರೆಸ್ಸಿಂಗ್ ಪ್ರಕರಣಗಳು ಬರುತ್ತವೆ. ಹಾಗಾಗಿ, ಈ ವಾರ್ಡ್ ಸದಾ ಚಟುವಟಿಕೆಯಿಂದಿರಬೇಕು. ಆದರೆ ಕೋವಿಡ್ ಸೋಂಕಿನ ಎರಡನೆಯ ಅಲೆಯ ಸಂದರ್ಭದಲ್ಲಿ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಂತಹ ವೈದ್ಯರನ್ನು ಸರದಿ ಮೇಲೆ ನಿಯೋಜಿಸಲಾಯಿತು. ಹಾಗಾಗಿ, ಈ ವಿಭಾದ ನಿರ್ವಹಣೆಯ ಜೊತೆಗೆ ಕೋವಿಡ್ ವಾರ್ಡ್ ನಿರ್ವಹಣೆ ಬಹಳ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ ಇದರಿಂದ ಸಾಕಷ್ಟು ಪಾಠಗಳನ್ನೂ ಕಲಿತಂತಾಯಿತು. ನಿರಂತರವಾಗಿ ಆರು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಅಸಹನೀಯ,” ಎನ್ನುತ್ತಾರೆ ಡಾ. ರಮೇಶ್.

ಡಾ. ರಮೇಶ್ ಅವರ ಪ್ರಕಾರ ಕೋವಿಡ್ ಎರಡನೆಯ ಅಲೆಯಲ್ಲಿ ಘಟಿಸಿದಂತಹ ಮರಣ ಪ್ರಮಾಣ ಬಹಳ ದುಃಖ ತರಿಸಿತಂತೆ. “ಎರಡನೆ ಅಲೆಯ ಅವಧಿ ನಮಗೆಲ್ಲಾ ಒಂದು ರೀತಿಯ ತರಬೇತಿ ಅವಧಿಯಂತಿತ್ತು. ಈ ಸಮಯದಲ್ಲಿ ನಾವೆಲ್ಲರೂ ಕಲಿತಿರುವಂತಹ ಪಾಠದಿಂದಾಗಿ ಬಹುಃ ಮೂರನೆ ಅಲೆ ಎದುರಾದರೆ ಅಷ್ಟೊಂದು ಸವಾಲುಗಳನ್ನು ಎದುರಿಸಬೇಕಾಗಿರುವುದಿಲ್ಲ. ಬಹುಪಾಲು ವೈದ್ಯರು ತಮ್ಮಲ್ಲಿದ್ದ ಭಯದಿಂದ ಹೊರಬಂದಿದ್ದಾರೆ ಅನೇಕ ವೈದ್ಯರು ಈಗಾಗಲೇ ಕೋವಿಡ್ ಕರ್ತವ್ಯ ನಿರ್ವಹಿಸಿರುವ ಕಾರಣದಿಂದಾಗಿ ಹಿಂದಿಗಿಂತ ಹೆಚ್ಚು ಸಿದ್ಧತೆ ಮಾಡಿಕೊಂಡಿದ್ದಾರೆ, ಹಾಗಾಗಿ ರೋಗಿಗಳು ಹಾಗೂ ಸಂಪನ್ಮೂಲಗಳ ನಿರ್ವಹಣೆ ಅಷ್ಟು ಕಷ್ಟವಾಗುವುದಿಲ್ಲ,” ಎಂದರು.

