ಖಾಸಗಿ ಫೋಟೋ-ವೀಡಿಯೊ ಪ್ರಸಾರ ಅಪರಾಧ: ಪೊಲೀಸರಿಗೆ ಡಿಜಿಪಿ ಹೊಸ ಮಾರ್ಗಸೂಚಿ

ಬೆಂಗಳೂರು, ಜೂನ್,16,2026 (www.justkannada.in):  ಡಿಜಿಟಲ್ ಯುಗದಲ್ಲಿ ವ್ಯಕ್ತಿಗಳ ಗೌಪ್ಯತೆಯ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿ ಮಹತ್ವದ ಸ್ಥಾಯಿ ಆದೇಶ ಹೊರಡಿಸಿದೆ.

ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದನ್ನು ಗಂಭೀರ ಅಪರಾಧವೆಂದು ಪರಿಗಣಿಸಿ, ಇಂತಹ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಸ್ಪಷ್ಟ ಮಾರ್ಗಸೂಚಿಗಳನ್ನು ಆದೇಶದಲ್ಲಿ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಚಿತ್ರ-ವೀಡಿಯೊಗಳ ದುರ್ಬಳಕೆ, ರಿವೆಂಜ್ ಪೋರ್ನೋಗ್ರಫಿ, ಸೆಕ್ಸ್ಟೋರ್ಷನ್ ಹಾಗೂ ಬ್ಲಾಕ್‌ ಮೇಲ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಕೆಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ವಿಳಂಬವಾಗುವುದು ಅಥವಾ ನಿರಾಕರಿಸುವುದು ಕಂಡುಬಂದ ಹಿನ್ನೆಲೆಯಲ್ಲಿ, “ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ” ಎಂಬ ಕಾನೂನುಸ್ಥಿತಿಯನ್ನು ಡಿಜಿಪಿ ಕಚೇರಿ ಸ್ಪಷ್ಟಪಡಿಸಿದೆ.

ಆದೇಶದ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಫೋಟೋ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನು ಇತರರಿಗೆ ಹಂಚಲು ಅಥವಾ ಸಾರ್ವಜನಿಕವಾಗಿ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅಂತಹ ಪ್ರಸಾರ ಕಾನೂನುಬದ್ಧ ಅಪರಾಧವಾಗುತ್ತದೆ. ಈ ಕಾರಣದಿಂದ ಪೀಡಿತರು ನೀಡುವ ದೂರುಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದು ಎಂದು ಸೂಚಿಸಲಾಗಿದೆ.

ಪ್ರಕರಣಗಳ ಸ್ವರೂಪಕ್ಕೆ ಅನುಗುಣವಾಗಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 77 (Voyeurism) ಸೇರಿದಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 66(E), 67 ಮತ್ತು 67(A) ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಆದೇಶಿಸಲಾಗಿದೆ. ಮಹಿಳೆಯರು ಸಂತ್ರಸ್ತರಾಗಿರುವ ಪ್ರಕರಣಗಳಲ್ಲಿ ವಾಯರಿಸಂ ಹಾಗೂ ಐಟಿ ಕಾಯ್ದೆಯ ಅನ್ವಯವಾಗುವ ವಿಧಿಗಳನ್ನು ಸೇರಿಸಿ ಕಡ್ಡಾಯವಾಗಿ ಎಫ್‌ ಐಆರ್ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

“ರಿವೆಂಜ್ ಪೋರ್ನ್”, “ಸೆಕ್ಸ್ಟೋ ರ್ಷನ್”, “ಬ್ಲಾಕ್‌ಮೇಲ್ ವೀಡಿಯೊ”ಗಳಂತಹ ಪ್ರಕರಣಗಳಲ್ಲಿ ತಕ್ಷಣವೇ ಎಫ್‌ ಐಆರ್ ದಾಖಲಿಸಬೇಕು. ಸಂತ್ರಸ್ತರು ಹಿಂದೆ ಸ್ವಯಂಪ್ರೇರಿತವಾಗಿ ಚಿತ್ರ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣವನ್ನು ಮುಂದಿಟ್ಟು ದೂರು ಸ್ವೀಕರಿಸಲು ನಿರಾಕರಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಪರಾಧ ಬೇರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರೂ, ದೂರುದಾರರು ಬಂದ ಠಾಣೆಯಲ್ಲಿ ಜೀರೋ ಎಫ್‌ ಐಆರ್ ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು. ಜೊತೆಗೆ, ಸಾಮಾಜಿಕ ಜಾಲತಾಣಗಳು ಅಥವಾ ಡಿಜಿಟಲ್ ವೇದಿಕೆಗಳಲ್ಲಿ ಹರಡಿರುವ ಅಕ್ರಮ ವಿಷಯವನ್ನು ತಕ್ಷಣ ತೆಗೆದುಹಾಕಲು ಸಂಬಂಧಿತ ಕಂಪನಿಗಳು ಮತ್ತು ವೇದಿಕೆಗಳಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಲಾಗಿದೆ.

ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಿ ಸಂರಕ್ಷಿಸುವುದು, ಸೈಬರ್ ಕ್ರೈಂ ಘಟಕಗಳ ಸಹಕಾರದೊಂದಿಗೆ ತಾಂತ್ರಿಕ ತನಿಖೆ ಮತ್ತು ಫೋರೆನ್ಸಿಕ್ ವಿಶ್ಲೇಷಣೆ ನಡೆಸುವುದು ತನಿಖಾಧಿಕಾರಿಗಳ ಜವಾಬ್ದಾರಿಯಾಗಿದೆ. ಪೀಡಿತರ ಗುರುತನ್ನು ಸಂಪೂರ್ಣ ಗೌಪ್ಯವಾಗಿರಿಸಬೇಕು. ಮಹಿಳಾ ಸಂತ್ರಸ್ತೆಯರ ದೂರುಗಳನ್ನು ಮಹಿಳಾ ಅಧಿಕಾರಿಗಳ ಮೂಲಕ ದಾಖಲಿಸುವುದಕ್ಕೂ ಆದ್ಯತೆ ನೀಡಲಾಗಿದೆ.

ಎಫ್‌ ಐಆರ್ ದಾಖಲಿಸಲು ನಿರಾಕರಿಸುವುದು, ಅನಗತ್ಯ ವಿಳಂಬ ಮಾಡುವುದು ಅಥವಾ “ಪೂರ್ವಾನುಮತಿ ನೀಡಿದ್ದರು” ಎಂಬ ತಪ್ಪು ಕಾರಣ ನೀಡಿ ಪ್ರಕರಣ ದಾಖಲಿಸದಿರುವುದು ಗಂಭೀರ ಶಿಸ್ತುಲಂಘನೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ. ಇಂತಹ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಕಚೇರಿ ಸ್ಪಷ್ಟಪಡಿಸಿದೆ.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ಆದೇಶವನ್ನು ಏಕರೂಪವಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ದುರ್ಬಳಕೆಯಿಂದ ನಾಗರಿಕರ ಗೌಪ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

Key words: Private, photo-video, distribution, crime, DGP, new guidelines