ಮೈಸೂರು, ಅಕ್ಟೋಬರ್,10,2026 (www.justkannada.in): ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಮೈಸೂರು ಯುವ ದಸರಾ 2026 ಅಕ್ಟೋಬರ್ 13ರಿಂದ 17ರವರೆಗೆ ಮೈಸೂರಿನ ರಿಂಗ್ ರಸ್ತೆಯಲ್ಲಿರುವ, ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಅದ್ಧೂರಿ ಸಂಗೀತ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
- ಉದ್ಘಾಟನಾ ಸಮಾರಂಭ
ಯುವ ದಸರಾ ಕಾರ್ಯಕ್ರಮವು ಅಕ್ಟೋಬರ್ 13ರಂದು ಸಂಜೆ 6:30 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ಉದ್ಘಾಟಿಸಲಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ವೇದಿಕೆ ಮತ್ತು ಆಸನ ವ್ಯವಸ್ಥೆಗಳನ್ನು ಸರ್ಕಾರದ ಶಿಷ್ಟಾಚಾರದಂತೆ ಕೈಗೊಳ್ಳಲಾಗುವುದು.
- ಯುವ ದಸರಾ ಆಲ್ಬಂ ಸಾಂಗ್ ಬಿಡುಗಡೆ
ಯುವ ದಸರಾ 2026ರ ವಿಶೇಷ ಆಕರ್ಷಣೆಯಾದ ಯುವ ದಸರಾ ಆಲ್ಬಂ ಸಾಂಗ್ ಅನ್ನು ಅಕ್ಟೋಬರ್ 12ರಂದು ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಗೀತೆಗೆ ಸೋಮಶೇಖರ್ ಜಿ.ಎಸ್. ಮತ್ತು ಮನೋಜ್ ಸೌಗಂಧ್ ಅವರು ಸಾಹಿತ್ಯ ರಚಿಸಿದ್ದು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆ ಯುವಜನರ ಉತ್ಸಾಹ, ಮೈಸೂರಿನ ಸಾಂಸ್ಕೃತಿಕ ವೈಭವ ಮತ್ತು ದಸರಾ ಸಂಭ್ರಮವನ್ನು ಪ್ರತಿಬಿಂಬಿಸಲಿದೆ.
- ದಿನವಾರು ಸಂಗೀತ ಕಾರ್ಯಕ್ರಮಗಳು
* ಅಕ್ಟೋಬರ್ 13: ಉದ್ಘಾಟನಾ ಸಮಾರಂಭ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಕಾರ್ಯಕ್ರಮ
* ಅಕ್ಟೋಬರ್ 14: ಶಂಕರ್–ಎಹ್ಸಾನ್–ಲಾಯ್
* ಅಕ್ಟೋಬರ್ 15: ಸಿದ್ ಶ್ರೀರಾಮ್
* ಅಕ್ಟೋಬರ್ 16: ಸ್ಯಾಂಡಲ್‌ವುಡ್ ನೈಟ್ಸ್
* ಅಕ್ಟೋಬರ್ 17: ಜಾಸ್ಮಿನ್ ಸ್ಯಾಂಡ್ಲಾಸ್
- ಆಹಾರ ಮೇಳ – ಪ್ರಮುಖ ಆಕರ್ಷಣೆ
ಯುವ ದಸರಾ 2026ರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ಒಳಗೊಂಡ ಬೃಹತ್ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ದೂರದ ಊರುಗಳಿಂದ ಆಗಮಿಸುವ ಕಲಾಭಿಮಾನಿಗಳು, ಯುವಜನರು ಮತ್ತು ಸಾರ್ವಜನಿಕರಿಗೆ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸವಿಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆಹಾರ ಮೇಳದಲ್ಲಿ ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ವಿವಿಧ ಶೈಲಿಯ ಆಹಾರ ಪದಾರ್ಥಗಳು ಲಭ್ಯವಿರಲಿದ್ದು, ಇದು ಯುವ ದಸರಾಕ್ಕೆ ಆಗಮಿಸುವವರಿಗೆ ವಿಶೇಷ ಆಕರ್ಷಣೆಯಾಗಲಿದೆ.