‘ಖಾಸಗಿ ಆಸ್ಪತ್ರೆಯೊಂದರ ನಿರ್ಣಾಯಕ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಅರ್ಜುನ್ ಆಳ್ವಾ ಅವರ ಪ್ರಕಾರ, “ಕೋವಿಡ್ ಐಸಿಯು ಘಟಕವನ್ನು ಮುಚ್ಚಲಾಗಿತ್ತು. ಆದರೆ ಎರಡನೆಯ ಅಲೆ ಎಲ್ಲರಿಗೂ ಬಹಳ ದೊಡ್ಡ ಆಘಾತವನ್ನೇ ಉಂಟು ಮಾಡಿತು. ಕೇವಲ 15 ದಿನಗಳೊಳಗೆ ನಮ್ಮ ಆಸ್ಪತ್ರೆಯ ತುಂಬಾ ಬರೀ ಕೋವಿಡ್ ರೋಗಿಗಳಿಂದಲೇ ತುಂಬಿ ಹೋಯಿತು. ಸೋಂಕಿತರಿಗೆ ಪ್ರೋನಿಂಗ್ (ಬೋರಲು ಮಲಗಿಸುವುದು) ಹಾಗೂ ಇತರೆ ಪ್ರಯೋಗಗಳನ್ನು ಮಾಡಿದ ಹೊರತಾಗಿಯೂ ಮೂರು ತಿಂಗಳ ಒಳಗೆ ಸುಮಾರು ೩೩೦ ಮಂದಿ ಮೃತಪಟ್ಟರು.” ಡಾ. ಅರ್ಜುನ್ ಅವರ ತಂಡ ೨೦೨೦ರ ಮೇ ತಿಂಗಳಿಂದ ಡಿಸೆಂಬರ್ ತಿಂಗಳ ನಡುವೆ ಸುಮಾರು ೫,೦೦೦ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಿದೆಯಂತೆ. “೨೦೨೧ರ ಏಪ್ರಿಲ್‌ನಿಂದ ಜೂನ್ ತಿಂಗಳ ನಡುವೆ ಸುಮಾರು ೪,೦೦೦ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇವೆ,” ಎನ್ನುತ್ತಾರೆ.

ಅವರ ಆಸ್ಪತ್ರೆಯಲ್ಲಿ ಎರಡನೆಯ ಅಲೆಯನ್ನು ನಿರ್ವಹಿಸಲು ಸಾಕಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಹಾಗೂ ಮೂಲಭೂತಸೌಕರ್ಯಗಳಿದ್ದರೂ ಸಹ ಚಿಕ್ಕ ವಯಸ್ಸಿನ ಪೋಷಕರು ಹಾಗೂ ಕುಟುಂಬಸ್ಥರನ್ನು ನಿರ್ವಹಿಸುವುದು ಮಾನಸಿಕವಾಗಿ ಬಹಳ ತ್ರಾಸದಾಯಕವಾಗಿತ್ತಂತೆ.

ಡಾ. ಅರ್ಜುನ್ ಅವರ ಪ್ರಕಾರ, ಒಂದು ವೇಳೆ ಮೂರನೆಯ ಅಲೆ ಎದುರಾದರೆ ಬಹುಪಾಲು ಆಸ್ಪತ್ರೆಗಳು ಅದನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆಯAತೆ. “ಕೋವಿಡ್ ಸೋಂಕು ನಿರ್ವಹಣೆಯ ಸಂಬಂಧ ನಾವು ಝೂಂ ಕಾಲ್‌ ಗಳ ಮೂಲಕ ಪ್ರತಿ ಮೂರು ವಾರಗಳಿಗೊಮ್ಮೆ ಕ್ರಮಬದ್ಧವಾಗಿ ಸಭೆ ನಡೆಸುತ್ತೇವೆ. ಮಕ್ಕಳ ಚಿಕಿತ್ಸಾ ವಿಭಾಗಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದೇವೆ, ಜೊತೆಗೆ ಯಾವ ಯಾವ ವಿಭಾಗಗಳು ಯಾವ ಯಾವ ಕೆಲಸವನ್ನು ವಹಿಸಿಕೊಂಡು ನಿರ್ವಹಿಸಬೇಕು ಎಂಬ ಕುರಿತು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ,” ಎನ್ನುತ್ತಾರೆ.

“ಕೋವಿಡ್ ಮೊದಲನೆ ಅಲೆಯ ಸಮಯದಲ್ಲಿ ರಾತ್ರಿ ೩ ಗಂಟೆ ಸಮಯದಲ್ಲಿ ಗಾಬರಿಗೊಂಡಿದ್ದಂತಹ ಅನೇಕ ಜನರು ನಮಗೆ ದೂರವಾಣಿ ಕರೆಗಳನ್ನು ಮಾಡುತ್ತಿದ್ದರು. ಎರಡನೆಯ ಅಲೆಯ ಸಮಯದಲ್ಲಿ ಅದು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು,” ಎನ್ನುತ್ತಾರೆ ಬಿಬಿಎಂಪಿ ಕೋವಿಡ್-೧೯ ಸಮಿತಿಯ ತಜ್ಞ ಸದಸ್ಯರೂ ಆಗಿರುವ ಡಾ. ಪ್ರದೀಪ್ ರಂಗಪ್ಪ, ಖಾಸಗಿ ಆಸ್ಪತ್ರೆಯೊಂದರ ನಿರ್ಣಾಯಕ ಚಿಕಿತ್ಸಾ ವಿಭಾಗದ ಹಿರಿಯ ಸಮಾಲೋಚಕರು.

