‘ಒಟಿಟಿ’ ಎಂಬುದು  ಮನರಂಜನೆ ಕ್ಷೇತ್ರದ ಭವಿಷ್ಯ ಬದಲಾಯಿಸುತ್ತಿರುವ ವಿನೂತನ ಕ್ಷೇತ್ರ…

ಬೆಂಗಳೂರು,ಮೇ,21,2021(www.justkannada.in): ಲಾಕ್‌ಡೌನ್ ಸಮಯದಲ್ಲಿ ನೀವು ಒಮ್ಮೆಯಾದರೂ ನಿಮ್ಮ ಮನೆಯ ಟಿವಿ ಪರದಯೆ ಮೇಲೆ ಅಥವಾ ನಿಮ್ಮ ಮೊಬೈಲ್ ಫೋನ್‌ನಲ್ಲಿ ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ನಂತಹ ಯಾವುದಾದರೂ ಒಂದು ಒಟಿಟಿ ವೇದಿಕೆಯಲ್ಲಿ ಒಂದು ಚಲನಚಿತ್ರವನ್ನಾದರೂ ವೀಕ್ಷಿಸಿರುತ್ತೀರಿ ಅಲ್ಲವೇ?! ಕಳೆದ ವರ್ಷದಿಂದ ಈ ಒಟಿಟಿ ವೇದಿಕೆಗಳ ಆಧಾರಿತ ಮನರಂಜನೆ ನಿಧಾನವಾಗಿ ಶ್ರೀಮಂತರು, ಮಧ್ಯಮ ವರ್ಗದವರೂ ಒಳಗೊಂಡಂತೆ ಬಹುಪಾಲು ಎಲ್ಲಾ ಕುಟುಂಬಗಳನ್ನೂ ಸಹ ಆವರಿಸುತ್ತಿದೆ.jk

ಹೇಳಿ ಕೇಳಿ ನಮ್ಮ ದೇಶದ ಜನತೆಗೆ ಚಲನಚಿತ್ರ ಆಧಾರಿತ ಮನರಂಜನೆ ಎಂದರೆ ಅಚ್ಚುಮೆಚ್ಚು. ಮನರಂಜನೆ ಕ್ಷೇತ್ರ ಅದರಲ್ಲಿಯೂ, ಟಿವಿ ಕಾರ್ಯಕ್ರಮಗಳು ನಮ್ಮೆಲ್ಲರ ಮನೆ ಮನಸ್ಸುಗಳ ಹಾಸುಹೊಕ್ಕಾಗಿದೆ. ಆದರೆ ನೀವು ಎಂದಾದರೂ ಈ ಒಟಿಟಿ ಎಂದರೇನು? ಇದರ ಉಗಮ, ಒಟ್ಟು ವಹಿವಾಟು, ಇದರ ಭವಿಷ್ಯಗಳ ಬಗ್ಗೆ ಯೋಚಿಸಿದ್ದೀರಾ?!

ಒಟಿಟಿ ಎಂದರೆ ‘ಓವರ್ ದಿ ಟಾಪ್’ ವೇದಿಕೆ ಎಂದರ್ಥ. ಇನ್ನೂ ಸರಳವಾಗಿ ಹೇಳಬೇಕಾದರೆ ಬೇಡಿಕೆಯ ಮೇರೆಗೆ ವೀಡಿಯೊ ಸೇವೆ ಒದಗಿಸುವ ವೇದಿಕೆ. ಇದಕ್ಕಾಗಿ ನೀವು ಒಂದು ಸಣ್ಣ ಪ್ರಮಾಣದ ಚಂದಾದಾರಿಕೆ/ ವಂತಿಕೆ ಪಾವತಿಸಿ ನಿಮ್ಮ ಮೊಬೈಲ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್, ಕಂಪ್ಯೂಟರ್, ಅಥವಾ ಟಿವಿಯಲ್ಲಿ ನಿಮಗಿಷ್ಟವಾಗಿರುವಂತಹ ಚಲನಚಿತ್ರ ಹಾಗೂ ಇತರೆ ವಿಷಯವಸ್ತುವಿರುವ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಈವರೆಗೆ ನಮಗೆಲ್ಲರಿಗೂ ಡಿಟಿಹೆಚ್, ಕೇಬಲ್ ಸೇವೆಗಳ ಬಗ್ಗೆ ಮಾತ್ರ ಹೆಚ್ಚು ತಿಳಿದಿತ್ತು. ಒಟಿಟಿ ಹಾಗೂ ಡಿಟಿಹೆಚ್ ನಡುವೆ ಇರುವ ದೊಡ್ಡ ವ್ಯತ್ಯಾಸಗಳೆಂದರೆ, ಯಾವ ಸಮಯದಲ್ಲಿ, ಯಾವ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎನ್ನುವುದು. ಜೊತೆಗೆ ನಿಮಿಗಿಷ್ಟವಾದ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ನಿಲ್ಲಿಸಿ, ಕೆಲಸ ಮುಗಿದ ನಂತರ (ಪೌಸ್ ಅಂಡ್ ಪ್ಲೇ) ವೀಕ್ಷಣೆಯನ್ನು ಮುಂದುವರೆಸಬಹುದು.

