ಮೈಸೂರು, ಅಕ್ಟೋಬರ್,12,2026 (www.justkannada.in): ಬ್ಯಾಂಕಿಂಗ್, ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಹಾಗೂ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 45 ದಿನಗಳ ತರಬೇತಿ ನೀಡಲು ಮುಂದಾಗಿದೆ.
ಮೈಸೂರಿನ ಮುಕ್ತಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದೇಶದ ವಿವಿಧ ಬ್ಯಾಂಕಿಂಗ್, ಎಸ್‌ಎಸ್‌ಸಿ ಹಾಗೂ ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಗಳನ್ನು ಎದುರಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಅ.19 ನೋಂದಣಿಗೆ ಕೊನೆಯ ದಿನ
ತರಬೇತಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು 2026ರ ಅಕ್ಟೋಬರ್ 19ರೊಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಈ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಎಂ.ಪಿ. ಸದಾಶಿವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: 45 day, training, Banking, SSC, RRB ,competitive exams, KSOU.






