ಮಕ್ಕಳ ಕೇಂದ್ರಗಳಲ್ಲಿ ಹುಟ್ಟುಹಬ್ಬಗಳ ಆಚರಣೆಗೆ ನಿಷೇಧ.

ಬೆಂಗಳೂರು, ಅಕ್ಟೋಬರ್ 19, 2021 (www.justkannada.in): ಮಕ್ಕಳ ಆರೈಕೆ ಕೇಂದ್ರಗಳು ಅಥವಾ ಅನಾಥಾಲಯಗಳಲ್ಲಿ ನೀವು ನಿಮ್ಮ ಮಕ್ಕಳ ಹುಟ್ಟಿದ ಹಬ್ಬದ ಆಚರಣೆ ಅಥವಾ ವಿವಾಹ ವಾರ್ಷಿಕೋತ್ಸವ ಸಮಾರಂಭಗಳಂತಹ ಕಾರ್ಯಕ್ರಮಗಳನ್ನು ಆಚರಿಸುವಾಗ ಅಲ್ಲಿರುವ ಮಕ್ಕಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ನಿಮಗೆ ಅಂದಾಜಿದೆಯೇ? ಅದರಿಂದ ಆ ಮಕ್ಕಳಿಗೆ ನಿಮ್ಮ ಬಳಿ ಇರುವಂತಹ ಸೌಕರ್ಯ ಅವರಿಗಿಲ್ಲವಲ್ಲ ಎನಿಸುತ್ತದೆ.

ಇಂತಹ ಕೇಂದ್ರಗಳಲ್ಲಿರುವ ಮಕ್ಕಳ ಪೈಕಿ ಅನೇಕರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿಲ್ಲ. ಅಂತಹ ಮಕ್ಕಳು ಅಲ್ಲಿನ ಕೇರ್‌ ಟೇಕರ್‌ಗಳಿಗೆ ತಮ್ಮ ಹುಟ್ಟಿದ ಹಬ್ಬದ ಆಚರಣೆ ಯಾವಾಗ ಬರುತ್ತದೆ ಎಂದು ಕೇಳುತ್ತಾರಂತೆ. ಎಷ್ಟು ದುಃಖದ ವಿಷಯವಲ್ಲವೇ?

ತಮ್ಮ ಹುಟ್ಟಿದ ಹಬ್ಬ, ವಿವಾಹ ವಾರ್ಷಿಕೋತ್ಸವದಂತಹ ದಿನಗಳನ್ನು ಮಕ್ಕಳ ಆರೈಕೆ ಕೇಂದ್ರಗಳು, ಅನಾಥಾಲಯಗಳಲ್ಲಿ ಆಚರಿಸಿಕೊಂಡು, ಅಲ್ಲಿರುವ ಮಕ್ಕಳಿಗೆ ಉಡುಗೊರೆಗಳನ್ನು ನೀಡುವುದು, ಅವರೊಂದಿಗೆ ಚಿತ್ರಗಳನ್ನು ತೆಗೆಸಿಕೊಳ್ಳುವುದು, ಕೇಕ್‌ ಗಳನ್ನು ಕತ್ತರಿಸುವುದು ಹಾಗೂ ಅವರೊಂದಿಗೆ ಸೇರಿ ಆಹಾರ ಸೇವಿಸುವಂತಹ ಆಚರಣೆಗಳಿಂದ ಅಲ್ಲಿನ ಮಕ್ಕಳಿಗೆ ಸಂತೋಷವಾಗುತ್ತದೆ, ಹೀಗೆ ಮಾಡುವುದರಿಂದ ಅಂತಹ ಅನಾಥ ಮಕ್ಕಳ ಬಾಳಿನಲ್ಲಿ ನೀವು ಸಂತೋಷದ ಕ್ಷಣಗಳಿಗೆ ಕಾರಣರಾಗುತ್ತೀರಿ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಆದರೆ ವಾಸ್ತವವೇ ಬೇರೆ. ಇಂತಹ ಆಚರಣೆಗಳಿಂದಾಗಿ ಅಲ್ಲಿನ ಮಕ್ಕಳಲ್ಲಿ ತಾವು ಎಲ್ಲಾ ಅನುಕೂಲಗಳಿರುವ ಮಕ್ಕಳಿಗಿಂತ ಭಿನ್ನ ಅನಿಸುತ್ತದೆ.

