ಅಕ್ಟೋಬರ್ 16ರಂದು ಎರಡನೇ ಹಂತದಲ್ಲಿ ಹೂವುಗಳ ಬದಲಾವಣೆ – ತೋಟಗಾರಿಕೆ ಇಲಾಖೆ
ಮೈಸೂರು, ಅ.12,2026: ಮೈಸೂರಿನ ಕುಪ್ಪಣ್ಣ ಪಾರ್ಕ್ನ ಗಾಜಿನ ಮನೆಯಲ್ಲಿ ನಡೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ತಾಜಾತನ ಕಾಪಾಡಲು ತೋಟಗಾರಿಕೆ ಇಲಾಖೆ ಮೈಕ್ರೋ ಫಾಗರ್ಗಳನ್ನು ಅಳವಡಿಸಿದೆ.

ಅಕ್ಟೋಬರ್ 11ರಿಂದ 21ರವರೆಗೆ “ಪ್ರಜಾಪ್ರಭುತ್ವದ ಹಬ್ಬ” ಎಂಬ ಪರಿಕಲ್ಪನೆಯಡಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರು, ನಾಗರಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ರೂಪಶ್ರೀ ತಿಳಿಸಿದ್ದಾರೆ.
ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುವ ಕರ್ನಾಟಕ ವಿಧಾನಸೌಧದ ಬೃಹತ್ ಪುಷ್ಪ ಪ್ರತಿಕೃತಿಯು 57 ಅಡಿ ಅಗಲ, 20 ಅಡಿ ಉದ್ದ ಹಾಗೂ 37 ಅಡಿ ಎತ್ತರ ಹೊಂದಿದೆ. ಸುಮಾರು 2 ಲಕ್ಷ ಕೆಂಪು ಗುಲಾಬಿ ಹೂವುಗಳು, 4,000 ಸೇವಂತಿಗೆ ಹೂವುಗಳು ಹಾಗೂ ವಿವಿಧ ಹಸಿರು ಎಲೆಗಳನ್ನು ಬಳಸಿ ಈ ಭವ್ಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.

ಇದರೊಂದಿಗೆ ಪ್ರಜಾಪ್ರಭುತ್ವದ ಮೂರು ಸ್ತಂಭಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಪ್ರತಿನಿಧಿಸುವ ಪುಷ್ಪ ಕಲಾಕೃತಿಗಳು, ಮತಪೆಟ್ಟಿಗೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮಾದರಿಗಳು ವೀಕ್ಷಕರ ಗಮನ ಸೆಳೆಯುತ್ತಿವೆ. ಮಹಿಳೆಯರು, ಯುವಕರು ಹಾಗೂ ಹಿರಿಯ ನಾಗರಿಕರು ಮತದಾನದಲ್ಲಿ ಪಾಲ್ಗೊಳ್ಳುವ ಮಹತ್ವ ಸಾರುವ ಕಲಾಕೃತಿಗಳನ್ನೂ ಪ್ರದರ್ಶನದಲ್ಲಿ ರೂಪಿಸಲಾಗಿದೆ.
ಇದಲ್ಲದೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಷ್ಪ ಪ್ರತಿಕೃತಿ ಹಾಗೂ ಹಂಪಿಯ ಐತಿಹಾಸಿಕ ಕಲ್ಲಿನ ರಥದ ಪುಷ್ಪ ಪರಿಕಲ್ಪನೆಗಳು ಪ್ರದರ್ಶನದ ಮೆರುಗನ್ನು ಹೆಚ್ಚಿಸಿವೆ.

ಹೂವುಗಳ ತಾಜಾತನಕ್ಕೆ ವಿಶೇಷ ವ್ಯವಸ್ಥೆ:
ಪ್ರಸ್ತುತ ಉಷ್ಣತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗಾಜಿನ ಮನೆಯೊಳಗೆ ಹೂವುಗಳು ಬೇಗನೆ ಬಾಡದಂತೆ ಮೈಕ್ರೋ ಫಾಗರ್ಗಳನ್ನು ಅಳವಡಿಸಲಾಗಿದೆ. ಹೂವುಗಳ ತಾಜಾತನ ಮತ್ತು ಪ್ರದರ್ಶನದ ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ ಅಕ್ಟೋಬರ್ 16ರಂದು ಎರಡನೇ ಹಂತದಲ್ಲಿ ಹೂವುಗಳನ್ನು ಬದಲಾಯಿಸಲು ಇಲಾಖೆ ಕ್ರಮ ಕೈಗೊಂಡಿದೆ.
ವಿವಿಧ ಇಲಾಖೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಪ್ರಾಯೋಜಕರ ಸಹಕಾರದೊಂದಿಗೆ ಪ್ರದರ್ಶನವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಮೆಚ್ಚುಗೆ ಕಾರ್ಯಕ್ರಮದ ಯಶಸ್ಸನ್ನು ಪ್ರತಿಬಿಂಬಿಸುತ್ತಿದೆ ಎಂದು ರೂಪಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KEY WORDS:







