ಧರ್ಮವೇ ಈ ಬಾರಿಯ ಚುನಾವಣಾ ಅಸ್ತ್ರ ಕಾಂಗ್ರೆಸ್, ಬಿಜೆಪಿಗೆ..

ಬೆಂಗಳೂರು, ಏಪ್ರಿಲ್ ,26, 2023(www.justkannada.in): ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದರೆ ಈ ರಾಜ್ಯದ ಉದ್ಧಾರಕ್ಕಾಗಿ ತಾವು ಮಾಡಲಿರುವ ಅಭಿವೃದ್ಧಿ ಯೋಜನೆಗಳು, ಜನಪರ ಕಾರ್ಯಕ್ರಮ ಗಳ ಬಗ್ಗೆ ಘೋಷಣೆ ಮಾಡಿ, ಮತದಾರರನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಾರೆ. ಅಧಿಕಾರರೂಢ ಪಕ್ಷವಾದರೆ, ತನ್ನ ಸರ್ಕಾರ ಮಾಡಿದ ಸಾಧನೆ, ಅದರಿಂದ ರಾಜ್ಯ ಮತ್ತು ಜನತೆಗೆ ಆದ ಅನುಕೂಲ, ಚುನಾವಣೆಗೆ ಮುನ್ನ ತಮ್ಮ ಪಕ್ಷ ಘೋಷಿಸಿದ ಪ್ರಣಾಳಿಕೆಯಲ್ಲಿ ನಡೆದ ಎಷ್ಟು ಭರವಸೆಗಳನ್ನು ಈಡೇರಿದೆ, ಹೀಗೆ ವಿವರ ನೀಡುವುದು ಪರಿಪಾಠ.

2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯ, ತನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ 65 ಭರವಸೆಗಳನ್ನೂ ಅನುಷ್ಠಾನಕ್ಕೆ ತಂದಿದೆ ಎಂದು ಅಬ್ಬರದ ಪ್ರಚಾರ ನಡೆಸಿದರು. ಪ್ರತಿ ಪಕ್ಷ ಬಿಜೆಪಿ, ಜೆಡಿಎಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಪ್ರಚಾರ ಮಾಡಿದವು. ಫಲಿತಾಂಶ ಬಂದಾಗ ಎಲ್ಲರಿಗೂ ಅಚ್ಚರಿ.

ಅತಂತ್ರ ಫಲಿತಾಂಶ ನೀಡಿದ್ದ ಮತದಾರ. ಆದರೆ, ಲಿಂಗಾಯತ ಬೆಂಬಲಿತ ಕಮಲ ಪಕ್ಷ 104 ಸ್ಥಾನ ಗಳಿಸಿ  ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಪ್ರತ್ಯೇಕ ಲಿಂಗಾಯತ ಧರ್ಮ ಮಾಡುವ ಸಾಹಸಕ್ಕೆ ಕೈ ಹಾಕಿದ್ದ ಕೈ ಪಕ್ಷ 69 ಸ್ಥಾನ ಗಳಿಸಿ ಮಕಾಡೆ ಮಲಗಿತ್ತು. 37 ಸೀಟು ಗೆದ್ದಿದ್ದ ಜೆಡಿಎಸ್ ಗೆ ಬಂಪರ್ ಲಾಟರಿ ಹೊಡೆದುದು, ಕುಮಾರಸ್ವಾಮಿ ಸ್ಟಾರ್ ಪ್ರಕಾಶಮಾನವಾಗಿ ಬೆಳಗಿದ್ದು, ಅವರು ಸ್ಟಾರ್ ಹೋಟೆಲಿಂದ ಆಡಳಿತ ನಡೆಸಿದ್ದು ಎಲ್ಲರಿಗೂ ತಿಳಿದಿದೆ.

