ಕೋವಿಡ್-19 ಮೂರನೇ ಅಲೆ ತಡೆಗಟ್ಟುವಲ್ಲಿ ಮುಂದಿನ 100 ದಿನಗಳು ಅತ್ಯಂತ ನಿರ್ಣಾಯಕ- ಕೇಂದ್ರ ಸರ್ಕಾರ

ನವದೆಹಲಿ, ಜುಲೈ 17, 2021(www.justkannada.in): ಕೋವಿಡ್-19 ಲಸಿಕಾಕರಣ ಅಭಿಯಾನವನ್ನು ಆರಂಭಿಸಿ 6 ತಿಂಗಳಾದ ನಂತರ, ಮತ್ತು ಭಾರತದಲ್ಲಿರುವ 45 ವರ್ಷಗಳಿಗೆ ಮೇಲ್ಪಟ್ಟ ಒಟ್ಟು ಜನಸಂಖ್ಯೆಯ ಪೈಕಿ ಅಂದಾಜು ಅರ್ಧದಷ್ಟು ಜನಸಂಖ್ಯೆಗೆ ಲಸಿಕೆಯ ಕನಿಷ್ಠ ಒಂದು ಡೋಸ್ ನೀಡಿದ ನಂತರ, ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ ಕೋವಿಡ್ ಮೂರನೆ ಅಲೆಯ ಬೆದರಿಕೆಯನ್ನು ಹೋಗಲಾಡಿಸುವಲ್ಲಿ ಭಾರತಕ್ಕೆ ಮುಂದಿನ 100 ದಿನಗಳು ಅತ್ಯಂತ ನಿರ್ಣಾಯಕವಂತೆ.jk

ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್-19ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಪ್ರಧಾನ ಸಲಹಾಗಾರ ವಿನೋದ್ ಕುಮಾರ್ ಪೌಲ್ ಅವರ ಪ್ರಕಾರ, “ದೇಶದ 45 ವರ್ಷಗಳಿಗೆ ಮೇಲ್ಪಟ್ಟ ಒಟ್ಟು ಜನಸಂಖ್ಯೆಯ ಪೈಕಿ ಅಂದಾಜು 50%ರಷ್ಟು ಜನರಿಗೆ ಲಸಿಕೆಯ ಮೊದಲನೇ ಡೋಸ್ ನೀಡಲಾಗಿದ್ದು, ಇದರಿಂದ ಕೋವಿಡ್‌ನಿಂದಾಗಿ ಉದ್ಭವಿಸುವ ಸಾವಿನ ಸಂಖ್ಯೆಯ ಮೇಲೆ ಪರಿಣಾಮ ಉಂಟಾಗಲಿದೆ. ಆದರೆ ವೈರಾಣು ಇನ್ನೂ ಜೀವಂತವಾಗಿರುವ ಕಾರಣ ಸೋಂಕು ಮಾತ್ರ ಹರಡುವ ಎಲ್ಲಾ ಸಾಧ್ಯತೆಗಳಿವೆ. ಕೆಲವು ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ವೈರಾಣುವಿನ ಅಸ್ಥಿತ್ವ ಕಂಡು ಬಂದಿದೆ. ದೈನಂದಿನ ಕೋವಿಡ್-19 ಪ್ರಕರಣಗಳ ಇಳಿಕೆಯ ಪ್ರಮಾಣ ನಿಧಾನವಾಗಿದೆ. ಇದು ನಮಗೆ ಒಂದು ರೀತಿಯ ಎಚ್ಚರಿಕೆ. ಪರಿಸ್ಥಿತಿ ಹದಗೆಡದಿರುವಂತೆ ನೋಡಿಕೊಳ್ಳುವುದು ನಮ್ಮ ಕೈಗಳಲ್ಲಿದೆ. ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟುವುದು ಸಾಧ್ಯ, ಆದರೆ ಈ ನಿಟ್ಟಿನಲ್ಲಿ ಮುಂದಿನ 100-125 ದಿನಗಳು ಬಹಳ ನಿರ್ಣಾಯಕ ಮತ್ತು ನಾವೆಲ್ಲರೂ ಅತ್ಯಂತ ಎಚ್ಚರಿಕೆಯಿಂದಿದ್ದು, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ,” ಎಂದಿದ್ದಾರೆ.

ಗುರುವಾರದವರೆಗೆ ದೇಶದಲ್ಲಿ 45 ವರ್ಷಗಳಿಗೆ ಮೇಲ್ಪಟ್ಟ 17 ಕೋಟಿಗೂ ಹೆಚ್ಚಿನ ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಆರು ಕೋಟಿ ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಭಾರತದಲ್ಲಿ ಸಂಭವಿಸಿರುವ ಒಟ್ಟು ಕೋವಿಡ್-19 ಸಾವುಗಳ ಪೈಕಿ 85%ರಷ್ಟು ಸಾವುಗಳು 45 ವರ್ಷಗಳಿಗಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ.

ಹಿರಿಯ ನಾಗರಿಕರ ಪೈಕಿ (60 ವರ್ಷ ಮೇಲ್ಪಟ್ಟವರು) ಶೇ.50ಕ್ಕಿಂತ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡುವ ಕೇಂದ್ರ ಸರ್ಕಾರದ ಗುರಿ ಕಳೆದ ತಿಂಗಳು ಸಾಧಿಸಲಾಗಿದ್ದು, ಈ ಮೂಲಕ ಸಾಂಕ್ರಾಮಿಕದಿಂದ ಸಂಭವಿಸಬಹುದಾಗಿರುವ ಅಪಾಯಗಳನ್ನು ಕಡಿಮೆಗೊಳಿಸಿದಂತಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೊಟೆಕ್ ಕಂಪನಿಗಳಿAದ ರೂ.೧೪,೫೦೦ ಕೋಟಿ ವೆಚ್ಚದಲ್ಲಿ ಇನ್ನೂ 66 ಕೋಟಿ ಲಸಿಕೆಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿದೆ. ಲಸಿಕೆಗಳ ಸರಬರಾಜು ಈ ವರ್ಷದ ಮುಂದಿನ ದಿನಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಈ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಒಟ್ಟು ೯೪.೪೭ ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: next- 100 days – crucial – preventing – covid-19  3rd wave – central government.