ಭಾರತದಲ್ಲಿ ಒಟಿಟಿ ಮಾರುಕಟ್ಟೆ….

2018ರಲ್ಲಿ ಭಾರತದಲ್ಲಿ ಈ ಒಟಿಟಿ ಮಾರುಕಟ್ಟೆ ರೂ .೨,೧೫೦ (ರೂ.೨೧.೫ ಬಿಲಿಯನ್) ಕೋಟಿಗಳಷ್ಟಾಗಿತ್ತು. ಪ್ರಸ್ತುತ, ಅಂದರೆ 2019ರಲ್ಲಿ ಭಾರತದಲ್ಲಿ ಈ ಒಟಿಟಿ ಮಾರುಕಟ್ಟೆ ಬರೋಬ್ಬರಿ ರೂ.೩೫ ಬಿಲಿಯನ್‌ ಗಳಿಗೆ ಏರಿತು!.

ಕಡಿಮೆ ದರದ ಮೊಬೈಲ್ ಡೇಟಾ ಲಭ್ಯವಾದ ಕಾರಣದಿಂದಾಗಿ ಒಟಿಟಿ ಮನರಂಜನೆ ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸಿತು. ಪ್ರಸ್ತುತ ಇಡೀ ವಿಶ್ವದಲ್ಲಿಯೇ ಭಾರತ ಅತ್ಯಂತ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಒದಗಿಸುತ್ತಿರುವ ದೇಶವಾಗಿದೆ. ಇದರಿಂದಾಗಿ ವಿಶೇಷವಾಗಿ ನಮ್ಮ ದೇಶದಲ್ಲಿ ಯುವಜನರಿಗೆ ಒಟಿಟಿ ವೀಡಿಯೊ ಸ್ಟ್ರೀಮಿಂಗ್ ಕೈಗೆಟಕುವ ದರಗಳಲ್ಲಿ ಲಭ್ಯವಾಯಿತು.

ಭಾರತದಲ್ಲಿ ಮೊಟ್ಟ ಮೊದಲಿಗೆ 2018ರಲ್ಲಿ ಆರಂಭವಾದ ಒಟಿಟಿ ವೇದಿಕೆ ಎಂದರೆ ರಿಲಯನ್ಸ್ ಎಂಟರ್‌ಟೇನ್‌ಮೆಂಟ್ ಪರಿಚಯಿಸಿದ ‘ಬಿಗ್‌ಫ್ಲಿಕ್ಸ್’. ಆದರೆ ಈಗ ನಮ್ಮ ದೇಶದಲ್ಲಿ 40ಕ್ಕೂ ಹೆಚ್ಚಿನ ಸಂಖ್ಯೆಯ ಒಟಿಟಿ ವೇದಿಕೆಗಳು ಲಭ್ಯವಿವೆ.