“ಬಲವಾದ ಸೂಚನೆಗಳು ಗೋಚರಿಸಿದರೂ ಸಹ ಆಡಳಿತಾತ್ಮಕ ಕಾರ್ಯನಿರ್ವಹಣೆ ವಿಫಲವಾಯಿತು. ಎಲ್ಲೆಡೆ ತುಂಬಾ ಗೊಂದಲವಿತ್ತು. ಚಾರಿತ್ರಿಕವಾಗಿಯೂ ಈ ರೀತಿಯ ಯಾವುದೇ ಸಾಂಕ್ರಾಮಿಕ ಖಾಯಿಲೆಗಳು ಎದುರಾದಾಗ, ಅದರ ಎರಡನೆಯ ಅಲೆ ಬಹಳ ದುಸ್ತರವಾಗಿರುತ್ತದೆ. ಕೋವಿಡ್-೧೯ರ ಎಡರನೆಯ ಅಲೆ ಸಮಯದಲ್ಲಿ ಇಡೀ ವಿಶ್ವ ಎದುರಿಸಿದ ಸಮಸ್ಯೆಗಳೇ ಇದಕ್ಕೆ ಸಾಕ್ಷಿ,” ಎನ್ನುತ್ತಾರೆ.

“ಪ್ರತಿಯೊಬ್ಬ ವೈದ್ಯರೂ ಸಹ, ತಮ್ಮ ಸ್ವಂತ ಕುಟುಂಬಗಳ ಸದಸ್ಯರೂ ಒಳಗೊಂಡAತೆ ಎಲ್ಲಾ ಅರ್ಹ ಸೋಂಕಿತರಿಗೂ ಸರಿಯಾದ ಚಿಕಿತ್ಸೆ ನೀಡಲಾಗದೆ ಇರುವುದಕ್ಕೆ ಪರಿತಪಿಸಿ ತಾತ್ವಿಕ ಗೊಂದಲವನ್ನು ಎದುರಿಸಿದರು. “ನಮ್ಮ ಸ್ವಂತ ಕುಟುಂಬಸ್ಥರಿಗೆ ಐಸಿಯು ಹಾಸಿಗೆಗಳನ್ನು ಕೊಡಿಸುವಲ್ಲಿ ಕಷ್ಟ ಎದುರಿಸಬೇಕಾಯಿತು. ಔಷಧಗಳ ಲಭ್ಯತೆ ಹಾಗೂ ಸಂಪನ್ಮೂಲ ಹಂಚಿಕೆ ಬಹಳ ದೊಡ್ಡ ಸಮಸ್ಯೆಯಾಗಿತ್ತು,” ಎನ್ನುತ್ತಾರೆ ಡಾ. ಪ್ರದೀಪ್ ರಂಗಪ್ಪ.

“ಆದರೆ ಮೂರನೆ ಅಲೆ ಎದುರಾದರೆ ಪರಿಸ್ಥಿತಿ ಅಷ್ಟು ಕೆಟ್ಟದಾಗಿರುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ನಾವು ಈಗಾಗಲೇ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ನನ್ನ ಪ್ರಕಾರ ಕೋವಿಡ್ ಮೂರನೆ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ ಎನ್ನುವುದಕ್ಕೆ ಯಾವುದೇ ನಿಖರವಾದ ಸಾಕ್ಷ್ಯಗಳಿಲ್ಲ. ಹಾಗಾಗಿ ಆ ಕುರಿತು ಹೆಚ್ಚು ಹೆದರಬೇಕಾಗಿಲ್ಲ. ನಾವೆಲ್ಲರೂ ಸಿದ್ಧವಾಗಿದ್ದು, ಬಹುಶಃ ಸಂಪನ್ಮೂಲಗಳ ಅತಿಯಾದ ಉಪಯೋಗವೂ ನಿಯಂತ್ರಣಗೊಳ್ಳುತ್ತದೆ,” ಎನ್ನುತ್ತಾರೆ.

