Saturday, September 12, 2026

BDA Apartments

ಮೈಸೂರಲ್ಲಿ ಬಿಜೆಪಿ ಶಾಸಕ ರಾಮದಾಸ್ ವಿರುದ್ದ ವಿಪ್ರರ ವಿಪ್ಲವ..! BDA JK_Adv BDA Adv
Home Front Page ಮೈಸೂರಲ್ಲಿ ಬಿಜೆಪಿ ಶಾಸಕ ರಾಮದಾಸ್ ವಿರುದ್ದ ವಿಪ್ರರ ವಿಪ್ಲವ..!

ಮೈಸೂರಲ್ಲಿ ಬಿಜೆಪಿ ಶಾಸಕ ರಾಮದಾಸ್ ವಿರುದ್ದ ವಿಪ್ರರ ವಿಪ್ಲವ..!

ಮೈಸೂರು,ಫೆಬ್ರವರಿ,23,2023(www.justkannada.in):  ಮೈಸೂರಿನ ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಬ್ರಾಹ್ಮಣ ಸಮುದಾಯದ ಕೂಗು ಕೇಳಿ ಬಂದಿದ್ದು, ಹಲವು ಬಾರಿ ಗೆದ್ದು ಶಾಸಕರಾಗಿರುವ ಎಸ್.ಎ ರಾಮದಾಸ್ ಕೈ ಬಿಟ್ಟು ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ ಪ್ರಕಾಶ್ ಆಗ್ರಹಿಸಿದ್ದಾರೆ.

ಈ ಮೂಲಕ ಪರೋಕ್ಷವಾಗಿ ಮಾಜಿ ಮುಡಾ ಅಧ್ಯಕ್ಷ ಎಚ್.ವಿ ರಾಜೀವ್ ಅವರಿಗೆ ಟಿಕೆಟ್ ಕೊಡಿಸಲು ಬ್ರಾಹ್ಮಣ ಸಮುದಾಯ ಮುಂದಾಗಿದೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ ಪ್ರಕಾಶ್, ಕೆ.ಆರ್ ಕ್ಷೇತ್ರ ಅತೀ ಹೆಚ್ಚು ಬ್ರಾಹ್ಮಣ ಸಮುದಾಯವಿರುವ ಕ್ಷೇತ್ರ. ಇಲ್ಲಿ ನಾವೇ ನಿರ್ಣಾಯಕವಾಗಿದ್ದೇವೆ. ಕ್ಷೇತ್ರದಲ್ಲಿ ಸುಮಾರು 75 ಸಾವಿರ ಬ್ರಾಹ್ಮಣ ವೋಟುಗಳಿವೆ. ಇಲ್ಲಿ ಬಹುತೇಕ ಬ್ರಾಹ್ಮಣ ಅಭ್ಯರ್ಥಿಯೇ ಗೆದ್ದು ಬಂದಿದ್ದಾರೆ. ನಾವು ಅವರನ್ನ ಸಾಕಷ್ಟು ಬಾರಿ ಗೆಲ್ಲಿಸಿಕೊಟ್ಟಿದ್ದೇವೆ. ಜೊತೆಗೆ  ಕಳೆದ ಬಾರಿಯೂ ಕೂಡ ಅವರನ್ನೇ ಗೆಲ್ಲಿಸಿಕೊಟ್ಟಿದ್ದೇವೆ. ನಮ್ಮ ತನು, ಮನ, ಧನ ಎಲ್ಲವನ್ನ ಖರ್ಚು ಮಾಡಿ ಗೆಲ್ಲಿಸಿದ್ದೇವೆ. ನಮ್ಮ ನಿರೀಕ್ಷೆಯಂತೆ, ನಮ್ಮ ಸಮುದಾಯಕ್ಕೆ ಸಂಬಂಧಿಸಿದಂತೆ ಈಗಿನ ಶಾಸಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರು ಬೇರೆ ಬೇರೆ ಸಮುದಾಯಗಳಿಗೆ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನ ಕಡೆಗಣಿಸಿದ್ದಾರೆ ಎಂದು ಹಾಲಿ ಶಾಸಕ ಎಸ್.ಎ ರಾಮದಾಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಸಮುದಾಯದ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ. ನಮ್ಮ ಸಮುದಾಯಗಳಿಗೆ ಸರಿಯಾಗಿ ಸೌಲಭ್ಯಗಳನ್ನ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇಡಬ್ಲ್ಯೂಎಸ್ ಸರ್ಟಿಫಿಕೇಟ್ ಕೊಡಿಸುವಲ್ಲಿ ಸರಿಯಾಗಿ ಸ್ಪಂದಿಸಿಲ್ಲ.ನಾವು ಸಮಸ್ಯೆ ಈಡೇರಿಕೆಗೆ ಕಚೇರಿಗೆ ಹೋದಾಗ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ. ಹಾಗಾಗಿ ನಾವು ಬಿಜೆಪಿ ಹೈ ಕಮಾಂಡ್ ಅವರಿಗೆ ನಾವು ಮನವಿ ಮಾಡೋದು ಏನೆಂದರೆ ರಾಮದಾಸ್ ಅವರಿಗೆ  ಇನ್ನೊಂದು ಉನ್ನತ ಸ್ಥಾನ ಕೊಡಿ ಅವರಿಗೆ ಬೇಡ ಅನ್ನೋದಿಲ್ಲ. ಕೆ.ಆರ್ ಕ್ಷೇತ್ರಕ್ಕೆ ಮಾತ್ರ ಬೇರೊಬ್ಬ ಅಭ್ಯರ್ಥಿಯನ್ನ ಆಯ್ಕೆ ಮಾಡಿ. ಕೆ.ಆರ್ ಕ್ಷೇತ್ರಕ್ಕೆ ಅಭ್ಯರ್ಥಿ ಬದಲಾವಣೆ ಮಾಡಿ. ಒಬ್ಬ ಸೂಕ್ತ ಮತ್ತು ವಿಪ್ರ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂದು  ಪರೋಕ್ಷವಾಗಿ ಮುಡಾ ಅಧ್ಯಕ್ಷ ರಾಜೀವ್ ಪರ ಬ್ರಾಹ್ಮಣ ಸಂಘ ಬ್ಯಾಟ್ ಬೀಸಿದೆ.

