ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು- ಸಿಎಂ ಸಿದ್ದರಾಮಯ್ಯ.

ಮೈಸೂರು, ಸೆಪ್ಟೆಂಬರ್, 11,2023(www.justkannada.in):  ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಸಂವಿಧಾನದ ಪೀಠಿಕೆಯನ್ನು ಓದಿಸುವ  ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿಕೊಳ್ಳಬೇಕು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು  ಶ್ರೀ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ  ಹಾಗೂ  ಬಿಜಿಎಸ್ ಸಾಂಸ್ಕೃತಿಕ  ಭವನ ಉದ್ಘಾಟನೆ  ಮತ್ತು ಉಚಿತ ವಿದ್ಯಾರ್ಥಿ ನಿಲಯದ  ಲೋಕಾರ್ಪಣೆ ಮಾಡಿದ ನಂತರ  ಮಾತನಾಡಿದರು.

ನೂತನ ವಿದ್ಯಾರ್ಥಿನಿಲಯದಲ್ಲಿ 200 ಜನ ವಿದ್ಯಾರ್ಥಿಗಳಿಗೆ ಇಲ್ಲಿ ಓದಲು  ಅವಕಾಶ ಕಲ್ಪಿಸಲಾಗಿದ್ದು, ಇನ್ನಷ್ಟು ಭಾಗದಲ್ಲಿ ವಿದ್ಯಾರ್ಥಿನಿಲಯಗಳಿವೆ. ವಿದ್ಯೆ ನೀಡುವುದು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ. ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ದೊರೆತರೆ ಮಾತ್ರ ಜ್ಞಾನ ಬೆಳೆಯಲು, ಎಲ್ಲರೂ ಸ್ವಾಭಿಮಾನದಿಂದ ಬದುಕಲು ಸಾಧ್ಯ. ವಿದ್ಯೆ ಕಲಿಯದೇ ಹೋದರೆ ಯೋಚನಾಪರವಾಗಲು ಸ್ವಾಭಿಮಾನಿಗಳಾಗಲು, ಜ್ಞಾನಿಗಳಾಗಲು ಸಾಧ್ಯವಿಲ್ಲ. ಆದರೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ. ವೈಜ್ಞಾನಿಕ, ವೈಚಾರಿಕತೆಯನ್ನು ಬೆಳೆಸುವ ಶಿಕ್ಷಣ ಅಗತ್ಯ. ಮಾತನಾಡಲು ಓದು ಬರೆಯಲು ಕಲಿತರೆ ಅದು ವಿದ್ಯೆಯಲ್ಲ. ವಿದ್ಯೆ ಎಂದರೆ ನಮ್ಮ ಯೋಚನೆ, ನಿಲುವುಗಳು, ವೈಜ್ಞಾನಿಕವಾಗಿ, ವೈಚಾರಿಕವಾಗಿರಬೇಕು. ಆಗ ಮಾತ್ರ ವಿದ್ಯೆ ಕಲಿತದ್ದಕ್ಕೆ ಸಾರ್ಥಕವಾಗುತ್ತದೆ. ಎಂದರು.

ವಿದ್ಯೆ  ಕಲಿತು ಜಾತಿವಾದಿಗಳಾದರೆ ಪ್ರಯೋಜನವಿಲ್ಲ

ವಿದ್ಯೆ ಕಲಿತು ಜಾತ್ಯಾತೀತವಾಗಿ ಯೋಚಿಸುವುದನ್ನು ಬಿಟ್ಟು,  ಜಾತಿವಾದಿಗಳಾದರೆ ಏನು ಪ್ರಯೋಜನವಿಲ್ಲ ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ,  ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ನಾವೆಲ್ಲರೂ ಆಕಸ್ಮಿಕವಾಗಿ ಯಾವುದೋ ಜಾತಿ, ಧರ್ಮಗಳಲ್ಲಿ ಹುಟ್ಟಿರುತ್ತೇವೆ. ಹಾಗೆಂದು ನಾವು ಮನುಷ್ಯತ್ವವನ್ನು ಮರೆಯಲು ಸಾಧ್ಯವಿಲ್ಲ. ನಾವು ಹುಟ್ಟುತ್ತಾ ವಿಶ್ವಮನುಷ್ಯರಾಗಿರುತ್ತೇವೆ, ಬೆಳೆಯುತ್ತಾ ಸಮಾಜದ ಪ್ರಭಾವದಿಂದಾಗಿ ಅಲ್ಪಮಾನವರಾಗುತ್ತೇವೆ. ರಾಷ್ಟ್ರ ಕವಿ ಕುವೆಂಪು ಬಯಸಿದ್ದು ಎಲ್ಲರೂ ವಿಶ್ವ ಮಾನವರಾಗಬೇಕೆಂದು .  ಅವರ ಕನಸನ್ನು ನನಸು ಮಾಡಲು ವೈಚಾರಿಕತೆ, ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಧರ್ಮ ಅಂದರೆ ಬದುಕಿನ ಮಾರ್ಗ