2023 ರ ಚುನಾವಣೆಗೆ ಕೇವಲ ಹದಿನೈದು ದಿನಗಳು ಉಳಿದಿವೆ. ಚುನಾವಣೆ ಪ್ರಚಾರ ಈಗಾಗಲೆ ಮುಗಿಲು ಮುಟ್ಟಿದೆ. ಬಿಜೆಪಿಗೆ ಚುನಾವಣೆ ಅಸ್ತ್ರ ವಾಗಿರುವುದು ಧರ್ಮದ ವಿಷಯ, ಸಿದ್ದರಾಮಯ್ಯ ನವರನ್ನು ನಿರಂತರವಾಗಿ ಟೀಕೆ ಮಾಡುವುದು. ಇದೆರೆಡನ್ನು ಬಿಟ್ಟರೆ ಕಮಲ ಪಕ್ಷ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿದಂತೆ ಕಾಣುತ್ತಿಲ್ಲ. ಬಸವರಾಜ ಬೊಮ್ಮಾಯಿಯವರು ತಮ್ಮ ಸರ್ಕಾರದ ಸಾಧನೆ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದೇ ಕಡಿಮೆ. ಬರೇ ರಾಜಕೀಯ ಕೆಸರೆರಾಚಾಟವೇ ಆಗಿದ್ದು.

ಲಿಂಗಾಯತರು ಬಿಜೆಪಿಯಿಂದ ದೂರ ಹೋಗಿಲ್ಲ. ಅವರೆಂದೆದಿಗೂ ಕಮಲ ಪಕ್ಷದ ಪರವೇ ಎಂದು ಬಿಜೆಪಿ ಪಠಿಸುತ್ತಲೇ ಇದ್ದರೆ, ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಇನ್ನಿತರೆ ಲಿಂಗಾಯತ ನಾಯಕರು ಬಿಜೆಪಿ ತೊರೆದು ‘ಕೈ’ ಹಿಡಿದ ಮೇಲೆ, ಲಿಂಗಾಯತರು ನಮಗೆ ಬೆಂಬಲ ನೀಡುತ್ತಾರೆ, ಎಂಬುದು ಕಾಂಗ್ರೆಸ್ ನ ಘೋಷಣೆ.

ಏತನ್ಮಧ್ಯೆ, ಯಾವ ಪಕ್ಷ ಲಿಂಗಾಯತರನ್ಬು, ಅದರ ನಾಯಕರನ್ನು ಹೀನಾಯವಾಗಿ ನಡೆಸಿ ಕೊಂಡರು ಎಂಬ ಚರ್ಚೆ ಬೇರೆ ಮುನ್ನೆಲೆಗೆ. ಕರ್ನಾಟಕದ ರಾಜಕೀಯ ಇತಿಹಾಸ ಗಮನಿಸಿದರೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಲಿಂಗಾಯತ ನಾಯಕರನ್ನು ಹೀನಾಯವಾಗಿ ನಡೆಸಿಕೊಂಡಿವೆ. ಕಾಂಗ್ರೆಸ್ ನಿಜಲಿಂಗಪ್ಪ ನವರಿಗೆ ಕಿರುಕುಳ ನೀಡಲಿಲ್ಲವೇ?  ಮೊದಲ ಬಾರಿಗೆ 1983ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್, 1985ರ ಚುನಾವಣೆಯಲ್ಲೂ ಸೋತಿತ್ತು

ಅಂತಹ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿ, 1989 ರಲ್ಲಿ 178 ಸ್ಥಾನ ಗಳಿಸಿ, ಅಧಿಕಾರ ಮರಳಿ ತಂದ ವೀರೇಂದ್ರ ಪಾಟೀಲ್ ರನ್ನು ಹೇಗೆ ಅವಮಾನಿಸಿತು ಎಂದು ಯಾರಿಗೆ ಗೊತ್ತಿಲ್ಲ. ಹಲವಾರು ವರ್ಷಗಳಿಂದ ಅಧಿಕಾರಕ್ಕೆ ಹಪಾಹಪಿಸುತ್ತಿದ್ದ ಬಿಜೆಪಿಯನ್ನು ಹೇಗಾದರೂ ಮಾಡಿ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರಲೇಬೇಕು ಎಂದು ಶ್ರಮಿಸಿದವರು ಯಡಿಯೂರಪ್ಪ, ಅನಂತ ಕುಮಾರ್, ಕೆ ಎಸ್ ಈಶ್ವರಪ್ಪ, ಬಿ.ಬಿ ಶಿವಪ್ಪ.

