ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಎಸ್.ಎನ್ ಹೆಗ್ಡೆ ಇನ್ನಿಲ್ಲ

ಮೈಸೂರು,ಡಿಸೆಂಬರ್,17,2025 (www.justkannada.in):  ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಎಸ್.ಎನ್ ಹೆಗ್ಡೆ(83) ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.

ಪ್ರೊ. ಎಸ್. ಎನ್ ಹೆಗ್ಡೆ  ಅವರು ಎರಡು ಅವಧಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. 1997ರಿಂದ 2003ರವರೆಗೆ ಮೈಸೂರು ವಿವಿ ಕುಲಪತಿಯಾಗಿದ್ದರು. ಎಸ್.ಎನ್ ಹೆಗ್ಡೆ ಅವರು  ಪ್ರಾಣಿಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.

ಕಳೆದ 6 ತಿಂಗಳ ಹಿಂದೆ ಪ್ರೊ.ಎಸ್.ಎನ್ ಹೆಗ್ಡೆ ಅವರ ಪತ್ನಿ ನಿಧನರಾಗಿದ್ದು, ಕುಟಂಬದ ಜೊತೆ  ವಿಜಯನಗರದಲ್ಲಿ ವಾಸವಿದ್ದರು. ಮೃತ ಪ್ರೊ.ಎಸ್.ಎನ್ ಹೆಗ್ಡೆ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು  ಒಬ್ಬರು ಮೈಸೂರಿನಲ್ಲಿ, ಇನ್ನೊಬ್ಬರು ಅಮೇರಿಕದಲ್ಲಿದ್ದಾರೆ.

ಈ ಮಧ್ಯೆ ನಿನ್ನೆ ಬೆಳಿಗ್ಗೆ ಮನೆಯಲ್ಲಿ ಅಧಿಕ ರಕ್ತದೊತ್ತಡದಿಂದ ಎಸ್.ಎನ್ ಹೆಗ್ಡೆ ಅವರು ಕುಸಿದು ಬಿದ್ದಿದ್ದು ತಕ್ಷಣವೇ ಅವರನ್ನ ವಿಜಯನಗರದ ನಿವಾಸದ ಸಮೀಪ  ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಬಹು ಅಂಗಾಗ ವೈಪಲ್ಯ ಅನುಭವಿಸಿದ್ದರು. ಹೀಗಾಗಿ ಅವರನ್ನು  ಐಸಿಯುನಲ್ಲಿಟ್ಟು ಚಿಕಿತ್ಸೆಗೆ ಪ್ರಯತ್ನಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಎಸ್.ಎನ್ ಹೆಗ್ಡೆ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ ಅಥವಾ ನಾಡಿದ್ದು ಮೈಸೂರಿನಲ್ಲಿ ನೆರವೇರಲಿದೆ. ಎಸ್ ಎನ್ ಹೆಗ್ಡೆ ಮೊಮ್ಮಗ  ಮತ್ತು ಪುತ್ರಿ ವಿದೇಶದಲ್ಲಿರುವ ಕಾರಣ  ಅವರ ಆಗಮನದ ಬಳಿಕ ಅಂತ್ಯಕ್ರಿಯೆ ನೆರವೇರಿಲಿದೆ ಎಂದು  ಎಸ್.ಎನ್ ಹೆಗ್ಡೆ ಅವರಿಗೆ ಆಪ್ತರಾಗಿರುವ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ‘ಜಸ್ಟ್ ಕನ್ನಡ’ಗೆ ತಿಳಿಸಿದರು.

 ಸಂತಾಪ

ಮೈಸೂರು ವಿವಿ  ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್ ಹೆಗ್ಡೆ ಅವರ  ನಿಧನಕ್ಕೆ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್  ರಂಗಪ್ಪ ಸಂತಾಪ ಸೂಚಿಸಿದ್ದಾರೆ.  ಪ್ರೊ. ಎಸ್.ಎನ್ ಹೆಗ್ಡೆ ಅವರು ಕುಲಪತಿ ಅವಧಿಯಲ್ಲಿ ಮೈಸೂರು ವಿವಿಯ ಶೈಕ್ಷಣಿಕ ಹಾಗೂ ಮೂಲ ಸೌಕರ್ಯ ಅಭಿವೃದ್ದಿಗೆ ಹೆಚ್ಚಿನ  ಒತ್ತು ನಿಡಿದ್ದರು. ವಿಜ್ಞಾನ ವಿಭಾಗದ ಹಿನ್ನೆಲೆಯಾಗಿದ್ದರಿಂದ ಕುಲಪತಿ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆಗೂ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ  ವಿಜ್ಞಾನದ ಅಭಿವೃದ್ದಿಗೆ ಒತ್ತು ನೀಡಿದ್ದರು.  ನನ್ನ ಗುರು ಸಮಾನರಾಗಿದ್ದ ಎಸ್. ಎನ್ ಹೆಗ್ಡೆ ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಪ್ರೊ. ರಂಗಪ್ಪ ಕಂಬನಿ ನುಡಿದಿದ್ದಾರೆ.

ಇನ್ನು ಎಸ್.ಎನ್ ಹೆಗ್ಡೆ ಅವರ ನಿಧನಕ್ಕೆ ಮತ್ತೋರ್ವ ವಿಶ್ರಾಂತ ಕುಲಪತಿ ಹೇಮಂತ್ ಕುಮಾರ್ ಕೂಡ ಸಂತಾಪ ಸೂಚಿಸಿದ್ದಾರೆ.

ಪ್ರೊ. ಎಸ್.ಎನ್. ಹೆಗಡೆ ಅವರ ನಿಧನಕ್ಕೆ ಎಚ್. ಎ. ವೆಂಕಟೇಶ್ ಸಂತಾಪ

ಮೈಸೂರು ವಿವಿ  ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್ ಹೆಗ್ಡೆ ಅವರ  ನಿಧನಕ್ಕೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಸಂತಾಪ ಸೂಚಿಸಿದ್ದಾರೆ.

ಪ್ರೊ. ಎಸ್. ಎನ್. ಹೆಗಡೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಪ್ರಾಧ್ಯಾಪಕರಾಗಿ ಹಾಗೂ ಸಂಶೋಧಕರಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿ ಹಲವಾರು ವಿದ್ಯಾರ್ಥಿಗಳ ಭವಿಷ್ಯ ನಿರೂಪಿಸಲು ಕರಣಿಭೂತರಾಗಿದ್ದರು.

ವಿಶ್ವವಿದ್ಯಾನಿಲಯದ ಕಾಯ್ದೆ ಬಗ್ಗೆ ಖಚಿತವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಸಾರ್ವಜನಿಕ ವೇದಿಕೆಗಳಲ್ಲೂ ಉತ್ತಮ ವಾಗ್ಮಿಗಳಾಗಿ ಗಮನ ಸೆಳೆಯುತ್ತಿದ್ದರು. ಪ್ರೊ. ಹೆಗ್ಡೆಯವರು ಕುಲಪತಿಗಳಾಗಿದ್ದಾಗ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೆ.ನಿಧನದಿಂದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಚ್. ಎ. ವೆಂಕಟೇಶ್ ಕಂಬನಿ ಮಿಡಿದಿದ್ದಾರೆ.

Key words: Mysore University, Retired, VC, Prof. SN Hegde, no more