ಕೆಲವರು ಮನುಷ್ಯ, ಮನುಷ್ಯರಲ್ಲಿ ಬೆಂಕಿ ಇಡುವ ಕೆಲಸ ಮಾಡುತ್ತಾರೆ. ಅದಕ್ಕೆ ಬಲಿಯಾಗದೆ, ಮನುಷ್ಯ, ಮನುಷ್ಯನನ್ನು ಪ್ರೀತಿಸಬೇಕು. ಧರ್ಮ ಅಂದರೆ ಬದುಕಿನ ಮಾರ್ಗ. ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯಾ ಎಂದಿದ್ದಾರೆ. ದಯೆ ಇಲ್ಲದ ಧರ್ಮ ಅದ್ಯಾವುದಯ್ಯ ಎಂದಿದ್ದಾರೆ. ಮನುಷ್ಯ, ಧರ್ಮವಿರುವುದು ಮನುಷ್ಯನ ಒಳಿತಿಗಾಗಿ, ಅವನ ಉತ್ತಮ ಬದುಕಿಗಾಗಿ. ಧರ್ಮಕ್ಕಾಗಿ ಮನುಷ್ಯ ಇಲ್ಲ. ಈ ಬಗ್ಗೆ ನಾವು ಸ್ಪಷ್ಟತೆ ಹೊಂದಬೇಕು. ಮನುಷ್ಯ ಮನುಷ್ಯನನ್ನು ದಯೆ, ಕರುಣೆಯಿಂದ ಕಾಣುವುದೇ ಧರ್ಮ. ಯಾವ ಧರ್ಮದಲ್ಲಿ ದಯೆ, ಪ್ರೀತಿ, ಕರುಣೆ ಇಲ್ಲವೋ , ಅದು ಧರ್ಮವಲ್ಲ. ಮನುಷ್ಯರಾಗಲು ಪ್ರಯತ್ನಿಸೋಣ. ಮಾನವಧರ್ಮ,ಮನುಷ್ಯ ಜಾತಿ, ಎಲ್ಲರಿಗೂ ಉತ್ತಮ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಸಮಾಜವಾಗಬೇಕು ಎನ್ನಲು ಶಿಕ್ಷಣ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನಿಸಿದ್ದು ನಮ್ಮ ಸರ್ಕಾರ

ಕೆಲವೇ ಧಾರ್ಮಿಕ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಕ್ಷೇತ್ರ ಕೂಡ ಬಹಳ ಪ್ರಸಿದ್ಧವಾದ ಕ್ಷೇತ್ರ.  ಆ ಜವಾಬ್ದಾರಿಯನ್ನು ಹೊತ್ತು ಧಾರ್ಮಿಕ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ನಿರ್ಮಲಾನಂದನಾಥ ಸ್ವಾಮಿಗಳು ಸಾಧನೆ ಮಾಡಿದ್ದಾರೆ. ನಮ್ಮ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನ ಮಾಡಿದ್ದು ಎಂದು ಸ್ಮರಿಸಿದ ಸಿಎಂ ಸಿದ್ಧರಾಮಯ್ಯ, ಕೆಂಪೇಗೌಡ ಪ್ರಾಧಿಕಾರವನ್ನು ಕೂಡ ನಮ್ಮ ಸರ್ಕಾರವೇ  ಸ್ಥಾಪಿಸಿತು. ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ಕೂಡ ನಮ್ಮ ಸರ್ಕಾರವೇ. ಕೆಂಪೇಗೌಡರ  ಹೆಸರು ಚಿರಸ್ಥಾಯಿ ಎಂಬ ಕಾರಣದಿಂದ ಕೆಂಪೇಗೌಡ  ಜಯಂತಿ ಆಚರಿಸಲು ತೀರ್ಮಾನ ಮಾಡಿದೆವು ಎಂದರು.

