ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂದಿದೆ- ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ

 

ಮೈಸೂರು,ಜನವರಿ,26,2023(www.justkannada.in): ಪದ್ಮ ಭೂಷಣ ಪ್ರಶಸ್ತಿಗೆ ನನ್ನನ್ನ ಪರಿಗಣಿಸಿರುವುದಕ್ಕೆ ಸಂತಸ ತಂದಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಕಾರಣವೇ ನನಗೆ ಈ ಪ್ರಶಸ್ತಿ ಬಂದಿದೆ. ಇಲ್ಲದೆ ಇದ್ದರೆ ಬರುತ್ತಿರಲಿಲ್ಲ ಎಂದು  ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನುಡಿದರು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ಭೇಟಿ ನೀಡಿ ಕಾಲಿಗೆ ನಮಸ್ಕಾರ ಮಾಡಿ  ಹೂ ಗುಚ್ಛ ನೀಡಿ ಹಾರ ಹಾಕಿ ಸನ್ಮಾನ ಮಾಡಿದರು. ಉಸ್ತುವಾರಿ ಸಚಿವರ ಜೊತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಮಾಜಿ ಮೂಡಾ ಅಧ್ಯಕ್ಷ ರಾಜೀವ್ ಸೇರಿದಂತೆ ಹಲವರು ಭಾಗಿಯಾಗಿದ್ದರು.  ಪದ್ಮಭೂಷಣ ಪ್ರಶಸ್ತಿಗೆ ಬಾಜನರಾಗುತ್ತಿದ್ದಂತೆ ಸಾಹಿತಿ ಎಸ್.ಎಲ್ ಭೈರಪ್ಪರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು  ಜಿಲ್ಲಾಡಳಿತ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಮಾಡಲಾಗುತ್ತಿದೆ.

ನಂತರ ಮಾತನಾಡಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ, ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ ಬೆಳೆದಿದೆ. ಗಣರಾಜ್ಯ ಮೊದಲಿಂದಲ್ಲೂ ಇತ್ತು. ಸಂವಿಧಾನದ ಬಹು ಭಾಗ ನಮ್ಮ ಮೊದಲಿದಂಲೂ ಇತ್ತು. ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಪಡೆದಿದ್ದಾರೆ.  ಆದರೆ ಅಲ್ಲಿ ಸ್ವಾತಂತ್ರ್ಯ ಉಳಿದು ಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ. ಈ ದೇಶವನ್ನು ಕಾಪಾಡುತ್ತದೆ. ಗಣರಾಜ್ಯದ ಉತ್ಸವ ಬಹಳ ಮಹತ್ತರವಾದದ್ದು. ಇಲ್ಲೇ ಕೂತಿದ್ದೇನೆ. ಇಲ್ಲೇ ಬರೆದಿದ್ದೇನೆ. ಲೇಖಕ ಸತ್ತೇ ಸಾಯುತ್ತಾನೆ. ಆದರೆ ಅವನು ಬರೆದ ಪುಸ್ತಕ ಎಷ್ಟು ದಿನ ಪ್ರಸ್ತುತ ಇರುತ್ತದೋ ಅಲ್ಲಿಯವರೆಗೆ ಲೇಖಕ ಸದಾ ಜೀವಂತ. ನನ್ನ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದರು.

ನರೇಂದ್ರ ಮೋದಿ ಅವರು 2029 ರ ನಂತರ ನಿವೃತ್ತಿ ಹೊಂದಲಿ.

