ನಾವು ಸತ್ಯದ ಹಾದಿಯ ಮೇಲೆ ನಡೆಯಬೇಕು: ಬಹಳ ಎತ್ತರಕ್ಕೆ ಏರುವುದನ್ನು ರೂಢಿಸಿಕೊಳ್ಳಿ- ಸಂಗೀತ ನಿರ್ದೇಶಕ ಹಂಸಲೇಖ

ಮೈಸೂರು,ನವೆಂಬರ್,19,2025 (www.justkannada.in): ನಾವು ಬಹಳ ಎತ್ತರಕ್ಕೆ ಏರುವುದನ್ನು ರೂಢಿಸಿಕೊಳ್ಳಬೇಕು. ವಿಷಯದಲ್ಲಿ ನಿಖರತೆ ಸಿಗುವ ತನಕ ಧ್ಯಾನ ಮಾಡಿ. ಸ್ಪಷ್ಟತೆ ಸಿಕ್ಕ ಮೇಲೆ ಪ್ರತಿಫಲ ದೊರಕುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ 2025-26ನೇ ಸಾಲಿನ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಹಂಸಲೇಖ ಅವರು ಮಾತನಾಡಿದರು.

ನಾವು ಸತ್ಯದ ಹಾದಿಯ ಮೇಲೆ ನಡೆಯಬೇಕು. ಪ್ರತಿಫಲವು ತನಗೆ ತಾನೇ ದೊರೆಯುತ್ತದೆ. ಏಕೆಂದರೆ ನಮಗೆ ವಿಷಯದಲ್ಲಿ ನಿಖರತೆ ದೊರಕಬೇಕು. ನಾನು ಈ ಕಾರ್ಯಕ್ರಮಕ್ಕೆ ಬಹಳ ಗೌರವದಿಂದ ಬಂದಿದ್ದೇನೆ. ಸಂಶೋಧಕರದ್ದು ಒಂದು ಸಂಘವಿದೆ, ಅವರ ಹಿಂದೆ ಇಷ್ಟೆಲ್ಲಾ ಅಧಿಕಾರಿ ವರ್ಗವಿದೆ ಎಂಬುದೇ ಕುತೂಹಲ ಮತ್ತು ಸಂತೋಷವನ್ನುಂಟು ಮಾಡಿದೆ ಎಂದರು.

ನಾನು 20 ವರ್ಷದ ಹಿಂದೆ ಸಂಶೋಧನೆ ಕೈಗೊಂಡಿದ್ದೆ. ಹೀಗೆ ಸಂಶೋಧಿಸಿದ್ದರ ಫಲವಾಗಿ ಇಂದು ನಿಮ್ಮ ಸಂಘಟನೆಯ ಕಾರ್ಯಕ್ರಮಕ್ಕೆ ಆಗಮಿಸುವಂತಾಗಿದೆ. ಐದನಿ ಎಂಬುದನ್ನು ಸಂಶೋಧಿಸಿದ್ದೆ. ಗಿಡಕ್ಕೆ ನೀರು ಎರೆದಂತೆ ಸತ್ಯದ ಬೀಜ ಕೈಗೆತ್ತಿಕೊಂಡು ಅದನ್ನು ಪೋಷಿಸಬೇಕು ಎಂದು ಹಂಸಲೇಖ ಅವರು ಹೇಳಿದರು.

ನಾನು ಐದನಿಯನ್ನು ಸಂಶೋಧಿಸಿದರೂ, ನನ್ನನ್ನು ನಾದಬ್ರಹ್ಮ ಎಂದು ಕರೆಯುತ್ತಾರೆ. ಸಂಗೀತ ಲೋಕದಲ್ಲಿ ಯಾರಾದರೂ ನಾದಬ್ರಹ್ಮ ಇದ್ದರೆ ಅದು ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಎಂಬುದಾಗಿ ತಿಳಿಸಿದರು.

ಸಂಘಕ್ಕೆ ವರಹಳ್ಳಿ ಆನಂದ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಆಯ್ಕೆ ಆಗಿರುವುದು ಕೇವಲರ ಅವರ ಬಣಕ್ಕೆ ಅಧ್ಯಕ್ಷರಾಗಿ ಅಲ್ಲ. ಅವರು ಒಟ್ಟಾರೆ ಸಂಘದ ಅಧ್ಯಕ್ಷರು. ಆಡಳಿತ ವರ್ಗಕ್ಕೆ ಇವರೇ ನೋಟಿಸ್‌  ಜಾರಿಗೊಳಿಸಿದ್ದಾರೆ. ಅದರಲ್ಲಿ ವಾತಾವರಣ ಛಿದ್ರತೆಯಿಂದ ಕೂಡಿದೆ ಎಂದು ಉಲ್ಲೇಖಿಸಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ 558 ಸಂಸ್ಥಾನಗಳನ್ನು ಒಂದುಗೂಡಿಸಲಾಯಿತು. ಹಲವು ಧರ್ಮಗಳು ಸೇರಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದವು.  ಸಂಗ್ರಾಮದ ಬಿರುಸು ಈಗ ಇಲ್ಲ. ಆ ಪೀಳಿಗೆಯ ದಾರಿಯಲ್ಲಿ ಮುನ್ನಡೆಯಬೇಕು. ನಿಂದಿಸುವುದರಿಂದ ಕೊರಗುವುದರಿಂದ ಪ್ರಯೋಜನವಿಲ್ಲ ಎಂದರು.

ಮಾಜಿ ಮೇಯರ್ ಪುರುಷೋತ್ತಮ್, ಶಿಕ್ಷಣ ತಜ್ಞ ಶ್ರೀಪಾದ ಭಟ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪತ್ರಕರ್ತೆ ರಶ್ಮಿ ಕೋಟಿ, ಮುಖಂಡ ಅಹಿಂದ ಜವರಪ್ಪ, ಸವಿತಾ ಪ. ಮಲ್ಲೇಶ್, ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಕ್ಯಾತನಹಳ್ಳಿ ನಾಗರಾಜ್, ವಕೀಲ ಶಿವಪ್ರಸಾದ್, ನವೀನ್ ಮೌರ್ಯ, ಎಸ್. ಮರಿದೇವಯ್ಯ, ವರಹಳ್ಳಿ ಆನಂದ್ ಮೊದಲಾದವರು ಇದ್ದರು.

Key words: Mysore university, path, truth, Music Director, Hamsalekha