ಕ್ರೀಡಾಪಟು ಪ್ರಿಯಾ ಮೋಹನ್ ಅವರಿಗೆ 5 ಲಕ್ಷ ನಗದು ಪುರಸ್ಕಾರ: ಸಚಿವ ಅಶ್ವಥ್ ನಾರಾಯಣ್ ಅಭಿನಂದನೆ.

ಬೆಂಗಳೂರು.ಸೆಪ್ಟಂಬರ್,3,2021(www.justkannada.in):  ಇತ್ತೀಚೆಗೆ ಕೀನ್ಯಾದ ನೈರೋಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ವಿಶ್ವ U20 ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿ ಕಂಚಿನ ಪದಕ ಗೆದ್ದ ಪ್ರಿಯಾ ಎಚ್.ಮೋಹನ್ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗೌರವಿಸಿ ಅಭಿನಂದಿಸಿದರು.

ಇದೇ ವೇಳೆ ಉದ್ಯಮಿ ಹಾಗೂ ಶಿಕ್ಷಣ ತಜ್ಞ ದಯಾನಂದ ಪೈ ಅವರು ಪ್ರಿಯಾ ಅವರಿಗೆ 5 ಲಕ್ಷ ರೂ.ಗಳ ಚೆಕ್ ಅನ್ನು ನೀಡಿ ಪುರಸ್ಕರಿಸಿದರು. ಈ ಕ್ರೀಡಾಕೂಟದಲ್ಲಿ 4×400 ಮೀಟರ್ ಮಿಶ್ರ ರಿಲೆಯಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದ ಪ್ರಿಯಾ ಅವರು, 400 ಮೀಟರ್ ವೈಯಕ್ತಿಕ ಓಟ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಸಂಬಂಧ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮೌಂಟ್ ಕಾರ್ಮೆಲ್ ಕಾಲೇಜು ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಿಯಾ ಅವರನ್ನು ಸಚಿವರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಪ್ರಿಯಾ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಅಶ್ವಥ್ ನಾರಾಯಣ್ , ಕ್ರೀಡೆಗೆ ಈಗ ಹೆಚ್ಚು ಪ್ರೋತ್ಸಾಹ, ಉತ್ತೇಜನ ಸಿಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡುತ್ತಿವೆ. ಒಲಿಂಪಿಕ್, ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತೀಯ ಸ್ಫರ್ಧಿಗಳು ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಕ್ರೀಡೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದರು.

Key words: Priya Mohan- receives -Rs 5 lakh –cash- prize-Congratulations – Minister -Ashwath Narayan.