ನಾಳೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಇಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ…

ಬೆಂಗಳೂರು,ಫೆ,19,2020(www.justkannada.in): ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆ ಸಾರಿಗೆ ಸಂಸ್ಥೆ ನೌಕರರು ಪ್ರತಿಭಟನೆ ನಡೆಸಲಿದ್ದು ಈ ಹಿನ್ನೆಲೆ ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ , ನಾಳೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯವಾಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ  ಸಿಬ್ಬಂದಿ ನಾಳೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ನಾಳೆ  ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ಸತ್ಯಾಗ್ರಹ ಕೈಗೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ, ಇದು ಬಹು ದಿವಸಗಳ ಬೇಡಿಕೆಯಾಗಿದ್ದು, ಈ ಬಗ್ಗೆ ನಮ್ಮ ಸಿಎಂ ಗಮನಕ್ಕೂ ಕೂಡ ಬಂದಿದೆ. ಹೀಗಾಗಿ ಈ ಬಗ್ಗೆ ನಾಲ್ಕು ನಿಗಮಗಳ ಸಮಸ್ಯೆಗಳನ್ನು ,ಕ್ರೋಡಿಕರಿಸಿ ಒಂದು ವರದಿಯನ್ನು ನೀಡುವಂತೆ ಕಮಿಟಿಯನ್ನು ರಚನೆ ಮಾಡಲಾಗಿದೆ. ಇನ್ನು ನಾಳೆ ಮುಷ್ಕರ ಮಾಡೋದಿಲ್ಲ. ಕೇವಲ ಗಮನ ಸೆಳೆಯುವುದಕ್ಕೆ ನೌಕರರು ಮುಂದಾಗಿದ್ದಾರೆ. ಹೀಗಾಗಿ ನಾಳೆ ಯಾವುದೇ  ತೊಂದರೆ ಆಗುವುದಿಲ್ಲ. ಸಂಚಾರದಲ್ಲಿ ವ್ಯತ್ಯಯ ಉಂಟಾಗುವುದಿಲ್ಲ ಎಂದು ತಿಳಿಸಿದರು.

ನಾಳೆ ಪ್ರತಿಭಟನಾಸ್ಥಳಕ್ಕೆ ನಾನೇ ಹೋಗುತ್ತೇನೆ.  ಅವರ ಸಮಸ್ಯೆಯನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಸಚಿವ ಲಕ್ಷ್ಮಣ್ ಸವದಿ ತಿಳಿಸಿದರು.

Key words: no variation – tomorrow- traffic-DCM- Laxman Savadi