ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ-ಗೃಹ  ಸಚಿವ ಡಾ.ಜಿ.ಪರಮೇಶ್ವರ್.

ತುಮಕೂರು, ಏಪ್ರಿಲ್​ 19,2024 (www.justkannada.in):  ಹುಬ್ಬಳ್ಳಿಯ ಬಿವಿಬಿ ಇಂಜಿನಿಯರ್​​ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಕರಣ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ.ಡಾ.ಜಿ.ಪರಮೇಶ್ವರ್, ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಫಯಾಜ್​ನಿಂದ ನೇಹಾ ದೂರವಾಗಲು ಯತ್ನಿಸಿದ್ದು, ಇದರಿಂದ ಕೋಪಗೊಂಡ ಫಯಾಜ್​​ ನೇಹಾಳನ್ನ ಕೊಲೆ ಮಾಡಿದ್ದಾನೆ ಎಂದರು.

ಘಟನೆ ನಡೆದ ವೇಳೆ ಮಗಳ ಜೊತೆ ಇದ್ದ, ತಾಯಿ ಮೇಲೂ ಹಲ್ಲೆ ಮಾಡಲಾಗಿದೆ, ಆದರೆ ನೇಹಾ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಲವ್ ಜಿಹಾದ್ ಕಂಡು ಬಂದಿಲ್ಲ. ನನ್ನನ್ನು ಬಿಟ್ಟು ಬೇರೆಯವನ್ನು ಮದುವೆ ಮಾಡಿಕೊಳ್ಳುತ್ತೀಯಾ ಅಂತ ಕೊಲೆ ಮಾಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಜೈ ಶ್ರೀರಾಮ್​ ಎಂದು ಕೂಗಿದ್ದಕ್ಕೆ ಯುವಕರ ಮೇಲೆ ಹಲ್ಲೆ ಮಾಡಿದ್ದು ದುರದೃಷ್ಟಕರ. ಕಾನೂನಿನ ವಿರುದ್ಧವಾಗಿ ನಡೆದುಕೊಂಡರೆ ಯಾರನ್ನೂ ರಕ್ಷಣೆ ಮಾಡಲ್ಲ. ರಾಜ್ಯದ ಜನತೆಗೆ ಗೃಹ ಸಚಿವನಾಗಿ ಭರವಸೆ ಕೊಡಲು ಬಯಸುತ್ತೇನೆ. ರಾಮನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗುವುದು ಸಹಜ. ಅದಕ್ಕೆ ಇನ್ನೊಬ್ಬರು ಬೇರೆ ಘೋಷಣೆ ಕೂಗಿದ್ದಾರೆ. ಯಾರನ್ನೂ ರಕ್ಷಣೆ ಮಾಡುವುದಾಗಲಿ, ಓಲೈಸುವುದಾಗಲಿ ಮಾಡಲ್ಲ. ಯಾವುದೇ ಮುಲಾಜಿಲ್ಲದೆ ಕಾನೂನಡಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: Neha- murder-case – Home Minister -Dr. G. Parameshwar