ಗ್ರಾಮೀಣ ಬಸ್ ಪಾಸ್ ಸೇರಿದಂತೆ ಪತ್ರಕರ್ತರ ಬೇಡಿಕೆ ಶೀಘ್ರ ಈಡೇರಿಕೆ – ಸಿಎಂ ಬಸವರಾಜ ಬೊಮ್ಮಾಯಿ ಖಚಿತ ಭರವಸೆ.

ಬೆಂಗಳೂರು,ಫೆಬ್ರವರಿ,23,2023(www.justkannada.in):  ಇತ್ತೀಚೆಗೆ ವಿಜಯಪುರದಲ್ಲಿ ಜರುಗಿದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ನಾನು ನೀಡಿರುವ ಕಾರ್ಯನಿರತ ಪತ್ರಕರ್ತರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಕಟಿಬದ್ದನಾಗಿದ್ದು, ನನ್ನ ಈಗಿನ ಅಧಿಕಾರಾವಧಿಯೊಳಗೆ ಈಡೇರಿಸುವದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪುನರುಚ್ಚರಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ‌ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ನೇತೃತ್ವದಲ್ಲಿಂದು ಕಾರ್ಯ ನಿರತ ಪತ್ರಕರ್ತರ ನಿಯೋಗ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವೇಳೆ ಈ ಭರವಸೆ ನೀಡಿದರಲ್ಲದೆ, ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಗ್ರಾಮೀಣ ಪತ್ರಕರ್ತರಿಗೆ ಕೂಡಲೇ ಬಸ್ ಪಾಸ್ ಕೊಡಲು ಆದೇಶ ಹೊರಡಿಸುವುದಾಗಿ ತಿಳಿಸಿದರು.

ಕಾರ್ಯನಿರತ ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸುವುದು, ನಿವೃತ್ತ ಪತ್ರಕರ್ತರಿಗೆ ನೀಡಲಾಗುತ್ತಿರುವ ಮಾಸಾಶನವನ್ನು 10 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಹೆಚ್ಚಿಸುವದು, ಪತ್ರಕರ್ತರ ಕ್ಷೇಮಾಭಿವೃದ್ದಿಗೆ 100 ಕೋಟಿ ರೂಗಳನ್ನು ಮೀಸಲಿಡುವದು, ಪತ್ರಕರ್ತರ ಭವನಗಳು, ಕೆಯುಡಬ್ಲೂಜೆ ಅಡಿಯಲ್ಲಿ ನಿರ್ವಹಣೆಯಾಗುವಂತೆ ಪ್ರತ್ಯೇಕ ಆದೇಶ ಹೊರಡಿಸುವ  ಕಾರ್ಯನಿರತ ಪತ್ರಕರ್ತರ ಬಹುದಿನಗಳ ಈ ಪ್ರಮುಖ ಬೇಡಿಕೆಗಳನ್ನು ನನ್ನ ಅಧಿಕಾರ ಅವಧಿಯಲ್ಲೇ ಈಡೇರಿಸುವದಾಗಿ  ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನಿತರೆ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಅವುಗಳನ್ನೂ ಸಹ ಈಡೇರಿಸಲು ಕ್ರಮ ಜರುಗಿಸಲಾಗುವುದು ಎಂದರು.

Key words: CM- Basavaraja Bommai – demands – journalists – rural -bus pass – fulfilled