ಯುಎಸ್, ಚೀನಾ, ಪಾಕಿಸ್ತಾನ, ಶ್ರೀಲಂಕಾಗಳಿಗಿಂತ ಭಾರತದಲ್ಲಿ ಪೆಟ್ರೋಲ್ ದರ ಹೆಚ್ಚು.

ನವದೆಹಲಿ, ಮೇ,18, 2022 (www.justkannada.in): ಭಾರತದಲ್ಲಿ ಪೆಟ್ರೋಲ್ ದರ ಹಾಂಗ್ ಕಾಂಗ್, ಜರ್ಮನಿ ಮತ್ತು ಯುಕೆಯಂತಹ ದೇಶಗಳಿಗಿಂತ ಕಡಿಮೆ ಇದೆ. ಆದರೆ, ಚೀನಾ, ಬ್ರೆಜಿಲ್, ಜಪಾನ್, ಯುಎಸ್, ರಷ್ಯಾ, ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳಿಗಿಂತ ದುಬಾರಿಯಾಗಿದೆ ಎಂದು ಬಿಒಬಿ ಎಕನಾಮಿಕ್ಸ್ ರೀಸರ್ಚ್ ವರದಿಯೊಂದು ಬಹಿರಂಗಪಡಿಸಿದೆ.

ಭಾರತದಲ್ಲಿ ಏರುತ್ತಿರುವ ಇಂಧನ ದರಗಳ ಹಿನ್ನೆಲೆಯಲ್ಲಿ ಚರ್ಚೆಗಳು ಮಹತ್ತರವಾದ ಮಟ್ಟಿಗೆ ಹೆಚ್ಚಾಗಿದ್ದು, ರಾಜ್ಯ ಅಥವಾ ಕೇಂದ್ರ ಯಾವುದೇ ಸರ್ಕಾರಗಳಾದರೂ ಸಹ ಏರುತ್ತಿರುವ ಇಂಧನ ದರಗಳನ್ನು ನಿಯಂತ್ರಣದಲ್ಲಿಡಲು ತೆರಿಗೆಗಳನ್ನು ಕಡಿಮೆಗೊಳಿಸಬೇಕಾದ ಅಗತ್ಯವಿದೆ. ಇಂಧನ ದರಗಳ ಏರಿಕೆಗೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ (ಪೆಟ್ರೋಲ್ ಹಾಗೂ ಡೀಸೆಲ್ ತಯಾರಿಸಲು ಬೇಕಾಗಿರುವ ಕಚ್ಚಾ ವಸ್ತುಗಳು) ಬೆಲೆಗಳು ಹೆಚ್ಚಾಗುತ್ತಿರುವುದೇ ಕಾರಣ. ಮೇಲಾಗಿ ಹೆಚ್ಚುತ್ತಿರುವ ಡಾಲರ್ ಬೆಲೆ ಸಮಸ್ಯೆಯನ್ನು ವೃದ್ಧಿಸಿದೆ.

ಬ್ಯಾಂಕ್ ಆಫ್ ಬರೋಡಾ ಎಕನಾಮಿಕ್ ರೀಸರ್ಚ್ (ಬಿಒಬಿ ಎಕನಾಮಿಕ್ಸ್ ರೀಸರ್ಚ್) ವರದಿಯೊಂದು, ತಲಾ ವ್ಯಕ್ತಿ ಆದಾಯದೊಂದಿಗೆ ವಿಶ್ವದ ವಿವಿಧ ದೇಶಗಳಲ್ಲಿ ಪೆಟ್ರೋಲ್ ದರಗಳ ಕುರಿತು ವಿಶ್ಲೇಷಿಸಿದೆ.