ಬಿಜೆಪಿ ಅನಂತ್ ಕುಮಾರ್ ಗೆ ಮಾಡಿದ ಅಪಮಾನವನ್ನು ರಾಜ್ಯದ ಜನತೆ ಎಂದಿಗೂ ಮರೆಯಲಾರರು. ಯಡಿಯೂರಪ್ಪ ನವರ ಕುತಂತ್ರದಿಂದ ಅನಂತ್ ಕುಮಾರ್ ಮುಖ್ಯ ಮಂತ್ರಿ ಯಾಗುವ ಕನಸು ಈಡೇರಲಿಲ್ಲ. ಕಮಲ  ಪಕ್ಷವನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪನವರನ್ನೇ ಅಧಿಕಾರದಿಂದ ಇಳಿಸಿತು. ಈಶ್ವರಪ್ಪನವರಂತೆ ಸಂಘ ನಿಷ್ಠನ್ನನ್ನು ಕೂಡ ಅವಮಾನಿಸಿತು.

ದೇವೇಗೌಡರ ಪಕ್ಷದ ಲಿಂಗಾಯತ ನೀತಿ ಎಲ್ಲರಿಗೂ ತಿಳಿದಿದೆ. ಎಸ್.ಆರ್ ಬೊಮ್ಮಾಯಿ , ಜೆ ಹೆಚ್ ಪಟೇಲ್ ಸರ್ಕಾರಗಳ ಪತನ ಹೇಗಾಯಿತು, ಯಾರು ಇದಕ್ಕೆ ಕಾರಣ, ಯಡಿಯೂರಪ್ಪ ನವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಣೆ, ಎಲ್ಲರಿಗೂ ಗೊತ್ತಿರುವ ವಿಷಯ.

ಈ ರಾಜ್ಯದಲ್ಲಿ ಲಿಂಗಾಯತರನ್ನು ಓಲೈಸಿದರೆ ಸಾಕೇ. ಬೇರೆ ಸಮುದಾಯಗಳಿಲ್ಲವೇ. 197 ಸಣ್ಣ ಸಣ್ಣ ಜಾತಿಯವರಿದ್ದಾರೆ, ಹಿಂದುಳಿದ, ಅಲ್ಪಸಂಖ್ಯಾತರು ಶೇಕಡಾ 69 ರಷ್ಟು ಇದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶೇಕಡಾ 26 ಇದ್ದಾರೆ, ಈ ಎರಡೂ ಪಂಗಡಗಳಿಗೆ 51 ಕ್ಷೇತ್ರಗಳು ಮೀಸಲಿಡಲಾಗಿದೆ. ಹಾಗಾದರೆ, ಹಿಂದುಳಿದ, ದಲಿತ ವರ್ಗದವರು ಚುನಾವಣೆಯಲ್ಲಿ ಲೆಕ್ಕಕ್ಕೆ ಇಲ್ಲವೇ. ಇದು ಜನ ಸಾಮಾನ್ಯ ರನ್ನು ಕಾಡುತ್ತಿರುವ ಪ್ರಶ್ನೆ. ಭಾರತ ಜಾತ್ಯಾತೀತ ರಾಷ್ಟ. ಚುನಾವಣೆ ಬಂದಾಗ, ಜಾತಿಯದ್ದೇ ಮಾತು.

ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಚಗಳು ಸರ್ವೇ ಜನ ಸುಖಿನೊ ಭವಂತು ಎಂಬುದನ್ನು ಮರೆತೇ ಬಿಟ್ಟರೆ? ಧಾರ್ಮಿಕ ವಿಚಾರಗಳ ಅಧಾರದಲ್ಲಿ ಜಾತ್ಯಾತೀತ ರಾಷ್ಟದಲ್ಲಿ ಚುನಾವಣೆ ನಡೆದರೆ, ಬೇರೆ ಬೇರೆ ಸಣ್ಣ ಸಣ್ಣ ಸಮುದಾಯಗಳ ಹಿತ ರಕ್ಷಣೆಯನ್ನು ಯಾರು ಮಾಡುವರು. ಇದಕ್ಜೆ ಉತ್ತರ ಕಂಡುಕೊಳ್ಳಬೇಕಾದವರು ಮತದಾರ.

M.SIDDARAJU, SENIOR JOURNALIST

ಎಂ.ಸಿದ್ಧರಾಜು, 

ಹಿರಿಯ ಪತ್ರಕರ್ತರು

 ಬೆಂಗಳೂರು

 

 

 

Key words: Religion – election -weapon – Congress-BJP