ಈ ಕುರಿತು ಗಮನ ಹರಿಸಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಕ್ಕಳ ಆರೈಕೆ ಕೇಂದ್ರಗಳು ಹಾಗೂ ಅನಾಥಾಲಯಗಳಲ್ಲಿ ಇಂತಹ ಸಮಾರಂಭ, ಅಚರಣೆಗಳನ್ನು ನಿಷೇಧಿಸಿದೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಐಸಿಡಿಎಸ್) ನಿರ್ದೇಶಕಿ ಪಲ್ಲವಿ ಆಕೃತಿ, ಭಾ.ಆ.ಸೇ. ಅವರ ಪ್ರಕಾರ ಇಂತಹ ಕೇಂದ್ರಗಳಲ್ಲಿರುವ ಮಕ್ಕಳಿಗೆ ತಾವು ಬೇರೆಯವರು ನೀಡುತ್ತಿರುವ ದಾನದ ಹಣದಲ್ಲಿ ಬದುಕುತ್ತಿದ್ದೇವೆ ಎಂಬ ಭಾವನೆಯನ್ನು ಸೃಷ್ಟಿಸುವುದು ಸರಿಯಲ್ಲ. ಅದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಆಚರಣೆಗಳಿಂದ ಮಕ್ಕಳು ತಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಆರಂಭಿಸುತ್ತಾರೆ,” ಎಂದು ವಿವರಿಸಿದರು.

“ನಾನೂ ಕೂಡ ಒಬ್ಬ ತಾಯಿ. ಮಕ್ಕಳು ಇತರೆ ಮಕ್ಕಳೊಂದಿಗೆ ಯಾವ ರೀತಿ ಹೋಲಿಕೆ ಮಾಡಿಕೊಂಡು, ತಮ್ಮ ಬಳಿ ಅಂತಹ ಸೌಕರ್ಯಗಳಿಲ್ಲ, ಅಥವಾ ಅಂತಹ ಸೌಕರ್ಯಗಳನ್ನು ಪಡೆಯುವಷ್ಟು ಅನುಕೂಲಸ್ಥರಲ್ಲ ಎಂದು ತಿಳಿದು ಸಂಕಟ ಪಡುತ್ತಾರೆ ಎಂದು ನಾನು ಗಮನಿಸಿದ್ದೇನೆ. ಎಲ್ಲಾ ಮಕ್ಕಳ ಆರೈಕೆ ಕೇಂದ್ರಗಳಲ್ಲಿಯೂ ನಾವು ಪ್ರತಿ ತಿಂಗಳು ಹುಟ್ಟಿದ ಹಬ್ಬಗಳನ್ನು ಆಚರಿಸುತ್ತೇವೆ. ಆದರೆ ಅಲ್ಲಿರುವ ಮಕ್ಕಳು ಇತರೆ ಮಕ್ಕಳು ವೈಯಕ್ತಿಕವಾಗಿ ಹುಟ್ಟಿದ ಹಬ್ಬವನ್ನು ಆಚರಿಸುತ್ತಿರುವುದನ್ನು ನೋಡಿದಾಗ ಬಹಳ ನೊಂದುಕೊಳ್ಳತ್ತಾರೆ. ಹುಟ್ಟಿದ ಹಬ್ಬದ ಆಚರಣೆ ಮಕ್ಕಳಿಗೆ ಬಹಳ ಸೂಕ್ಷ್ಮವಾದ ವಿಚಾರ. ಹಾಗಾಗಿ, ಹೊರಗಿನವರು ಅಲ್ಲಿಗೆ ಬಂದು ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವಾಗ ಪ್ರಶ್ನಿಸುವುದು ಸಹಜ,” ಎನ್ನುತ್ತಾರೆ ಆಕೃತಿ.