ಬಹುಪಾಲು ಆಸ್ಪತ್ರೆಗಳಲ್ಲಿ ಸಾಕಷ್ಟು ಐಸಿಯು ಹಾಸಿಗೆಗಳಿವೆ

2020ರಲ್ಲಿ ಸಮರ್ಪಿತ ಕೋವಿಡ್ ಆಸ್ಪತ್ರೆಗಳ ಇಲ್ಲದೇ ಇರುವ ಕಾರಣದಿಂದಾಗಿ ಕೋವಿಡ್ ಸೋಂಕಿತರನ್ನು ರಾಜೀವ್ ಗಾಂಧಿ ಕ್ಷಯರೋಗಗಳ ಆಸ್ಪತ್ರೆಗೆ (ಆರ್‌ಜಿಐಸಿಡಿ) ಕಳುಹಿಸಲಾಗಿತ್ತು. ಎರಡನೆಯ ಅಲೆಯ ಸಮಯದಲ್ಲಿ ಎಸ್‌ಎಆರ್‌ಐ ಪ್ರಕರಣಗಳಿಗೆಂದೇ ಮೀಸಲಿರುವ ಆರ್‌ಜಿಐಸಿಡಿ ಆಸ್ಪತ್ರೆಗೆ ಬರುವ ೯೦ ರಿಂದ ೯೫%ರಷ್ಟು ರೋಗಿಗಳು ಕೋವಿಡ್ ಪಾಸಿಟಿವ್ ಆಗಿದ್ದರು.

ಈ ಕುರಿತು ಮಾತನಾಡಿದ ಆರ್‌ಜಿಐಸಿಡಿಯ ನಿರ್ದೇಶಕರಾದ ಡಾ. ಸಿ. ನಾಗರಾಜ್ ಅವರು, “ಹಾಸಿಗೆಗಳ ಕೊರತೆ ಇದ್ದ ಕಾರಣದಿಂದಾಗಿ ನಾವು ಸೋಂಕಿತರಿಗೆ ನಮ್ಮ ಆಸ್ಪತ್ರೆಯಲ್ಲಿಯೇ ನೀಡಿದೆವು. ಮೂರು-ಹಂತಗಳ ವ್ಯವಸ್ಥೆಯನ್ನು ಮಾಡಿಕೊಂಡೆವು – ಎಸ್‌ಎಆರ್‌ಐ ಪ್ರಕರಣಗಳು, ಕೋವಿಡ್-೧೯ ಹಾಗೂ ನಾನ್-ಕೋವಿಡ್ ಪ್ರಕರಣಗಳಿಗೆಂದೇ ಮೀಸಲಾಗಿದ್ದ ವಾರ್ಡ್. ನಮಗೆ ಬೆಂಗಳೂರು ಮೆಡಿಕಲ್ ಕಾಲೇಜಿನಿಂದ ಬೆಂಬಲ ದೊರೆಯಿತು. ಸಿಬ್ಬಂದಿಗಳನ್ನು ಬ್ಯಾಚ್‌ಗಳಲ್ಲಿ ವಿಭಜಿಸಿ ಕಾರ್ಯನಿರ್ವಹಿಸುವಂತೆ ಕೋರಿದೆವು,” ಎಂದು ವಿವರಿಸಿದರು.

ಸರ್ಕಾರ ಹಾಗೂ ಆರೋಗ್ಯಸೇವಾ ವ್ಯವಸ್ಥೆ 2021ರಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ಬರುತ್ತವೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಒಂದು ವೇಳೆ ಮೂರನೆ ಅಲೆ ಈಗ ಎದುರಾದರೂ ಸಹ ಅದನ್ನು ಉತ್ತಮವಾಗಿ ನಿರ್ವಹಿಸಬಹುದು.

“ಈಗ ಬಹುಪಾಲು ಆಸ್ಪತ್ರೆಗಳು ಸಾಕಷ್ಟು ಸಂಖ್ಯೆಯ ಐಸಿಯು ಹಾಸಿಗೆಗಳು ಹಾಗೂ ವೆಂಟಿಲೇಟರ್ ಹಾಸಿಗೆಗಳನ್ನು ಸಿದ್ಧಪಡಿಸಿಕೊಂಡಿವೆ. ಸರ್ಕಾರವೂ ಸಹ ವಿಶೇಷ ಸಮಿತಿಯ ಮೂಲಕ ಬಹಳ ಕಟ್ಟುನಿಟ್ಟಾಗಿ ಯೋಜನೆ ರೂಪಿಸುತ್ತಿದೆ,” ಎನ್ನುತ್ತಾರೆ ಡಾ. ಸಿ. ನಾಗರಾಜ್.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: covid-3rd wave – not -so bad-bangalore-doctor