“106 ದೇಶಗಳ ದತ್ತಾಂಶ ಲಭ್ಯವಾಗಿದ್ದು, ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರಗೆ ೧.೩೫ ಡಾಲರ್ ದರವಿದ್ದು, ವಿಶ್ವ ಮಟ್ಟದಲ್ಲಿ ೪೨ನೇ ಶ್ರೇಯಾಂಕವನ್ನು ಪಡೆದಿದೆ. ಅಂದರೆ ನಮಗಿಂತ ಪೆಟ್ರೋಲ್ ದರ ಹೆಚ್ಚಿರುವ ಇನ್ನೂ ೫೦ ರಾಷ್ಟ್ರಗಳಿವೆ. ಈ ಲೆಕ್ಕಾಚಾರಕ್ಕೆ ಹೋಲಿಸಿದರೆ ನಾವು ಸ್ವಲ್ಪ ಸಮಾಧಾನ ಪಟ್ಟುಕೊಳ್ಳಬಹುದಷ್ಟೇ. ಈ ಪ್ರಕಾರ ಪೆಟ್ರೋಲ್ ದರ ಪ್ರತಿ ಲೀಟರ್‌ ಗೆ ಸರಾಸರಿ ೧.೨೨ ಡಾಲರ್. ಭಾರತದಲ್ಲಿ ಇಂಧನ ದರಗಳು ಆಸ್ಟ್ರೇಲಿಯಾ, ಟರ್ಕಿ ಹಾಗೂ ದಕ್ಷಿಣ ಕೋರಿಯಾ ರಾಷ್ಟ್ರಗಳಿಗೆ ಸಮನಾಗಿದೆ,” ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹಾಂಗ್ ಕಾಂಗ್, ಫಿನ್‌ ಲ್ಯಾಂಡ್, ಜರ್ಮನಿ, ಇಟಲಿ, ನೆದರ್‌ ಲ್ಯಾಂಡ್ಸ್, ಗ್ರೀಸ್, ಫ್ರಾನ್ಸ್, ಪೋರ್ಚುಗಲ್ ಹಾಗೂ ನಾರ್ವೆಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೨ ಡಾಲ್‌ ಗಿಂತಲೂ ಹೆಚ್ಚಾಗಿದ್ದು, ಇದರ ಹೋಲಿಕೆಯಲ್ಲಿ ಭಾರತದಲ್ಲಿ ಪೆಟ್ರೋಲ್ ದರ ಕಡಿಮೆ ಕಾಣುತ್ತದೆ.

ಹೋಲಿಕೆಯ ಪ್ರಕಾರ (ತಲಾ ವ್ಯಕ್ತಿ ಆದಾಯದ ಪ್ರಕಾರ) ಭಾರತದಲ್ಲಿ ಇಂಧನದ ದರಗಳು ವಿಯೆಟ್ನಾಂ, ಕೀನ್ಯಾ, ಉಕ್ರೇನ್, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಹಾಗೂ ವೆನೆಜುವೆಲಾ ದೇಶಗಳಿಗಿಂತ ಹೆಚ್ಚಾಗಿದೆ. ಪ್ರಮುಖ ಇಂಧನ ಉತ್ಪಾದನಾ ರಾಷ್ಟ್ರಗಳಲ್ಲಿ ಇಂಧನದ ದರಗಳು ನಮಗಿಂತ ಸಾಕಷ್ಟು ಕಡಿಮೆಯಿದೆ.

“ಭಾರತದಲ್ಲಿ ಪ್ರಸ್ತುತ ಇರುವ ಪೆಟ್ರೋಲ್ ದರ ತುಂಬಾ ದುಬಾರಿಯಂತೆ ಕಾಣುತ್ತಿಲ್ಲ. ಆದರೆ, ತಲಾ ವ್ಯಕ್ತಿ ಆದಾಯದ ಲೆಕ್ಕ ಪರಿಗಣಿಸಿದರೆ, ದರಗಳು ಹೆಚ್ಚಾಗಿರುವ ಇತರೆ ದೇಶಗಳಲ್ಲಿ ತಲಾ ವ್ಯಕ್ತಿ ಆದಾಯವೂ ಸಹ ನಮಗಿಂತ ಬಹಳ ಹೆಚ್ಚಾಗಿದೆ. ಹಾಗಾಗಿ, ತಲಾ ವ್ಯಕ್ತಿ ಆದಾಯ ಕಡಿಮೆ ಇರುವ ದೇಶಗಳಲ್ಲಿ ಇದರಿಂದಾಗಿರುವ ಆರ್ಥಿಕ ಬಿಕ್ಕಟ್ಟು ತುಂಬಾ ಹೆಚ್ಚು. ಏಕೆಂದರೆ ಹಣದುಬ್ಬರದ ಮೇಲಿನ ಅದರ ನೇರ ಹಾಗೂ ಪರೋಕ್ಷ ಪರಿಣಾಮ ಬಹಳ ಹೆಚ್ಚು, ಇದರಿಂದಾಗಿ ಕಡಿಮೆ ಆದಾಯದ ಗುಂಪುಗಳ ಮೇಲೆ ಉಂಟಾಗುವ ಪರಿಣಾಮ ಹೆಚ್ಚು,” ಎನ್ನುತ್ತದೆ ವರದಿ.

