ರೈಲ್ವೆ ಇಲಾಖೆ ಪ್ರಕಟಣೆ : ಸಂಪೂರ್ಣ ಇಂಗ್ಲಿಷ್ ಮಯ, ಕನ್ನಡ ‘ ಮಾಯ ‘

 

ಮೈಸೂರು, ಜೂ.15, 2019 : (www.justkannada.in news) : ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ರೈಲ್ವೆ ಇಲಾಖೆಯಲ್ಲಿ ಸ್ಥಳೀಯ ಭಾಷೆಗೆ ಸಂಬಂಧಿಸಿದಂತೆ ತಾರತಮ್ಯ ಮುಂದುವರೆದಿದೆ. ಕರ್ನಾಟಕದ ಮಟ್ಟಿಗಂತು ಇದು ತುಸು ಹೆಚ್ಚೆ ಎನಿಸಿದೆ.

ಕೆಲ ದಿನಗಳ ಹಿಂದೆಯಷ್ಟೆ ಕೇಂದ್ರ ಸರಕಾರ ತ್ರಿಭಾಷ ಸೂತ್ರದ ಮೂಲಕ ಹಿಂದಿ ಹೇರಿಕೆಗೆ ಹಿಂಬಾಲ ಪ್ರಯತ್ನ ನಡೆಸಿದ್ದು, ಅದನ್ನು ಭಾರತದ ದಕ್ಷಿಣ ಭಾಗದ ರಾಜ್ಯಗಳು ಅದರಲ್ಲೂ ತಮಿಳುನಾಡು ಪ್ರಬಲವಾಗಿ ವಿರೋಧಿಸಿದ್ದು ಸರಿಯಷ್ಟೆ. ದಕ್ಷಿಣ ರಾಜ್ಯಗಳ ಆಕ್ರೋಶಕ್ಕೆ ಬೆದರಿದ ಕೇಂದ್ರ ಹಿಂದಿ ಹೇರಿಕೆ ಕೈಬಿಟ್ಟು ತಣ್ಣಾಗಾಯಿತು. ಇದೀಗ ರೈಲ್ವೆ ಇಲಾಖೆಯಲ್ಲಿ ಈ ತಾರತಮ್ಯ ಮುಂದುವರೆದಿದೆ.

ರೈಲು ