ಮೈಸೂರು ವಿವಿ 103ನೇ ಘಟಿಕೋತ್ಸವ: 32,240 ಅಭ್ಯರ್ಥಿಗಳಿಗೆ ಪದವಿ ಪ್ರಧಾನ.

ಮೈಸೂರು,ಅಕ್ಟೋಬರ್,18,2023(www.justkannada.in):  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ನಾಡೋಜ ಡಾ.ಪಿ.ಎಸ್.ಶಂಕರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರಿಗೆ ಗೌರವ ಡಾಕ್ಟರೆಟ್ ಸೇರಿದಂತೆ ಪಿಎಚ್.ಡಿ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 32,240 ಅಭ್ಯರ್ಥಿಗಳಿಗೆ ಪದವಿಗಳನ್ನು ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಇಂದು ಮೈಸೂರು ವಿಶ್ವವಿದ್ಯಾನಿಲಯದ 103ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಿದರು.

ಪದವಿ ಪಡೆಯುತ್ತಿರುವ ಒಟ್ಟು 32,240 ಅಭ್ಯರ್ಥಿಗಳ ಪೈಕಿ 12,051 (ಶೇ.37.37) ಪುರುಷ ಅಭ್ಯರ್ಥಿಗಳಾದರೆ, 20,189 (ಶೆ.62.62) ಮಹಿಳಾ ಅಭ್ಯರ್ಥಿಗಳಿದ್ದರು. ಈ ಬಾರಿ ಘಟಿಕೋತ್ಸವದಲ್ಲಿ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪದವಿಗಳನ್ನು ಪಡೆಯುತ್ತಿದ್ದಾರೆ. ವಿವಿಧ ವಿಷಯಗಳಲ್ಲಿ 539 ಅಭ್ಯರ್ಥಿಗಳು ಪಿಎಚ್.ಡಿ ಪದವಿ ಪಡೆಯುತ್ತಿದ್ದಾರೆ.  ಈ ಪೈಕಿ248 (ಶೇ.46.01) ಮಹಿಳಾ ಅಭ್ಯರ್ಥಿಗಳಿದ್ದರೆ, 291 ಮಂದಿ (ಶೆ.53.98) ಪುರುಷ ಅಭ್ಯರ್ಥಿಗಳಿದ್ದಾರೆ.

ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಲ್ಲಿ 40 ಮಂದಿ ವಿದೇಶಿ ಅಭ್ಯರ್ಥಿಗಳಿದ್ದರು. ಹಾಗೆಯೇ 420 ಚಿನ್ನದ ಪದಕ, 275 ನಗದು ಬಹುಮಾನಗಳನ್ನು 249 ಅಭ್ಯರ್ಥಿಗಳು ಪಡೆದುಕೊಂಡರೆ, ಅದರಲ್ಲಿ 180 ಮಹಿಳಾ ಅಭ್ಯರ್ಥಿಗಳಿದ್ದರು.

ಬಳಿಕ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಮಾತನಾಡಿ, ದಕ್ಷಿಣ ಭಾರತದಲ್ಲೇ ಮೈಸೂರು ವಿವಿ ಹಾಗೂ ಮೈಸೂರು ಶಿಕ್ಷಣಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಾ ಬಂದಿದೆ. ಕಲೆ, ಸಾಹಿತ್ಯಕ್ಕೂ ಪ್ರೋತ್ಸಹ ನೀಡುತ್ತಾ ಬಂದಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರು ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ನಾಡೋಜ ಡಾ.ಪಿ.ಎಸ್.ಶಂಕರ್, ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಸ್ಥಾಪಕ ಸಂಪಾದಕರಾದ ಕೆ.ಬಿ.ಗಣಪತಿ ಅವರಿಗೆ ಗೌರವ ಡಾಕ್ಟರೆಟ್ ನೀಡಿರುವುದರಿಂದ ಯೂನಿವರ್ಸಿಟಿಯ ಗೌರವವನ್ನು ಹೆಚ್ಚಿಸಿದೆ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಲ್ಪನೆಯಲ್ಲಿ ಮೂಡಿದ ಹಾಗೂ  ಶತಮಾನ ಕಂಡಿರುವ ವಿಶ್ವವಿದ್ಯಾನಿಲಯ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು ಹೆಮ್ಮೆಯ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ.ಲೋಕನಾಥ್, ಕುಲಸಚಿವರಾದ ಶೈಲಜ, ರಕ್ಷಣಾ ಸಂಶೋದನೆ ಮತ್ತು ಅಭಿವೃದ್ದಿ ಸಂಸ್ಥೆಯ ವಿಶ್ರಾಂತ ಮಹಾನಿರ್ದೇಶಕರಾದ ಪದ್ಮವಿಭೂಷಣ ಪ್ರಶಸ್ತಿ ಪಡೆದಿರುವ ಡಾ.ವಾಸುದೇವ್ ಕೆ.ಆತ್ರೆ ಸೇರಿದಂತೆ ಇತರರು ಹಾಜರಿದ್ದರು.

Key words: Mysore University- 103rd Convocation- 32,240 candidates- receive -graduation