ಪದ್ಮ ಭೂಷಣ ಪ್ರಶಸ್ತಿಗೆ ನನ್ನನ್ನ ಪರಿಗಣಿಸುರುವುದಕ್ಕೆ ಸಂತಸ ತಂದಿದೆ. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನರೇಂದ್ರ ಮೋದಿ ಈ ದೇಶ ಎಂದೂ ಕಂಡಿರದಂತಹ ಪ್ರಧಾನಿ. ಇಂತ ಸರ್ಕಾರ ನಾನೆಂದೂ ನೋಡಿರಲಿಲ್ಲ. ಎಷ್ಟೋ ವರ್ಷಗಳ ಬಳಿಕ ಇಂಥಾ ಒಬ್ಬ ಉತ್ತಮ ಪ್ರಧಾನಿ ನಮ್ಮ ದೇಶಕ್ಕೆ ಸಿಕ್ಕಿದ್ದಾರೆ. ನನಗೆ  ಈ ಪ್ರಶಸ್ತಿ ಕೊಟ್ಟರು ಅಂತ ನಾನು ಈ ಮಾತನ್ನ ಹೇಳುತ್ತಿಲ್ಲ. 2024 ರಿಂದ 2029 ರವರೆಗೂ ಮೋದಿ ಮತ್ತೆ ಪ್ರಧಾನಿ ಆಗಬೇಕು. ನರೇಂದ್ರ ಮೋದಿ ಅವರು 2029 ರ ನಂತರ ನಿವೃತ್ತಿ ಹೊಂದಲಿ ಎಂದು ಎಸ್.ಎಲ್ ಭೈರಪ್ಪ ಸಲಹೆ ನೀಡಿದರು.

ನಾನು ಕಳೆದ 2019 ರಲ್ಲೇ ಒಂದು ಲೇಖನ ಬರೆದಿದ್ದೆ ಮತ್ತೊಮ್ಮೆ ಮೋದಿ ಅವರು ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಎಂದು ಬರೆದಿದ್ದೆ. ಈಗಲೂ 2024 ಮತ್ತು2029 ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. ನಂತರ ಅವರಂತ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ಹುಟ್ಟುಹಾಕಲಿ. ಮೋದಿಯಂತ ಪ್ರಧಾನ ಮಂತ್ರಿಯನ್ನ ನಾವು ಹಿಂದೆಂದೂ ನೋಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿಯೂ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ಈ ಮಾತು ಹೇಳುತ್ತಿಲ್ಲ. ದೇಶದಲ್ಲಿ ಉತ್ತಮ ಆಡಳಿತವನ್ನ ಮೋದಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆ ಇನ್ನಷ್ಟು ಈ ದೇಶಕ್ಕೆ ಬೇಕಿದೆ ಎಂದರು.

ಪ್ರಸ್ತುತ ರಾಜ್ಯ ರಾಜಕೀಯ ಕುರಿತು ಸಾಹಿತಿ ಎಸ್.ಎಲ್ ಭೈರಪ್ಪ ಅಸಮಧಾನ.

ಇಂದಿನ ರಾಜಕಾರಣಿಗಳ ಪರಸ್ಪರ ಕೆಸರೆರಚಾಟ ಮತ್ತು ಅವಾಚ್ಯ ಶಬ್ದಗಳ ನಿಂದನೆಗೆ ಬೇಸರ ವ್ಯಕ್ತಪಡಿಸಿದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ, ದಿನನಿತ್ಯ ಪತ್ರಿಕೆಗಳು, ಮಾಧ್ಯಮಗಳಲ್ಲಿ ನೋಡುತ್ತೇನೆ. ಇವರಿಂದ ಪತ್ರಿಕೆ ಓದಲು ಬೇಸರವಾಗುತ್ತೆ. ಇಷ್ಟು ಕೀಳುಮಟ್ಟಕ್ಕೆ ರಾಜಕಾರಣಿಗಳು ಇಳಿಯಬಾರದು. ಪರಸ್ಪರ ಆರೋಗ್ಯಕರವಾದ ಆರೋಪ ಪ್ರತ್ಯಾರೋಪ ಮಾಡಲಿ. ಅದು ಬಿಟ್ಟು ವೈಯಕ್ತಿಕ ವಿಚಾರಗಳ, ಅವಾಚ್ಯ ಶಬ್ಧಗಳ ಬಳಕೆ ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Key words: padma bushana- award – Senior literature -S.L. Bhairappa- Modi.