ಶಾಲಾ-ಕಾಲೇಜು ಆರಂಭ: ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಶುಭಕೋರಿದ ಶಾಸಕ ಎಸ್.ಎ ರಾಮದಾಸ್

ಮೈಸೂರು,ಆಗಸ್ಟ್, 23,2021(www.justkannada.in): ಇಂದು 9 ರಿಂದ 12 ನೆ ತರಗತಿ ವರೆಗಿನ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು, ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್  ನಗರದ ಸೇಂಟ್ ಮೆರೀಸ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಶಾಲೆಯ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಶಾಸಕ ಎಸ್.ಎ ರಾಮದಾಸ್  ಮಾಸ್ಕ್, ಪೆನ್ನು ಹಾಗೂ ಚಾಕೊಲೇಟ್ ಅನ್ನು ನೀಡುವ ಮೂಲಕ ಶುಭ ಕೋರಿದರು.

ಈ ವೇಳೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಕೋವಿಡ್ ಕರಾಳ ಛಾಯೆಯ 2 ವರ್ಷಗಳ ನಂತರದಲ್ಲಿ ಶಾಲೆ ಪ್ರಾರಂಭವಾಗುತ್ತಿದೆ. ಈಗಾಗಲೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಲಕ್ಷಾಂತರ ಜನರು ಪ್ರಾಣ ಬಿಟ್ಟಿರುವುದು ನೋವಿನ ಸಂಗತಿ. ಪರೀಕ್ಷೆಯ ಪದ್ಧತಿಯ ವ್ಯವಸ್ಥೆಯಲ್ಲಿ 10 ನೆ ತರಗತಿಯ ಪರೀಕ್ಷೆ ಮಾಡಲಾಯಿತು. ಮಕ್ಳಳ ಮಾನಸಿಕ ಹಾಗೂ ಬೌದ್ಧಿಕ ಶಕ್ತಿಯನ್ನ  ಅವಲೋಕನ ಮಾಡಿ ಪರೀಕ್ಷೆ ಮಾಡಿದೆವು. ಈ ಕೋವಿಡ್ ಸಂದರ್ಭದಲ್ಲಿಯೂ ಸಹ ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳಲಿಲ್ಲ, ಕೊರೊನಾ ಸಂದರ್ಭದಲ್ಲಿಯೂ ಸಹ ನೀವು ಗಳು ನಿರಂತರ ಕಲಿಕೆಯಲ್ಲಿ ತೊಡಗಿದ್ದೀರಿ.  625 ಕ್ಕೆ 625 ಅಂಕಗಳನ್ನು ಮೈಸೂರಿನಲ್ಲಿ 9 ಜನ ಪಡೆದುಕೊಂಡಿದ್ದಾರೆ. ಅದರಲ್ಲಿ 5 ಜನರು ಕೆ.ಆರ್ ಕ್ಷೇತ್ರದವರು ಎನ್ನಲು ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಾನು ಬಂದಾಗ ಮಕ್ಕಳ ಮುಖದಲ್ಲಿ ಸಂತೋಷವನ್ನು ನೋಡಿ ನನಗೆ ತೃಪ್ತಿ ಆಯಿತು. ನಮ್ಮ ಕ್ಷೇತ್ರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ 270 ಬೂತ್ ಗಳಲ್ಲೂ ಕೂಡಾ ವ್ಯಾಕ್ಸಿನೇಷನ್ ಮಾಡಿಸಿದ್ದೇವೆ. 2.19 ಲಕ್ಷ ಜನಕ್ಕೆ ಈಗಾಗಲೇ ಕೋವಿಡ್ ಲಸಿಕೆಯನ್ನು ಕೆ.ಆರ್ ಕ್ಷೇತ್ರದಲ್ಲಿ ನೀಡಲಾಗಿದೆ. ನೀವು ಧೈರ್ಯದಿಂದ ಶಾಲೆಗೆ ಬಂದಿದ್ದೀರಿ ನಿಮ್ಮಲ್ಲರಿಗೂ ಸ್ವಾಗತ ಬಯಸುತ್ತೇನೆ. ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಬಳಸಿ. ಇದು ಕೊರೊನಾ ವಿರುದ್ಧದ ಮೊದಲ ಅಸ್ತ್ರವಾಗಿದೆ  ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರತಿ ತಿಂಗಳು ಒಂದು ದಿನ ನಮ್ಮ PHC ಗಳಲ್ಲಿರುವ ವೈದ್ಯರು ಶಾಲೆಗೆ ಬಂದು ನಿಮ್ಮ ಆರೋಗ್ಯ ತಪಾಸಣೆ ಮಾಡಲಿದ್ದಾರೆ, ನೀವು ಭಯ ಪಡಬೇಕಾಗಿಲ್ಲ. ನೀವೆಲ್ಲರೂ ಶೈಕ್ಷಣಿಕ ವರ್ಷದಲ್ಲಿ ಒಳ್ಳೆಯ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ. ನಿಮ್ಮ ರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ ಆಗಿದೆ. ಮುಂದಿನ ಬಾರಿ ನೀವೆಲ್ಲರೂ 10 ನೆ ತರಗತಿಯಲ್ಲಿ 100 ಕ್ಕೆ 100 ರಷ್ಟು ಪಾಸಾದರೆ ಅದೇ ಸಾಕು ಎಂದರು.

ಭಾರತದ ಸುವರ್ಣ ವರ್ಷ ಹಾಗಾಗಿ ಸ್ವರ್ಣ ಕೆ.ಆರ್ ಅನ್ನು ಮಾಡಲು ನಿರ್ಧಾರ ಮಾಡಿದ್ದೇವೆ. ನಿಮಗೆ ಸ್ವಂತ ಮನೆ ಇಲ್ಲದಿದ್ದರೆ ಅದನ್ನು ಸಹ ನಾವು ಮಾಡುವವರಿದ್ದೇವೆ.  ನಿಮ್ಮ ತಂದೆ ತಾಯಿಯರಿಗೆ ನಿಮ್ಮ ಮೂಲಕ ಸ್ವಂತ ಮನೆ ಕೊಡಲಿದ್ದೇವೆ. 10 ನೆ ತರಗತಿಯಲ್ಲಿ ತೇರ್ಗಡೆಯಾಗಿ ಆ ಮನೆಯ ಕೀ ಅನ್ನು ತೆಗೆದುಕೊಳ್ಳಲು ನೀವುಗಳು ಬರಬೇಕು. ಶಾಲೆಯು ಯಾವುದೇ ವಿಘ್ನಗಳಿಲ್ಲದೆ ನಡೆಯಲಿ ಎಂದು ತಾಯಿಯನ್ನು ಪ್ರಾರ್ಥಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ರಾಮಾರಾಧ್ಯ, ಶಿಕ್ಷಣ ಸಂಯೋಜಕರಾದ  ಶ್ರೀ ಮನೋಹರ್, ಬಿ.ಆರ್.ಪಿ ಶ್ರೀಕಂಠ ಶಾಸ್ತ್ರಿ, ಸಿ.ಆರ್.ಪಿ ಕಾವ್ಯಶ್ರೀ ಹಾಗೂ ರಾಜು ಮತ್ತು ಸೆಂಟ್ ಮೆರೀಸ್ ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

Key words: Mysore-start-school-college-MLA-SA Ramadas -s students