ಒಟ್ಟಾರೆ ಒಟಿಟಿ ವೇದಿಕೆಗಳು ಚಲನಚಿತ್ರ ವೀಕ್ಷಣೆಯನ್ನು ಅನುಕೂಲಕರವಾಗಿಯೂ ಹಾಗೂ ಕೈಗೆಟುಕುವಂತೆಯೂ ಮಾಡಿವೆ. ಕೋವಿಡ್ ಗೂ ಮುನ್ನ ಒಬ್ಬ ಗ್ರಾಹಕ ಒಟಿಟಿ ವೇದಿಕೆಯ ಮೇಲೆ ಪ್ರತಿ ನಿತ್ಯ ಸರಾಸರಿ 35 ನಿಮಿಷಗಳನ್ನು ವ್ಯಯಿಸುತ್ತಿದ್ದ. ಪ್ರಸ್ತುತ ಆ ಸರಾಸರಿ ಸಮಯ ಎರಡು ಗಂಟೆಗೇರಿದೆ.

ಪ್ರಾದೇಶಿಕ ಭಾಷಾ ಒಟಿಟಿ ವೇದಿಕೆಗಳಿಗೆ ಬೇಡಿಕೆ…

ನೆಟ್‌ಫ್ಲಿಕ್ಸ್, ಅಮೇಜಾನ್ ಪ್ರೈಮ್ ವೀಡಿಯೋ, ಹಾಟ್‌ಸ್ಟಾರ್‌ ನಂತಹ ಒಟಿಟಿ ವೇದಿಕೆಗಳು ಬಹು-ಭಾಷೆ ಒಟಿಟಿ ವೇದಿಕೆಗಳಾಗಿ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಪ್ರಾದೇಶಿಕ ಭಾಷೆಯನ್ನೇ ಗುರಿ ಮಾಡಿಕೊಂಡಿರುವ ಹಲವಾರು ಒಟಿಟಿ ವೇದಿಕೆಗಳು ಜನಪ್ರಿಯವಾಗುತ್ತಿವೆ. ಅನಿವಾಸಿ ಭಾರತೀಯರನ್ನೇ ಗುರಿ ಮಾಡಿಕೊಂಡು ಅವರಿಗೆ ತಮಿಳು, ತೆಲಗು, ಮಲಯಾಳಂ, ಕನ್ನಡದಲ್ಲಿ ಚಲನಚಿತ್ರಗಳನ್ನು ಒದಗಿಸುವ ಉದ್ದೇಶದಿಂದ ಸಿಂಪ್ಲಿ ಸೌಥ್ ಎಂಬ ಸ್ಟ್ರೀಮಿಂಗ್ ಆಪ್ ಆರಂಭವಾಗಿದೆ.

ನಮ್ಮ ದೇಶದಲ್ಲಿನ ಹೆಚ್ಚಿನ ಜನಸಂಖ್ಯೆ ಬಹುಭಾಷಿತರಾಗಿದ್ದರೂ, ಅವರು ವಿಷಯವನ್ನು (ಕಂಟೆಂಟ್) ತಮ್ಮ ಮಾತೃಭಾಷೆಯಲ್ಲಿ ಪಡೆಯಲು ಇಚ್ಛಿಸುತ್ತಾರೆ. ಗೂಗಲ್ ಪ್ರಕಾರ ಯೂ ಟ್ಯೂಬ್‌ ನಲ್ಲಿ ವೀಕ್ಷಿಸುವ ಶೇ.97ರಷ್ಟು ವಿಷಯ ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ. ಅದೇ ರೀತಿ ದೇಶದಲ್ಲಿನ ವಿವಿಧ ಒಟಿಟಿ ವೇದಿಕೆಗಳಲ್ಲಿ ವೀಕ್ಷಿಸುವ ಶೇಕಡ 90ರಷ್ಟು ವಿಷಯ ಪ್ರಾದೇಶಿಕ ಭಾಷೆಗಳಲ್ಲಿರುತ್ತದೆ. ಭಾರತೀಯ ಭಾಷೆಗಳನ್ನು ಮಾತನಾಡುವ ಜನಸಂಖ್ಯೆಯಲ್ಲಿನ ಬಹುತೇಕ ಭಾಗ ತಮ್ಮ ಮಾತೃ ಭಾಷೆಯಲ್ಲಿ ಮಾತ್ರ ವಿಷಯವನ್ನು ವೀಕ್ಷಿಸಲಿಚ್ಛಿಸುವ ಸಾಧ್ಯತೆಯಿದೆ. ಇಂತಹ ಜನಸಂಖ್ಯೆ ಬಹುಭಾಷಾ ಒಟಿಟಿ ವೇದಿಕೆಗಿಂತ ಏಕಭಾಷೆಯ ಒಟಿಟಿ ವೇದಿಕೆಯ ಗ್ರಾಹಕರಾಗುವ ಸಾಧ್ಯತೆ ಹೆಚ್ಚಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ಒಟಿಟಿ ವೇದಿಕೆ ಪ್ರಭಾವ

