ದೇಶದ ಪ್ರಧಾನಿ ಕಾಂಗ್ರೆಸ್ ಪಕ್ಷವನ್ನ ದೇಶದ್ರೋಹಿ ಎಂದು ಬಿಂಬಿಸಿಲು ಯತ್ನ ಅತ್ಯಂತ ಖಂಡನೀಯ-ಹೆಚ್.ಎ ವೆಂಕಟೇಶ್.

   ಮೈಸೂರು,ಏಪ್ರಿಲ್,16,2024 (www.justkannada.in): ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ದೇಶದ ಪ್ರಧಾನಿಯಾದವರು ನಿರ್ಲಜ್ಜರಾಗಿ ಸುಳ್ಳು ಹೇಳಿರುವುದು ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ದೇಶದ್ರೋಹಿ ಎಂದು ಬಿಂಬಿಸಲು ಯತ್ನಿಸಿರುವುದು ಅತ್ಯಂತ ಖಂಡನೀಯ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಮೂಲಕ ಕಿಡಿಕಾರಿರುವ ಹೆಚ್.ಎ ವೆಂಕಟೇಶ್, ಕೊಟ್ಟ ಅವಕಾಶದಲ್ಲಿ ಯಾವ ಕೆಲಸವನ್ನೂ ಮಾಡದೇ ದೇಶದ ಭವಿಷ್ಯ ರೂಪಿಸಲು ಮತ್ತೆ ನನಗೆ ಅವಕಾಶ ಕೊಡಿ ಎಂದು ಧರ್ಮವನ್ನು ಮುಂದಿಟ್ಟು ಇವರು ಮತ ಕೇಳಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಇವರ ವಿರುದ್ಧ ಕ್ರಮ ಜರುಗಿಸಬೇಕಾದ ಅಗತ್ಯವಿದೆ. ಜನತೆ ತಮ್ಮ ಪರವಾಗಿಲ್ಲ ಎನ್ನುವುದನ್ನು ಅರಿತಿರುವ ಮೋದಿ, ಧರ್ಮ ರಾಜಕಾರಣದ ಮೊರೆ ಹೋಗಿದ್ದಾರೆ. ಚುನಾವಣಾ ಆಯೋಗ ಒಂದಿಷ್ಟಾದರೂ ನೈತಿಕತೆ ಉಳಿಸಿಕೊಂಡಿದ್ದರೆ ಇಂತಹ ಪ್ರಚೋದನಾಕಾರಿ ಭಾಷಣದ ವಿರುದ್ಧ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ದೇಶಕ್ಕಾಗಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಮೋದಿ ದೇಶ ದ್ರೋಹಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಪಕ್ಷ ಎಂದು ಬಿಂಬಿಸಿರುವುದು ಇವರ ಅರಿವಿನ ಕೊರತೆಯನ್ನು ಬಿಂಬಿಸುತ್ತದೆ. ಉದ್ವಿಗ್ನ ಪರಿಸ್ಥಿತಿಯನ್ನು ಪ್ರಚೋದಿಸುವ ಅರಾಜಕ ಬೀದಿ ಗುಂಪಿನ ನಾಯಕನಂತೆ ಕಾಂಗ್ರೆಸ್ ವಿರುದ್ಧ ಇವರು ಮಾತನಾಡಿರುವುದು ಖಂಡನೀಯ. ಇಷ್ಟಕ್ಕೂ ಇವರದೇ ಕೇಂದ್ರ ಸರ್ಕಾರದ ಗೃಹ ಇಲಾಖೆ ತುಕ್ಡೆ ತುಕ್ಡೆ ಗ್ಯಾಂಗ್ ಎಂಬುದೇ ಇಲ್ಲ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಜನರನ್ನು ಕೆರಳಿಸಲು ಇಂತಹ ಮತಾಂಧ ಉಪಮೆಗಳನ್ನು ಬಳಸುವ ಮೋದಿ, ತನ್ನ ಈ ಕೃತ್ಯಕ್ಕಾಗಿ ಶಿಕ್ಷೆಗೆ ಅರ್ಹರು.

ಇಷ್ಟಕ್ಕೂ ಪ್ರಧಾನಿ ಈಗಿನ ತಮ್ಮ ಬಿಜೆಪಿಯ ಪ್ರಣಾಳಿಕೆಯನ್ನು ಕ್ರಾಂತಿಕಾರಿ ಎಂದು ಬಣ್ಣಿಸಿ ತಾವೊಬ್ಬ ಜನರಿಗೆ ಕಾಲಕಾಲಕ್ಕೆ ಮಂಕುಬೂದಿ ಎರಚಿ ಲಾಭ ಪಡೆಯುವ ರಾಜಕಾರಣಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.  2022ರೊಳಗೆ ದೇಶದ ಎಲ್ಲಾ ಬಡವರಿಗೂ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ದೇಶದ ನಿರ್ವಸತಿಗರ ದಾರಿತಪ್ಪಿಸಿ ಮೋಸ ಮಾಡಿದ್ದ ಇವರು, ಮುಂದಿನ ಐದು ವರ್ಷಗಳಲ್ಲಿ 3ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಡುವುದಾಗಿ ಮತ್ತೆ ಸುಳ್ಳು ಹೇಳಿದ್ದಾರೆ. 3ಕೋಟಿ ಮಂದಿಯಷ್ಟೇ ಮನೆ ಪಡೆದರೆ ಉಳಿದ ಬಡವರು ಎಲ್ಲಿಗೆ ಹೋಗಬೇಕು ಎನ್ನುವುದನ್ನು ಇವರು ಹೇಳಬೇಕು ಎಂದು ಹೆಚ್.ಎ ವೆಂಕಟೇಶ್ ಹರಿಹಾಯ್ದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಾತೃಹೃದಯಿ ಗ್ಯಾರೆಂಟಿಗಳನ್ನು ಟೀಕಿಸುವ ಮೋದಿ, ಇದೇ ಗ್ಯಾರೆಂಟಿ ಪದವನ್ನು ಕದ್ದು ಕೇಂದ್ರದಲ್ಲಿ ತನ್ನ ಸರ್ಕಾರ ಉಳಿಸಿಕೊಳ್ಳಲು ಹೆಣಗುತ್ತಿರುವುದು ಸ್ಪಷ್ಟವಾಗಿದೆ. ರಾಜಕೀಯ ಲಾಭಕ್ಕಾಗಿ ಏನು ಬೇಕಿದ್ದರೂ ಮಾಡುವ, ವಿವಿಧ ವೇಷಗಳನ್ನು ಧರಿಸಿ ಜನರನ್ನು ಮರುಳು ಮಾಡುವ ಇಂತಹವರಿಂದ ದೇಶವನ್ನು ಕಾಪಾಡಬೇಕಿದೆ, ಈ ಹಿನ್ನೆಲೆಯಲ್ಲಿ ಪ್ರಬುದ್ಧ ಜನತೆ ಮೋದಿ ಮತ್ತು ಬಿಜೆಪಿಯವರ ಸುಳ್ಳು ಪ್ರಚಾರಕ್ಕೆ ಬೆಲೆ ಕೊಡದೇ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕಿದೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.

Key words: PM Modi, Congress,  HA Venkatesh