ಸಿಎಂ ಹುದ್ದೆಗಾಗಿ ಡಿಕೆಶಿ-ಸಿದ್ಧರಾಮಯ್ಯ ಪೈಪೋಟಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕೆ.

 ಬೆಂಗಳೂರು,ಮೇ,17,2023(www.justkannada.in):  ರಾಜ್ಯದ ಮುಖ್ಯಮಂತ್ರಿ ಹುದ್ದೆಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಪಟ್ಟು ಹಿಡಿದು ದೆಹಲಿಯಲ್ಲಿ ಬೀಡುಬಿಟ್ಟಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಕಾಂಗ್ರೆಸ್ ಪಕ್ಷಕ್ಕೆ ಜನರು ಪೂರ್ಣಪ್ರಮಾಣದ ಬಹುಮತ ನೀಡಿದ್ದರೂ. ಆ ಪಕ್ಷದ ಇಬ್ಬರು ನಾಯಕರು ದೆಹಲಿಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಜಗಳ ಮಾಡುತ್ತಾ ಕೂತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಹಿಂಸಾಚಾರ ದೊಂಬಿ ಆರಂಭವಾಗಿದೆ, ಕಾಂಗ್ರೆಸ್ ಅಧಿಕಾರವಹಿಸಿಕೊಳ್ಳುವ ಮೊದಲೇ ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎಂದು ಕಿಡಿಕಾರಿದರು.

ಕೊಟ್ಟಿರುವ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಪಕ್ಷ ಈಗಾಗಲೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿತ್ತು ಮತ್ತು ಇಷ್ಟರಲ್ಲೇ ಮಳೆಗಾಲ ಶುರುವಾಗಲಿರುವುದರಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು, ಆದರೆ ಕಾಂಗ್ರೆಸ್ ನಾಯಕರೆಲ್ಲ ದೆಹಲಿಯಲ್ಲಿ ಕೂತು ಸಿಎಂ ಸ್ಥಾನಕ್ಕಾಗಿ ಬಡಿದಾಡುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಟೀಕಿಸಿದರು.

Key words: Nalin Kumar Kateel –criticizes-DK Shivakumar-Siddaramaiah – CM post.