ಅನೇಕ ಸೆಲಿಬ್ರಿಟಿಗಳು ಹಾಗೂ ರಾಜಕಾರಣಿಗಳು ತಮ್ಮ ಹುಟ್ಟುಹಬ್ಬಗಳನ್ನು ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಆಚರಿಸಿಕೊಳ್ಳುವುದನ್ನು ಗಮನಿಸಿದ್ದೇವೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ಇಂತಹ ಆಚರಣೆಗಳು ನಡೆದಿವೆ: “ಅನೇಕರು ಕೇವಲ ಇಂತಹ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿಸಿ, ಅಷ್ಟಕ್ಕೇ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ ಲೋಡ್ ಮಾಡಿ ತೋರಿಸಿಕೊಳ್ಳುತ್ತಾರೆ. ಆದರೆ ಮಕ್ಕಳೊಂದಿಗೆ ಚಿತ್ರಗಳನ್ನು ತೆಗೆಯುವುದು ಅಥವಾ ಅವುಗಳನ್ನು ಆ ರೀತಿ ಪ್ರಸಾರ ಮಾಡುವಂತಿಲ್ಲ. ಸರ್ಕಾರಿ ಸ್ವಾಮ್ಯದ ಅಥವಾ ಸರ್ಕಾರೇತರ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಯಾವುದೇ ಸಮಾರಂಭಗಳ ಆಚರಣೆ ಅಥವಾ ಮಕ್ಕಳಿಗೆ ಹೊರಗಿನಿಂದ ಆಹಾರವನ್ನು ತಂದುಕೊಡುವುದನ್ನು ನಿಷೇಧಿಸಲಾಗಿದೆ. ಆಸಕ್ತಿ ಇರುವವರು ಅಂತಹ ಕೇಂದ್ರಗಳಿಗೆ ಯಾವುದೇ ಪ್ರಚಾರವನ್ನು ಬಯಸದೆ, ಹಣ ಅಥವಾ ಮತ್ಯಾವುದಾದರೂ ರೂಪದಲ್ಲಿ ದಾನಗಳನ್ನು ನೀಡಬಹುದು. ಮಕ್ಕಳಿಗೆ ತಾವು ಇತರರ ದಾನದಿಂದ ಬದುಕುತ್ತಿದ್ದೇವೆ ಎಂಬ ಭಾವನೆ ಬರುವಂತೆ ನಡೆದುಕೊಳ್ಳುವಂತಿಲ್ಲ,” ಎಂದು ವಿವರಿಸಿದರು.