ಮೊಬೈಲ್ ಬಳಕೆ ಹಾಗೂ ಅಂತರ್ಜಾಲ ಸಂಪರ್ಕ ಗ್ರಾಮೀಣ ಭಾಗಗಳಲ್ಲಿಯೂ ಹೆಚ್ಚಾಗುತ್ತಿದೆ. ಗ್ರಾಮೀಣ ಜನಸಂಖ್ಯೆಯಲ್ಲಿ ಈಗ ವಿಷಯದ ಬಳಕೆ ನಗರ ಪ್ರದೇಶಗಳಿಗಿಂತ ಹೆಚ್ಚಾಗುತ್ತಿದೆ. ರಿಲೈಯನ್ಸ್ ಜಿಯೋ ಅಂತರ್ಜಾಲ ಶುಲ್ಕವನ್ನು ಕಡಿಮೆ ಮಾಡಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಒಟಿಟಿ ವೇದಿಕೆಯ ಬಳಕೆಯನ್ನು ಹೆಚ್ಚು ಮಾಡಿದೆ. ಬ್ರಾಡ್‌ಬ್ಯಾಂಡ್ ಇಂಡಿಯಾ ಮುಖ್ಯಸ್ಥರಾಗಿರುವ ಟಿ ವಿ ರಾಮಚಂದ್ರನ್ ಅವರ ಪ್ರಕಾರ ಒಟಿಟಿ ವೇದಿಕೆಯ ವಿಷಯದ  ಶೇ.65ರಷ್ಟು ಬಳಕೆ ಗ್ರಾಮೀಣ ಪ್ರದೇಶಗಳಿಂದ ಬರುತ್ತಿದೆ. ಈ ಮಾರುಕಟ್ಟೆಯನ್ನು, ಜೊತೆಗೆ ನಗರ ಪ್ರದೇಶಗಳ ಮಾರುಕಟ್ಟೆಯನ್ನು ತಮ್ಮದಾಗಿಸಲು ಒಟಿಟಿ ವೇದಿಕೆಗಳು ವಿನೂತನ ಪ್ರಯತ್ನಗಳನ್ನು ಮಾಡುತ್ತಿವೆ.ott-innovative-sector-changing-future-entertainment

ಹೀಗೆ ಒಟಿಟಿ ವೇದಿಕೆಗಳು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದು, ಇದು ಮನರಂಜನಾ ಉದ್ಯಮವನ್ನು ಹೆಚ್ಚು ಸೃಜನಾತ್ಮಕವಾಗಿಯೂ, ಸ್ಪರ್ಧಾತ್ಮಕವಾಗಿಯೂ ಬೆಳೆಸಲು ನೆರವಾಗಲಿದೆ. ಒಟಿಟಿ ವೇದಿಕೆಗಳು ಮನರಂಜನೆ ಉದ್ಯಮದ ಆಟ ಬದಲಿಸಿರುವುದು ನಿಜವಾದರೂ ಕಡೆಯಲ್ಲಿ ಇದರಿಂದ ಹೆಚ್ಚು ಪ್ರಯೋಜನ ಪಡೆಯುವವನು ಗ್ರಾಹಕನಾಗಿರುತ್ತಾನೆ.

Key words: OTT – innovative -sector – changing – future – entertainment