ಜೂ. 11 ರಂದು ಶಕ್ತಿ ಯೋಜನೆಗೆ ಚಾಲನೆಗೆ  ಮೈಸೂರಿನಲ್ಲಿ ಸಿದ್ಧತೆ.

ಮೈಸೂರು,ಜೂನ್,9,2023(www.justkannada.in):  ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ  ಉಚಿತ ಪ್ರಯಾಣಕ್ಕೆ  ಅವಕಾಶ ಕಲ್ಪಿಸುವ ಶಕ್ತಿಯೋಜನೆ ಜಾರಿಗೆ  ಕೆಎಸ್ಆರ್ಟಿಸಿ ಸಿಬ್ಬಂದಿಗಳಿಂದ ಸಕಲ ಸಿದ್ದತೆ ನಡೆಯುತ್ತಿದೆ. ಜೂನ್ 11 ರಂದು ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ.

ಈ ಮಧ್ಯೆ ಆಯಾ ಜಿಲ್ಲಾ ಕೇಂದ್ರದಲ್ಲಿ ಕೆಎಸ್ ಆರ್ ಟಿಸಿ ವಿಭಾಗೀಯ ಅಧಿಕಾರಿಗಳು ಕಾರ್ಯಕ್ರಮ ಆಯೋಜಿಸಲು ಕೇಂದ್ರ ಕಚೇರಿಯಿಂದ ಆದೇಶ ಹೊರಡಿಸಲಾಗಿದ್ದು, ಆದೇಶ ಬೆನ್ನಲ್ಲೇ ಕಾರ್ಯಕ್ರಮ ಆಯೋಜಿಸಲು ಆಯಾ ಜಿಲ್ಲೆಯಗಳಲ್ಲಿನ  ವಿಭಾಗೀಯ ಅಧಿಕಾರಿಗಳು ಸಕಲ ಸಿದ್ದತೆ ನಡೆಸಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹ ಜೂನ್ 11 ರಂದು ಶಕ್ತಿ ಯೋಜನೆ ಚಾಲನೆಗೆ ಸಿದ್ದತೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿದ ವಿಭಾಗೀಯ ಅಧಿಕಾರಿ ಮರೀಗೌಡರು, ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗುತ್ತದೆ. ಶಿಷ್ಟಾಚಾರದ ಪ್ರಕಾರ ಎಲ್ಲಾ ರಾಜಕೀಯ ನಾಯಕರನ್ನ ಆಹ್ವಾನಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದಾರೆ ಇಬ್ಬರಿಗೂ ಆಹ್ವಾನಿಸಿದ್ದೇವೆ. ಇಬ್ಬರಲ್ಲಿ ಯಾರಾದರೂ ಒಬ್ಬರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಿಸುತ್ತೇವೆ. ಜೊತೆಗೆ ನಮ್ಮ ಸಿಬ್ಬಂದಿಗೂ ಕೂಡ ವಿಶೇಷ ತರಬೇತಿ ಶಿಬಿರವನ್ನು ಕೂಡ ಮಾಡುತ್ತಿದ್ದೇವೆ ಎಂದರು.

ಇಟಿಎಂ ಮಷಿನ್ ಗಳನ್ನ ಯಾವ ರೀತಿ ಬಳಸಬೇಕು. ಮಹಿಳೆಯರ ಜೊತೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಳ್ಳಬಾರದು ಎಂದು ಈಗಾಗಲೇ ಎಲ್ಲಾ ಸಿಬ್ಬಂದಿಗಳಿಗೂ ಸೂಚನೆ ನೀಡಲಾಗಿದೆ. ಜೊತೆಗೆ ಸಿಬ್ಬಂದಿಗಳಿಗೆ ಚಾಲಕ ನಿರ್ವಹಕರಿಗೆ ಪ್ರತಿದಿನ ಸಿಗುತ್ತಿದ್ದ ಇನ್ಸೆಂಟಿವ್ ಗೆ ಯಾವುದೇ ತೊಂದರೆ ಆಗೊದಿಲ್ಲ ಎಂದು ಮೇಲ್ಮಟ್ಟದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ಮರಿಗೌಡ ಹೇಳಿದರು.

Key words:  Preparations – Shakti Yojana -launch – Mysore