ಮೈಸೂರು ವಿವಿ: ನಾಡಗೀತೆಗೆ ನೂರು, ಸಂಭ್ರಮ ನೂರಾರು..

ಮೈಸೂರು,ಸೆಪ್ಟಂಬರ್,23,2025 (www.justkannada.in): ಕುವೆಂಪು ರಚಿತ ನಾಡಗೀತೆಗೆ ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ವಿಶ್ವವಿಖ್ಯಾತಿ ಪಡೆದ ಏಳೆಂಟು ಮಂದಿ ಕವಿಗಳನ್ನು ಕರೆಯಿಸಿ ದಸರಾ ಕವಿಗೋಷ್ಠಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಖ್ಯಾತ ಚಿಂತಕ, ಲೇಖಕ ಡಾ. ಅರವಿಂದ ಮಾಲಗತ್ತಿ ಹೇಳಿದರು.

ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಾಡಗೀತೆಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೂರರ ಸಂಭ್ರಮ ಸಾವಿರಾರು ಸ್ವರಗಳ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಗೀತೆಗೆ ನೂರು ವರ್ಷ ತುಂಬಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ತಾವು (ಶಿವರಾಜ್ ತಂಗಡಗಿ) ಮತ್ತು ಮುಖ್ಯಮಂತ್ರಿಗಳು ಚರ್ಚಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಲ್ಲದೆ ದಸರಾ ಸಂದರ್ಭದಲ್ಲಿ ನಾವು ವಿಶ್ವವಿಖ್ಯಾತ ಕವಿಗೋಷ್ಠಿಯನ್ನು ಆಯೋಜಿಸಿ ಐದಾರು ಭಾಷಿಗ ಕವಿಗಳನ್ನು ಆಹ್ವಾನಿಸುತ್ತೇವೆ. ಆದರೆ ಬೇರೆ ಬೇರೆ ದೇಶದ ಏಳೆಂಟು ಕವಿಗಳನ್ನು ಆಹ್ವಾನಿಸಿ ವಿಶ್ವಮಟ್ಟದ ಕವಿಗೋಷ್ಠಿ ಆಯೋಜಿಸಬೇಕು. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ಈ ನಾಡಗೀತೆಯು ನಾಡಿಗೆ ಕೀರಿಟವಿದ್ದಂತೆ. ಪ್ರತಿದಿನ ಹಾಡುವ ನಾಡಗೀತೆಗೆ ದೊಡ್ಡದಾದ ಪರಂಪರೆ ಇದೆ. ಹುಯಿಲಗೋಳ ನಾರಾಯಣ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಹಾಡನ್ನು 1924ರಲ್ಲಿ ಬರೆದಿದ್ದಾರೆ. ಅಂದಿನಿಂದ ಈ ಹಾಡನ್ನು ನಾಡಗೀತೆ ಎಂದು ಪರಿಗಣಿಸಲಾಗಿತ್ತು. 1956ರಲ್ಲೇ ಕನ್ನಡ ನಾಡು ಏಕೀಕರಣವಾಗಿದೆ. ಕನ್ನಡ ನಾಡು ಉದಯವಾಗಿ ಎಷ್ಟೋ ಕಾಲವಾಗಿದೆ. ಈಗಲಾದರೂ ಕನ್ನಡನಾಡು ಉದಯವಾಗಿದೆ ಎಂದು ಹಾಡಿ ಎಂಬ ಕೂಗು ಕೇಳಿ ಬಂದಾಗ ಮುನ್ನೆಲೆಗೆ ಬಂದಿದ್ದೆ ಕುವೆಂಪು ಅವರ ಗೀತೆ ಎಂದರು.

1924ರ ಪೂರ್ವದಿಂದಲೂ ಅಂದರೆ 1881 ರಿಂದಲೂ ಮೈಸೂರು ಸಂಸ್ಥಾನದ ಗೀತೆ ಕಾಯೋ ಶ್ರೀಗೌರಿ ಎಂಬ ಗೀತೆಯನ್ನು ಅರಮನೆಯಲ್ಲಿ ಇಲ್ಲಿಯವರೆಗೂ ಹಾಡಿಕೊಂಡು ಬರಲಾಗುತ್ತಿದೆ. ಹೀಗೆ ಕನ್ನಡ ನಾಡಗೀತೆಗೆ ದೊಡ್ಡದಾದ ಪರಂಪರೆ ಇದೆ. ಆ ಪರಂಪರೆಯ ಮುಖವಾಣಿಯಾಗಿ ಕುವೆಂಪು ಅವರ ನಾಡಗೀತೆ ನಮ್ಮ ಕಣ್ಣಮುಂದಿದೆ ಎಂದು ತಿಳಿಸಿದರು.