ಈ ಬಾರಿ ಕೆ.ಆರ್ ಕ್ಷೇತ್ರಕ್ಕೆ ರಾಮದಾಸ್ ಬದಲಿಗೆ ರಾಜೀವ್ ಅವರಿಗೆ ಮಣೆ ಹಾಕಬೇಕು ಎಂದು ಹೈಕಮಾಂಡ್ ಗೆ ಸುದ್ದಿಗೋಷ್ಠಿ ಮೂಲಕ ಡಿಟಿ ಪ್ರಕಾಶ್ ಮನವಿ ಮಾಡಿದರು.

ಈ ಕುರಿತು ಮಾತನಾಡಿದ ಬ್ರಾಹ್ಮಣ ಸಮುದಾಯ ಮುಖಂಡ ರಘುರಾಮ್ ವಾಜಪೇಯಿ , ನಾವು ಕಳೆದ ಬಾರಿ ಬಹಳಷ್ಟು ಪ್ರಬಲ ಆಕಾಂಕ್ಷಿಗಳಿದ್ದರೂ ಎಲ್ಲರನ್ನೂ ಒಪ್ಪಿಸಿ. ರಾಮದಾಸ್ ಅವರನ್ನ ಅಂತಿಮವಾಗಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಮ್ಮ ಸಮುದಾಯದಿಂದ ಎಲ್ಲರನ್ನ ಒಪ್ಪಿಸಿ ನಿರ್ಧಾರ ಮಾಡಿದ್ದವು. ಅವರನ್ನ ನಾವು ಒಂದಲ್ಲ ಎರಡಲ್ಲ ಆರು ಬಾರಿ ನಿಲ್ಲಿಸಿ ನಾಲ್ಕು ಬಾರಿ ಗೆಲ್ಲಿಸಿದ್ದೇವೆ. ಎರಡು ಬಾರಿ ಪರಾಭವಗೊಂಡಿದ್ದಾರೆ ಇತ್ತೀಚಿಗೆ ಅವರಲ್ಲಿ ಕೆಲ ಬದಲಾವಣೆಗಳು ಕಂಡು ಬಂದಿದೆ. ನಮ್ಮ ಸಮುದಾಯದವರಿಗೆ ಯಾರಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿರಬಹುದು. ಆದರೆ,ಸಮುದಾಯ ದೃಷ್ಟಿಯಿಂದ ನಮ್ಮನ್ನ  ಕಡೆಗಣಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೊಬ್ಬ ವಿಪ್ರ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು. ಈಗಾಗಲೇ ನಾಲ್ಕೈದು ಜನ ಹೈಕಮಾಂಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ರಾಜೀವ್ ,ಶ್ರೀವತ್ಸ ಮೊದಲಾದವರಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲಿ. ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದಲ್ಲಿ ಬ್ರಾಹ್ಮಣ ಅಭ್ಯರ್ಥಿ ಕಣಕ್ಕಿಳಿದ್ರೆ ನಾವು ಸಂಘದ ಮುಖಂಡರ ಜೊತೆ ಚರ್ಚೆ ಮಾಡಿ ನಾವು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ರಾಮದಾಸ್ ಅವರನ್ನು ನಾವು ಡೇ ಒನ್ ಯಿಂದಲೂ ನೋಡುತ್ತಿದ್ದೇವೆ ಅವರು ಸರಿಯಾಗಿ ನಮ್ಮ ಕೆಲಸ ಕಾರ್ಯಗಳಿಗೆ ಸ್ಪಂದಿನೆ ನೀಡುತ್ತಿಲ್ಲ. ನಾವು ಸ್ವಾಭಿಮಾನಿ ಸಮುದಾಯದ ಜನ.  ಅವರು ರಾಜ್ಯದ ಅನುದಾನ ಕ್ಷೇತ್ರಕ್ಕೆ ತಂದು ಉತ್ತಮ ಕೆಲಸ ಮಾಡುತ್ತಿರಬಹುದು. ಆದರೆ,ಅವರು ಬ್ರಾಹ್ಮಣ ಸಮುದಾಯಕ್ಕೆ ಏನೂ ಕೆಲಸ ಮಾಡುತ್ತಿಲ್ಲ. ಹಾಗಾಗಿ ಈ ಬಾರಿ ಬಿಜೆಪಿಯಿಂದ ಬೇರೆ ಅಭ್ಯರ್ಥಿ ಕಣಕ್ಕಿಳಿಸಲು ನಾವು ಒತ್ತಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

Key words: Rebellion -against -BJP -MLA- Ramdas – Mysore.