ಓಟ್ ಹಾಕೋದು ಬೇರೆಯವರಿಗೆ ಆದ್ರೆ ಸವಲತ್ತುಗಳನ್ನು ಕೊಡಲು ನಾವ್ ಬೇಕಾ..? – ಅಲ್ಪಸಂಖ್ಯಾತರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಪ್ರಶ್ನೆ…

ಮೈಸೂರು,ಜ,23,2020(www.justkannada.in): ಅಲ್ಪಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಇದೀಗ ಮತ್ತೆ ಅಲ್ಪಸಂಖ್ಯಾತರ ವಿರುದ್ದ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓಟ್ ಹಾಕೋದು ಬೇರೆಯವರಿಗೆ ಆದರೆ ಸವಲತ್ತುಗಳನ್ನು ಕೊಡಲು ನಾವು ಬೇಕಾ? ಎಂದು ಅಲ್ಪಸಂಖ್ಯಾತರಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಪ್ರಶ್ನೆ ಕೇಳಿದ್ದಾರೆ.

ಮೈಸೂರಿನ ಸುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ ಅಲ್ಪ ಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ತಾವು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅಲ್ಪ ಸಂಖ್ಯಾತರಿಗೆ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತೇವೆ. ಆದರೆ ಇತರೆ ಯಾವುದೇ ಪ್ಯಾಕೇಜ್ ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಮಗೆ ಮತ ಹಾಕದಿದ್ದರೂ ಸಹ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಹೂವಿನ ಹಾರದೊಂದಿಗೆ ಬಂದು ನಿಮಗೇ ಮತಹಾಕಿದ್ದೇವೆ ಎಂದು ಹೇಳುತ್ತಾರೆ. ಮತ ಯಾರಿಗೋ ಹಾಕಿ ನಮ್ಮ ಬಳಿಗೆ ಬಂದು ಸವಲತ್ತುಗಳನ್ನು ಕೇಳುತ್ತಾರೆ. ಓಟ್ ಹಾಕೋದು ಯಾರಿಗೋ, ಸವಲತ್ತುಗಳನ್ನು ನೀಡಲು ನಾವು ಬೇಕೇ ಎಂದು ಅಲ್ಪಸಂಖ್ಯಾತರ ವಿರುದ್ದ ಶಾಸಕ ರೇಣುಕಾಚಾರ್ಯ ಕಿಡಿಕಾರಿದರು.

ನಾನೇನು ರಾಜಕೀಯ ಸನ್ಯಾಸಿಯಲ್ಲ.

ಸಚಿವ ಸ್ಥಾನದ ಆಕಾಂಕ್ಷಿ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ನಾನೇನು ರಾಜಕೀಯ ಸನ್ಯಾಸಿಯಲ್ಲ. ಗ್ರಾಮ ಪಂಚಾಯ್ತಿಯಲ್ಲಿ ಗೆದ್ದವರೂ ಅಧ್ಯಕ್ಷ ಸ್ಥಾನ ಕೇಳುತ್ತಾರೆ. ನಾನು ಮೂರು ಬಾರಿ ಆಯ್ಕೆಯಾಗಿದ್ದೇನೆ. ಅಬಕಾರಿ ಇಲಾಖೆ ಮೂರನೇ ಮಹಡಿಗೆ ಸೀಮಿತವಾಗಿತ್ತು. ಅದನ್ನು ನಾನು ಸಚಿವನಾಗಿದ್ದಾಗ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೇನೆ. ರೇಣುಕಾಚಾರ್ಯ ಹಿರಿಯರಿದ್ದಾರೆ, ಅವರು ಸಚಿವರಾಗಬೇಕೆಂದು ಜನತೆ ಬಯಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು  ತಿಳಿಸಿದ್ದಾರೆ.

Key words: mysore-suttur- MLA- MP renukacharya- minority community -question