ನಾಡಗೀತೆಗೆ ಸಂಬಂಧಿಸಿದಂತೆ ಸಾಕಷ್ಟು ವಾಗ್ವಾದ, ಭಿನ್ನಾಭಿಪ್ರಾಯಗಳಿವೆ. ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ, ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆಲ್ಲಾ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ ಎಂದರು.

ಕುವೆಂಪು ಅವರು ಜೈನವೃದ್ಯಾನ ಎಂಬ ಮಾತನ್ನು ಬಳಸುವ ಮುನ್ನ ಬೌದ್ಧವೃದ್ಯಾನ ಎಂಬ ಮಾತನ್ನು ಬಳಸಿದ್ದರು. ಆದರೆ ಆ ಶಬ್ದವನ್ನು ಯಾವ ಕಾರಣಕ್ಕೆ 70 ದಶಕದಲ್ಲಿ ಕೈಬಿಟ್ಟರೋ ಗೊತ್ತಿಲ್ಲ. ಆದರೆ ಆ ಶಬ್ದವನ್ನು ಇದರ ಜತೆಗೆ ಜೋಡಿಸುವುದರಿಂದ ನಾಡಿಗೂ ಗೌರವವಾಗುತ್ತದೆ ಮತ್ತು ನಾಡಿನ ಸಂಕೇತಕ್ಕೆ ಸೂಚಕವಾಗಿ ನಿಂತುಕೊಳ್ಳುತ್ತೆ. ಹೀಗಾಗಿ ಬೌದ್ಧ ಎನ್ನುವ ಹೆಸರನ್ನು ಸೇರ್ಪಡೆ ಮಾಡುವುದರಿಂದ ಹಾಡಲಿಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಬೌದ್ಧ ಹೆಸರನ್ನು ನಾಡಗೀತೆಗೆ ಸೆರ್ಪಡೆ ಮಾಡಬೇಕು ಅವರು ಮನವಿ ಮಾಡಿದರು.

ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಮೈಸೂರು ದಸರಾ ಕನ್ನಡ ನಾಡಿನ ಹೆಮ್ಮೆಯ ಸಂಕೇತ. ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತರುವ ಈ ಹಬ್ಬಕ್ಕೆ ವಿಶೇಷವಾದ ಇತಿಹಾಸವಿದೆ. ಇದರ ಜತೆಗೆ ದೀಪಾಲಂಕಾರ, ಜಂಬೂ ಸವಾರಿ, ಫಲಪುಷ್ಪ ಪ್ರದರ್ಶನ ದಸರಾ ಕವಿಗೋಷ್ಠಿಗೆ ಮತ್ತಷ್ಟು ಮೆರಗನ್ನು ನೀಡಿದೆ. ಕನ್ನಡ ನಾಡಗೀತೆಗೆ ನೂರು ವರ್ಷ ತುಂಬಿರುವುದು ಕನ್ನಡ ನಾಡಿಗೆ ಸಂಭ್ರಮದ ವಿಷಯ ಎಂದರು.

ಸಚಿವರ ಭಾಷಣಕ್ಕೆ ಕಿವಿಯಾಗದ ಸಭೀಕರು

ಸಚಿವ ಶಿವರಾಜ್  ತಂಗಡಗಿ ಅವರು ಮಾತನಾಡುವ ವೇಳೆಗೆ ಸರಿಯಾಗಿ ಸಭೀಕರಿಗೆಲ್ಲ ಜೀರಾ ಜ್ಯೂಸ್, ಮೈಸೂರು ಪಾಕ್ ವಿತರಿಸಲಾಯಿತು. ಇದರಿಂದಾಗಿ ಅವುಗಳನ್ನು ಪಡೆದುಕೊಳ್ಳಲು ಅನೇಕರು ಮುಗಿಬಿದ್ದರು. ಅತ್ತ ಸಚಿವರು ಸ್ವಲ್ಪವೇ ಮಾತನಾಡಿ ಕುಳಿತರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಕವಿ ಕವಿರಾಜ್, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ, ಡಿ. ರವಿಶಂಕರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಸವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಎಡಿಸಿ ಡಾ. ಶಿವರಾಜ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ಮೊದಲಾದವರು ಇದ್ದಾರೆ.

Key words: Mysore University, One hundred, year, nadageethe, Kuvempu