ಮಂಡ್ಯ,ನವೆಂಬರ್,3,2026 (www.justkannda.in): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ಮತ್ತೊಂದು ಯಡವಟ್ಟು ಬಯಲಾಗಿದೆ. ಈ ಹಿಂದೆ ಸರ್ಕಾರಿ ಕಡತಗಳನ್ನು ಕಸದ ತೊಟ್ಟಿಗೆ ಎಸೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ತಾಲೂಕು ಕಚೇರಿಯಲ್ಲಿ, ಇದೀಗ ಜಿಲ್ಲಾ ಪಂಚಾಯಿತಿ ಅನುದಾನಕ್ಕೆ ಸಂಬಂಧಿಸಿದ ಕಡತಗಳನ್ನು ಗುಜರಿಗೆ ಹಾಕಲಾಗಿದೆ.
ತಾಲೂಕು ಕಚೇರಿಯ ಆವರಣದಲ್ಲಿ ಸರ್ಕಾರಿ ದಾಖಲೆಗಳನ್ನು ಕಸದ ಹೆಸರಿನಲ್ಲಿ ಗುಜರಿ ಆಟೋಗೆ ತುಂಬುತ್ತಿದ್ದ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದು . ಆಟೋದಲ್ಲಿದ್ದ ಕಡತಗಳನ್ನು ಪರಿಶೀಲಿಸಿದಾಗ, ಅವು ಜಿಲ್ಲಾ ಪಂಚಾಯಿತಿಯ ವಿವಿಧ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ತಾಲೂಕು ಕಚೇರಿಯಲ್ಲಿ ಅಕ್ರಮದ ದಾಖಲೆಗಳನ್ನು ನಾಶಪಡಿಸುವ ಕೆಲಸ ನಡೆಯುತ್ತಿದೆಯಾ? ಅಧಿಕಾರಿಗಳೇ ಕಸದ ಹೆಸರಲ್ಲಿ ಅಕ್ರಮದ ದಾಖಲೆಗಳನ್ನು ಗುಜರಿಗೆ ಹಾಕಿಸುತ್ತಿದ್ದಾರಾ? ಎಂದು ದಾಖಲೆಗಳನ್ನು ಗುಜರಿಯ ಆಟೋಗೆ ತುಂಬುವ ವೇಳೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಆದರೆ ಸಿಬ್ಬಂದಿಗಳು ತಮ್ಮ ಮೇಲಧಿಕಾರಿಯವರು ಕಸವನ್ನು ಎಂದು ಗುಜರಿಗೆ ಹಾಕಲು ಹೇಳಿದ್ದಾರೆಂದು ತಿಳಿಸುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಸ ವಿಲೇವಾರಿ ಹೆಸರಲ್ಲಿ ಸರ್ಕಾರಿ ದಾಖಲೆಗಳನ್ನು ಗುಜರಿಗೆ ಹಾಕುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