ಈ ಸಂಬಂಧ ಮಾತನಾಡಿದ ಚೈಲ್ಡ್ ರೈಟ್ಸ್ ಟ್ರಸ್ಟ್ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ. ರಾವ್ ಅವರು ಎಲ್ಲಾ ಸರ್ಕಾರೇತರ ಸಂಸ್ಥೆಗಳು ಹಾಗೂ ಮಕ್ಕಳ ಆರೈಕೆ ಕೇಂದ್ರಗಳು ತಮ್ಮ ತಮ್ಮ ಕೇಂದ್ರಗಳ ಆವರಣದೊಳಗೆ ಇಂತಹ ವೈಯಕ್ತಿಕ ಸಮಾರಂಭಗಳ ಆಚರಣೆಗೆ ಅವಕಾಶ ನೀಡಬಾರದು. “ನಾನು ಮಕ್ಕಳ ಆರೈಕೆ ಕೇಂದ್ರಗಳಲ್ಲಿ ವಾಸಿಸುತ್ತಿರುವ ಅನೇಕ ಮಕ್ಕಳನ್ನು ಮಾತನಾಡಿಸಿದ್ದೇನೆ. ಆಗ ಅವರು ತಮ್ಮ ಹುಟ್ಟಿದ ಹಬ್ಬ ಆಚರಣೆ ಯಾವಾಗ ಎಂದು ಕೇಳುತ್ತಾರೆ. ತಮ್ಮ ಜೀವನದಲ್ಲಿ ಸಂಭವಿಸಿರುವ ದುಃಖದ ಘಟನೆಯನ್ನು ತಿಳಿದು ಸಂಕಟ ಪಡುತ್ತಾರೆ ಹಾಗೂ ಒಂದು ವೇಳೆ ತಮ್ಮ ಅಪ್ಪ-ಅಮ್ಮಂದಿರು ಬದುಕಿದಿದ್ದರೆ ಅಥವಾ ತಮ್ಮನ್ನು ಬಿಟ್ಟು ಹೋಗಿರದಿದ್ದರೆ ತಾವೂ ಸಹ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಬಹುದಿತ್ತು ಎಂದು ಹೇಳಿ ನೋವನ್ನು ಅನುಭವಿಸುತ್ತಾರೆ. ಅಂತಹ ಕೇಂದ್ರಗಳಲ್ಲಿರುವ ಬಹುಪಾಲು ಮಕ್ಕಳು ಸಹಜವಾಗಿಯೇ ಈ ರೀತಿಯ ಹಿನ್ನೆಲೆಯುಳ್ಳವರೇ ಆಗಿರುತ್ತಾರೆ. ಭಿಕ್ಷೆ ಬೇಡುತ್ತಿರುವಾಗ ಅಥವಾ ಕುಟುಂಬಸ್ಥರಿಂದ ನಿಂದನೆಗೆ ಒಳಗಾಗಿರುವ ಸಂದರ್ಭಗಳಲ್ಲಿ ರಕ್ಷಿಸಲ್ಪಟ್ಟವರಾಗಿರುತ್ತಾರೆ. ಜನರು ಹುಟ್ಟಿದ ಹಬ್ಬ ಅಥವಾ ವಾರ್ಷಿಕೋತ್ಸವಗಳನ್ನು ಆಚರಿಸಿಕೊಂಡ ನಂತರ ಮಕ್ಕಳಿಗೆ ಉಪಯೋಗಿಸಿರುವ ಬಟ್ಟೆಗಳು ಹಾಗೂ ಆಟಿಕೆಗಳನ್ನು ನೀಡುತ್ತಾರೆ, ಅದರಿಂದ ಮಕ್ಕಳಿಗೆ ಸಂತೋಷವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ತಮ್ಮೊಂದಿಗೆ ಅಲ್ಲಿಗೆ ಬಂದು ಹುಟ್ಟಿದ ಹಬ್ಬ ಆಚರಿಸಿಕೊಂಡ ಮಗು ಹೊಸ ಬಟ್ಟೆಗಳನ್ನು ಧರಿಸಿರುವುದನ್ನು ನೋಡಿದಾಗ ಮತ್ತು ತಮಗೆ ಹಳೆಯ ಬಟ್ಟೆಗಳನ್ನು ನೀಡಿದಾಗ ಅಲ್ಲಿರುವ ಮಕ್ಕಳಿಗೆ ನೋವಾಗುತ್ತದೆ,” ಎಂದು ವಿವರಿಸಿದರು.