- ಅತ್ಯಾಧುನಿಕ ವೇದಿಕೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ
ಸುಮಾರು 14 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸುಮಾರು 80 × 60 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ.
ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕಾರ್ಯಕ್ರಮಗಳಿಗೆ ಅನುಗುಣವಾಗಿ ಜರ್ಮನ್ ತಂತ್ರಜ್ಞಾನ ಆಧಾರಿತ d&b audiotechnik ಧ್ವನಿ ವ್ಯವಸ್ಥೆ, DiGiCo Quantum ಮಿಕ್ಸರ್ ಹಾಗೂ ಅತ್ಯಾಧುನಿಕ ಲೈಟಿಂಗ್ ಮತ್ತು ಲೇಸರ್ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಪ್ರೇಕ್ಷಕರಿಗೆ ಉನ್ನತ ಗುಣಮಟ್ಟದ ಧ್ವನಿ ಮತ್ತು ಬೆಳಕಿನ ಅನುಭವ ನೀಡುವುದು ಇದರ ಉದ್ದೇಶವಾಗಿದೆ.
- ಪೊಲೀಸ್ ಭದ್ರತೆ ಮತ್ತು ಸುರಕ್ಷತಾ ಕ್ರಮಗಳು
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿರುವುದರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ, ಕೆಎಸ್‌ಆರ್‌ಪಿ, ಡಿಎಆರ್, ಕ್ಯೂಆರ್‌ಟಿ ತಂಡಗಳು ಹಾಗೂ ಇತರ ಭದ್ರತಾ ಘಟಕಗಳನ್ನು ನಿಯೋಜಿಸುವ ಯೋಜನೆಯಿದೆ.
ಜೊತೆಗೆ ಡ್ರೋನ್‌ಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಮತ್ತು ಕಾರ್ಯಕ್ರಮದ ಶಾಂತಿಯುತ ನಿರ್ವಹಣೆಗೆ ಆದ್ಯತೆ ನೀಡಲಾಗುವುದು.
- ಯುವ ದಸರಾ ಉಪಸಮಿತಿಯ ಅಧಿಕಾರೇತರ ಸಮಿತಿ ರಚನೆ
ಯುವ ದಸರಾ ಉತ್ಸವದ ಯಶಸ್ವಿ ಆಯೋಜನೆ ಹಾಗೂ ಕಾರ್ಯಕ್ರಮಗಳ ಸಮರ್ಪಕ ನಿರ್ವಹಣೆಯ ಉದ್ದೇಶದಿಂದ ಯುವ ದಸರಾ ಉಪಸಮಿತಿಯ ಅಧಿಕಾರೇತರ ಸಮಿತಿಯ ಅಧ್ಯಕ್ಷರನ್ನಾಗಿ ರಾಯರ ಉಂಡಿ ರವಿ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ ಒಟ್ಟು 187 ಸದಸ್ಯರು ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಯುವ ದಸರಾ ಕಾರ್ಯಕ್ರಮಗಳ ಆಯೋಜನೆ, ಸಂಘಟನೆ ಮತ್ತು ಯಶಸ್ವಿ ಅನುಷ್ಠಾನದಲ್ಲಿ ಸಹಕರಿಸಲಿದ್ದಾರೆ.
- ಯುವ ದಸರಾ ಉದ್ದೇಶ
ಯುವ ದಸರಾ ಕೇವಲ ಸಂಗೀತ ಕಾರ್ಯಕ್ರಮವಲ್ಲ; ಯುವಜನರ ಪ್ರತಿಭೆ, ಸಂಗೀತ, ಕಲೆ, ಸಂಸ್ಕೃತಿ ಮತ್ತು ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉತ್ಸವವಾಗಿದೆ. ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದರ ಜೊತೆಗೆ ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಇದರ ಆಶಯವಾಗಿದೆ.
ಮೈಸೂರು ಯುವ ದಸರಾ 2026ಕ್ಕೆ ಸಾರ್ವಜನಿಕರು, ಯುವಜನರು ಹಾಗೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ.







