ಮೈಸೂರು,ನವೆಂಬರ್,13,2025 (www.justkannada.in): ಕಳೆದ ಎರಡು ದಿನದ ಹಿಂದೆ ಮೈಸೂರು ವಿವಿಯ ಭದ್ರತಾ ಕಾರ್ಮಿಕ ಸಂಜಯ್ ಕುಮಾರ್ ಕರ್ತವ್ಯದ ವೇಳೆ ಸಾವನ್ನಪ್ಪಿದ ವಿಚಾರ ಮತ್ತು ಭದ್ರತಾ ಸಿಬ್ಬಂದಿಯ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ಸ್ಪಷ್ಟನೆ ನೀಡಿದ್ದಾರೆ. 
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆ ಭದ್ರತಾ ಕಾರ್ಮಿಕರ ಗುತ್ತಿಗೆ ಪಡೆದ ಗುತ್ತಿಗೆದಾರನ ಗುತ್ತಿಗೆ ಅವಧಿ ಮುಗಿದಿದ್ದರಿಂದ ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿತ್ತು. ಇದೇ ನವೆಂಬರ್ 1ರಿಂದ ಜಾರಿಗೆ ಬರುವಂತೆ ಹೊಸದಾಗಿ ಟೆಂಡರ್ ನಲ್ಲಿ ಆಯ್ಕೆಯಾದ ಬೆಂಗಳೂರಿನ ಎಸ್ ಆರ್ ಆರ್ ಮೂಲದ ಏಜೆನ್ಸಿಯು ಕಳೆದ ವಾರವಷ್ಟೇ ಕಾರ್ಯಾದೇಶ ಪಡೆದು ಕಾರ್ಮಿಕ ಇಲಾಖೆಯ ನಿಯಮಾವಳಿಗಳಂತೆ ನೂತನ ಕರಾರು ಒಪ್ಪಂದ ಮಾಡಿಕೊಂಡು ಭದ್ರತಾ ಕಾರ್ಮಿಕರ ಉಸ್ತುವಾರಿಯನ್ನು ಪಡೆದಿದೆ. ಈ ಹಿಂದಿನ ಏಜೆನ್ಸಿ ಜೊತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಕಾರ್ಮಿಕರನ್ನೇ ಮನವಿ ಮೇರೆಗೆ ಮುಂದುವರಿಸಲಾಗಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ ಸವಿತಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕುಲಸಚಿವರು, ಕಳೆದ ಬಾರಿ ಟೆಂಡರ್ ನಲ್ಲಿ 140 ಭದ್ರತಾ ಸಿಬ್ಬಂದಿಗಳ ಸೇವೆಯನ್ನು ಪಡೆಯಲಾಗಿದ್ದು ಪ್ರಸ್ತುತ ಮೈಸೂರು ವಿವಿಯಿಂದ ಹಾಸನ ಮಂಡ್ಯ ಚಾಮರಾಜನಗರ ಜಿಲ್ಲೆಯ ವಿಶ್ವವಿದ್ಯಾನಿಲಯಗಳಾಗಿ ವಿಭಜನೆಯಾಗಿದ್ದು ಭದ್ರತಾ ಕಾರ್ಮಿಕರ ಸೇವೆಯನ್ನು ಹಿಂಪಡೆಯಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅಗತ್ಯವಾದ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು 90ಕ್ಕೆ ಇಳಿಸಲಾಗಿದೆ .ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗಂಗೋತ್ರಿಯನ್ನು ಒಳಗೊಂಡಂತೆ ಸುಮಾರು 700 ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು ಇದರ ಕಮಾಂಡ್ ಸೆಂಟರ್ ಉಸ್ತುವಾರಿಯನ್ನು ಐಸಿಡಿ ನಿರ್ದೇಶಕರಿಗೆ ನೀಡಲಾಗಿದೆ .