ವರದಿಯಲ್ಲಿ ಫಿಲಿಪಿನ್ಸ್ ದೇಶದಲ್ಲಿ ಪೆಟ್ರೋಲ್ ದರ ಹೋಲಿಸಬಹುದು, ಆದರೆ ಅಲ್ಲಿನ ತಲಾ ವ್ಯಕ್ತಿ ಆದಾಯ ಭಾರತಕ್ಕಿಂತಲೂ ಶೇ.೫೦ರಷ್ಟು ಹೆಚ್ಚಾಗಿದೆ. ಕೀನ್ಯಾ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಹಾಗೂ ವೆನೆಜ್ಯುವೆಲಾದಮತಹ ಕಡಿಮೆ ತಲಾ ವ್ಯಕ್ತಿ ಆದಾಯವಿರುವ ದೇಶಗಳಲ್ಲಿ ಪೆಟ್ರೋಲ್ ದರಗಳು ನಮಗಿಂತಲೂ ಕಡಿಮೆ ಇದೆ. ಹಾಗಾಗಿ ಭಾರತದಲ್ಲಿ ಉದ್ಭವಿಸಿರುವ ಪರಿಣಾಮ ಕಡಿಮೆ ಎನ್ನಬಹುದು. ಹಾಗಾಗಿ, ದೇಶದ ಜನರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ನಮ್ಮ ಸರ್ಕಾರ ಇಂಧನದ ಮೇಲಿನ ತೆರಿಗೆಗಳನ್ನು ಕಡಿಮೆಗೊಳಿಸಬೇಕು.

ಭಾರತ ವಿಶ್ವದ ಮೂರನೇ ಅತಿ ದೊಡ್ಡ ಇಂಧನ ಬಳಸುವ ಹಾಗೂ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಶೇ.೮೫ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಹಾಗಾಗಿ ಇಂಧನದ ಬೆಲೆಗಳು ಆಮದು ಮಾಡಿಕೊಳ್ಳುವ ದರಗಳಷ್ಟಿರಬೇಕು.

ಜಾಗತಿಕ ಮಟ್ಟದಲ್ಲಿ ಇಂಧನ ದರಗಳು ಏರುತ್ತಿದ್ದು, ಭಾರತದಲ್ಲಿ ಇಂಧನ ಸರಬರಾಜು ಮಾಡುವ ಕಂಪನಿಗಳ ಪೆಟ್ರೋಲ್, ಡೀಸೆಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ದರಗಳೂ ಸಹ ಏರಿಕೆಯಾದವು. ಮಾರ್ಚ್ ೨೨ರಿಂದ ಆರಂಭವಾದಂತೆ ಪೆಟ್ರೋಲ್ ಹಾಗೂ ಡಿಸೆಲ್ ಬೆಲೆಗಳನ್ನು ಪ್ರತಿ ಲೀಟರ್‌ ಗೆ ರೂ.೧೦ ನಷ್ಟು ಏರಿಸಿದವು. ಆದರೆ ಜನರಿಂದ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ, ಖಂಡನೆ ವ್ಯಕ್ತವಾಗಿ, ತೆರಿಗೆಗಳನ್ನು ಕಡಿತಗೊಳಿಸುವಂತೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯನ್ನು ಕೊಂಚ ನಿಧಾನಿಸಿತು.