ಜನರ ಪ್ರೀತಿ, ವಿಶ್ವಾಸ ಗಳಿಸಿದವರು ಮಾತ್ರ ನಾಯಕರಾಗಲು ಸಾಧ್ಯ

ರಾಜಕಾರಣ  ಮಾಡಲು ಜನರ ಪ್ರೀತಿ, ,ಆಶೀರ್ವಾದ, ಇಲ್ಲದೇ ಹೋದರೆ ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜನರ ಪ್ರೀತಿ, ವಿಶ್ವಾಸ ಗಳಿಸಿದವರು ಮಾತ್ರ ನಾಯಕರಾಗಲು ಹಾಗೂ ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಶ್ರೀಮಠದಿಂದ ಮಾನವೀಯ ಸಮಾಜ ನಿರ್ಮಾಣ

ಆದಿಚುಂಚನಗಿರಿ 1800 ವರ್ಷಗಳ ಇತಿಹಾಸವಿರುವ ಪ್ರಾಚೀನವಾದ ಕ್ಷೇತ್ರ ವಾಗಿದ್ದು, ಈಶ್ವರನ ತಪೋಭೂಮಿ. ಅನೇಕ ಸಾಧುಸಂತರನ್ನು ಕಂಡಿರುವ ಆದಿಚುಂಚನಗಿರಿ ಕ್ಷೇತ್ರ ಹೆಮ್ಮರವಾಗಿ ಬೆಳವಣಿಗೆಯಾಗುವಲ್ಲಿ  ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪಾತ್ರ ಬಹಳ ದೊಡ್ಡದು.  ಸಾಮಾಜಿಕ, ಶಿಕ್ಷಣ, ಆರೋಗ್ಯ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಠ ವಿಶಾಲವಾಗಿ ಬೆಳೆದಿದೆ. ನಾಥ ಪಂಥ ಜಾತಿರಹಿತವಾದದ್ದು. ನಾವೆಲ್ಲ ಮೂಲತ: ಮನುಷ್ಯರು , ನಂತರ ವಿವಿಧ ಜಾತಿಗಳನ್ನು ಸೃಷ್ಟಿಸಿ ಸಮಾಜವನ್ನು ವಿಂಗಡಿಸಲಾಗಿದೆ. ಸಾಮಾಜಿಕ , ಆರ್ಥಿಕ ಅಸಮಾನತೆಯಿದ್ದು, ಮೇಲ್ವರ್ಗ ಮತ್ತು ಕೆಳವರ್ಗವೆಂಬ ಬೇಧಬಾವವಿದೆ. ಈ ಅಸಮಾನತೆಗಳನ್ನು ಹೋಗಲಾಡಿಸಿ, ಮಾನವೀಯ ಸಮಾಜವನ್ನು ನಿರ್ಮಿಸಲು ನಾಥಪಂಥ ಪ್ರಯತ್ನಿಸಿದಂತೆ ಆದಿಚುಂಚನಗಿರಿ ಮಠವೂ ಶ್ರಮಿಸಿದೆ ಎಂದರು.

ಎಲ್ಲರಿಗೂ ಶಿಕ್ಷಣದ ಹಕ್ಕು

ನಾನು ವಕೀಲವೃತ್ತಿಯಲ್ಲಿದ್ದಾಗ ಶ್ರೀ ಬಾಲಗಂಗಾಧರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದೆ. ಶ್ರೀ ಮಠವನ್ನು ಅಗಾಧವಾಗಿ ಬೆಳೆಸಲು ಶ್ರೀಗುರುಗಳು ಬಹಳ ಶ್ರಮವಹಿಸಿದ್ದಾರೆ. ಜನರನ್ನು ಧಾರ್ಮಿಕವಾಗಿ ಜಾಗೃತಗೊಳಿಸಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಶಕ್ತಿಯನ್ನು ತುಂಬಿದರು. 500ಕ್ಕೂ ಹೆಚ್ಚು ಸಂಸ್ಥೆಗಳನ್ನು ಸ್ಥಾಪಿಸಿ, 1.50 ಲಕ್ಷಕ್ಕೂ ಹೆಚ್ಚು ಮಕ್ಕಳು ಶ್ರೀಮಠದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಶೂದ್ರ ವರ್ಗ ಶಿಕ್ಷಣ ಸಂಸ್ಕೃತಿಯಿಂದ ವಂಚಿತವಾಗಿತ್ತು. ಡಾ. ಅಂಬೇಡ್ಕರ್ ರವರ ಸಂವಿಧಾನ ಸ್ಥಾಪಿತವಾದ ನಂತರ ಎಲ್ಲರಿಗೂ ಶಿಕ್ಷಣವನ್ನು ಕಡ್ಡಾಯಗೊಳಿಸಲಾಯಿತು. ಈಗ ಶಿಕ್ಷಣ ಪಡೆಯುವುದು ಹಕ್ಕು . ಶೂದ್ರರಂತೆ, ಮಹಿಳೆಯರನ್ನೂ ಶಿಕ್ಷಣದಿಂದ ದೂರ ಇರಿಸಲಾಗಿತ್ತು ಎಂದು ತಿಳಿಸಿದರು.

Key words: read – constitution – try – implement – CM- Siddaramaiah