ವಿಶ್ವ ಸಂಸ್ಥೆಯ ಮಕ್ಕಳ ಒಡಂಬಡಿಕೆಯ ಪರಿಚ್ಛೇದ ೨೭ರ ಪ್ರಕಾರ ಮಕ್ಕಳಿಗೆ ಯಾರೂ ಸಹ ಉಳಿದ ಆಹಾರ ಅಥವಾ ಬಳಸಿದ ವಸ್ತುಗಳನ್ನು ನೀಡುವಂತಿಲ್ಲ. ಏಕೆಂದರೆ ಎಲ್ಲಾ ಮಕ್ಕಳಿಗೂ ಉತ್ತಮ ಜೀವಿಸುವ ಹಕ್ಕಿದೆ. “ಇಂತಹ ಆಚರಣೆಗಳಿಂದ ಅಲ್ಲಿರುವ ಮಕ್ಕಳಿಗೆ ಇತರೆ ಮಕ್ಕಳ ಬಳಿ ಇರುವ ಸೌಕರ್ಯ, ಸೌಲಭ್ಯಗಳು ತಮ್ಮ ಬಳಿ ಇಲ್ಲ ಎಂಬ ಚಿಂತೆ ಸದಾ ಕಾಡುತ್ತಿರುತ್ತದೆ ಮತ್ತು ತಾವು ಈ ಸಮಾಜದಲ್ಲಿ ಬಾಳಲು ಅರ್ನಹರು ಎಂಬ ಭಾವನೆ ಸೃಷ್ಟಿಸುತ್ತದೆ,” ಎಂದರು.

ಬೆಂಗಳೂರು ಗ್ರಾಮಾಂತರ ವಿಭಾಗದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹೆಚ್. ರಾಮು ಜೋಗಿಹಳ್ಳಿ ಅವರು ಮಾತನಾಡಿ, “ಅನೇಕ ಸ್ಥಳೀಯ ನಾಯಕರು ಮಕ್ಕಳ ಆರೈಕೆ ಕೇಂದ್ರಕ್ಕೆ ಅವರ ಮಕ್ಕಳ ಹುಟ್ಟಿದ ಹಬ್ಬ ಆಚರಿಸಲು ಸಂಪರ್ಕಿಸಿದ್ದರು. ಆದರೆ ಇಲ್ಲಿರುವ ಮಕ್ಕಳು ತಾವು ಸಹ ಶ್ರೀಮಂತರಾಗಿದ್ದರೆ ಇತರರಂತೆ ಹುಟ್ಟಿದ ಹಬ್ಬಗಳನ್ನು ಆಚರಿಸಿಕೊಳ್ಳಬಹುದಿತ್ತು ಎನ್ನುವುದನ್ನು ನಾನು ಕೇಳಿಸಿಕೊಂಡಿದ್ದೇನೆ. ಮಕ್ಕಳು ಕೇಕ್ ಕತ್ತರಿಸುವುದು ಹಾಗೂ ಉಡುಗೊರೆಗಳು ಹಾಗೂ ಆಹಾರವನ್ನು ನೀಡುವುದನ್ನು ನೋಡಿದಾಗ ಮಕ್ಕಳು ತಮ್ಮ ಹುಟ್ಟಿದ ಹಬ್ಬವನ್ನೂ ಸಹ ಅದೇ ರೀತಿ ಆಚರಿಸಲಾಗುವುದೇ ಎಂದು ನಮ್ಮನ್ನು ಕೇಳುತ್ತಾರೆ. ನಾವು ಅವರನ್ನು ಸಂತೋಷಪಡಿಸಲು, ಬೇಸರವಾಗದೇ ಇರಲಿ ಎಂಬ ಉದ್ದೇಶದಿಂದ ಎರಡು ಮೂರು ಮಕ್ಕಳ ಹುಟ್ಟಿದ ಹಬ್ಬಗಳನ್ನು ಜೊತೆಯಾಗಿ ಆಚರಿಸಿದೆವು. ಮಕ್ಕಳೊಂದಿಗೆ ಆಚರಣೆಯ ಚಿತ್ರಗಳನ್ನು ತೆಗೆದುಕೊಳ್ಳಬೇಡಿ ಎಂದು ನಾವು ಜನರಿಗೆ ಹೇಳಿದರೂ ಸಹ ಕೇಳುವುದಿಲ್ಲ. ಜೊತೆಗೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಇದರಿಂದ ಇಲ್ಲಿರುವ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ,” ಎನ್ನುತ್ತಾರೆ ಜೋಗಿಹಳ್ಳಿ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Prohibition – celebrating- birthdays -children’s centers.