ವಿಶ್ವವಿದ್ಯಾನಿಲಯದಲ್ಲಿ ಅನಗತ್ಯವಾಗಿರುವ ಭದ್ರತಾ ಸಿಬ್ಬಂದಿ ಸ್ಥಳಗಳನ್ನು ಕಡಿಮೆಗೊಳಿಸಿ ವಿವಿ ಆರ್ಥಿಕ ಹಿತದೃಷ್ಟಿಯಿಂದ 90 ಭದ್ರತಾ ಕಾರ್ಮಿಕರನ್ನು ಮಾತ್ರ ಮುಂದುವರಿಸಲಾಗಿದೆ .ನೂತನ ಏಜೆನ್ಸಿ ಅವರೊಂದಿಗೆ ಕರಾರು ಒಪ್ಪಂದ ಮಾಡಿದ್ದು ಭದ್ರತಾ ಕಾರ್ಮಿಕರ ಹಿತಾಸಕ್ತಿಯನ್ನು ಕಾಯುವಂತೆ ಸರ್ಕಾರದ ಸುತ್ತೋಲೆ ಮತ್ತು ಕಾಯ್ದೆಗಳಂತೆ ವೇತನ ಇಎಸ್ ಐ ಪಿಎಫ್ ರಜೆ ಹಾಗೂ ಇತ್ಯಾದಿ ಸೌಲಭ್ಯಗಳನ್ನು ನೀಡಲು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಹಾಗೂ ಏಜೆನ್ಸಿ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಮೇಲುಸ್ತುವಾರಿ ವಹಿಸಿರುವ ಇಂಜಿನಿಯರ್ ವಿಭಾಗಕ್ಕೆ ಅಥವಾ ಕುಲ ಸಚಿವರನ್ನು ಭೇಟಿ ಮಾಡಿ ದೂರನ್ನು ನೀಡಲು ಯಾವುದೇ ಅಭ್ಯಂತರವಿಲ್ಲ ಎಂಬುದನ್ನು ತಿಳಿಸಲಾಗಿದೆ.
ಇದೇ ಭದ್ರತಾ ಸಿಬ್ಬಂದಿಗಳು ಸುಮಾರು 10 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದು ಇದುವರೆಗೆ ನೀಡಿರುವ ದೂರುಗಳನ್ನು ಖುದ್ದು ಬಗೆಹರಿಸಲಾಗಿದೆ ಹಾಗೂ ಇದುವರೆಗೂ ಯಾವುದೇ ಗುರುತರ ಸಮಸ್ಯೆಗಳು ಕಂಡುಬಂದಿರುವುದಿಲ್ಲ.ಆದ್ದರಿಂದ ಈ ದಿನದ ಘಟನೆಗೆ ಮೈಸೂರು ವಿಶ್ವವಿದ್ಯಾನಿಲಯವು ಕಾರಣವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ
ಸಹಜವಾಗಿ ಮರಣ ಹೊಂದಿರುವ ಭದ್ರತಾ ಕಾರ್ಮಿಕ ಸಂಜಯ್ ಕುಮಾರ್ ಅವರಿಗೆ ಏಜೆನ್ಸಿ ಕಡೆಯಿಂದ, ಕಾರ್ಮಿಕ ಇಲಾಖೆಯಿಂದ ಮತ್ತು ಇಎಸ್ ಐ ಪಿಎಫ್ ಸೌಲಭ್ಯಗಳು ಮತ್ತು ಮರಣೋತ್ತರ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಕೊಡಬೇಕಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಮತ್ತು ಇಎಸ್ ಐ ಇಪಿಎಫ್ ಮೇಲಧಿಕಾರಿಗಳೊಂದಿಗೆ ಖುದ್ದು ಚರ್ಚಿಸಿ ಪತ್ರ ಬರೆಯಲಾಗಿದೆ. ಉಳಿದಂತೆ ಭದ್ರತಾ ಕಾರ್ಮಿಕ ಸಮಸ್ಯೆಗಳಿದ್ದಲ್ಲಿ ಖುದ್ದು ಭೇಟಿ ನೀಡಿ ತಿಳಿಸುವಂತೆ ಎಲ್ಲಾ ಭದ್ರತಾ ಕಾರ್ಮಿಕರಿಗೆ ತಿಳುವಳಿಕೆ ನೀಡಲಾಗಿದೆ ಎಂದು ಕುಲಸಚಿವೆ ಎಂ.ಕೆ ಸವಿತಾ ತಿಳಿಸಿದ್ದಾರೆ.
Key words: Mysore University, security, continue