ಕೇಂದ್ರ ಸರ್ಕಾರ ಎಕ್ಸೆöಜ್ ಸುಂಕವನ್ನು ಕಡಿತಗೊಳಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದು, ಜನಸಾಮಾನ್ಯರಿಗೆ ಕೊಂಚ ಸಮಾಧಾನ ಒದಗಿಸಲು ವ್ಯಾಟ್ ಅಥವಾ ಮಾರಾಟ ತೆರಿಗೆಯನ್ನು ಕಡಿಮೆಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಪ್ರಸ್ತುತ ದೇಶದ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ ಗೆ ರೂ.೧೦೫.೪೧ ರಷ್ಟಿದ್ದು, ಪ್ರತಿ ಲೀಟರ್ ಡೀಸೆಲ್ ದರ ರೂ.೯೬.೬೭ ರಷ್ಟಿದೆ. ಹಾಂಗ್ ಕಾಂಗ್‌ ನಲ್ಲಿ ಅತೀ ದುಬಾರಿ, ಅಂದರೆ ಪ್ರತಿ ಲೀಟರ್ ಪೆಟ್ರೋಲ್ ದರ ೨.೫೮ ಡಾಲರ್, ಹಾಗೂ ಮಲೇಷ್ಯಾದಲ್ಲಿ ಅತೀ ಕಡಿಮೆ, ಅಂದರೆ ಪ್ರತಿ ಲೀಟರ್‌ಗೆ ೪೭ ಸೆಂಟ್‌ಗಳು.

ಜರ್ಮನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೨.೨೯ ಡಾಲರ್ ಇದ್ದರೆ, ಇಟಲಿಯಲ್ಲಿ ೨.೨೮ ಡಾಲರ್, ಫ್ರಾನ್ಸ್ ನಲ್ಲಿ ೨.೦೭ ಡಾಲರ್, ಇಸ್ರೇಲ್‌ನಲ್ಲಿ ೧.೯೬ ಡಾಲರ್, ಯುನೈಟೆಡ್ ಕಿಂಗ್‌ ಡಮ್ ಹಾಗೂ ಸಿಂಗಪೂರ್‌ ನಲ್ಲಿ ೧.೮೭ ಡಾಲರ್, ನ್ಯೂಜೀಲ್ಯಾಂಡ್‌ ನಲ್ಲಿ ೧.೭೫ ಡಾಲರ್ ಮತ್ತು ಆಸ್ಟ್ರೇಲಿಯಾದಲ್ಲಿ ೧.೩೬ ಡಾಲರ್ ದರವಿದೆ.

ಭಾರತ ಹಾಗೂ ಟರ್ಕಿಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಒಂದೇ, ಅಂದರೆ ೧.೩೫ ಡಾಲರ್ ಆಗಿದೆ. ಜಪಾನ್‌ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೧.೨೫ ಡಾಲರ್ ಇದ್ದರೆ, ಚೀನಾದಲ್ಲಿ ೧.೨೧ ಡಾಲರ್‌ ನಷ್ಟಿದೆ. ಯುಎಸ್‌ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಚೀನಾಗಿಂತಲೂ ಕಡಿಮೆ, ಅಂದರೆ ೯೮ ಸೆಂಟ್‌ ಗಳು.

ಭಾರತದ ನೆರೆ ರಾಷ್ಟ್ರಗಳಲ್ಲಿಯೂ ಸಹ ಇಂಧನದ ಬೆಲೆ ಕಡಿಮೆ ಇದೆ – ಬಾಂಗ್ಲಾದೇಶದಲ್ಲಿ ಪ್ರತಿ ಲೀಟರ್ ೧.೦೫ ಡಾಲರ್, ಪಾಕಿಸ್ತಾನದಲ್ಲಿ ೭೭ ಸೆಂಟ್ ಹಾಗೂ ಶ್ರೀಲಂಕಾದಲ್ಲಿ ೬೭ ಸೆಂಟ್‌ ಗಳು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Petrol -rates -India -higher than – US- China-Pakistan- Sri Lanka.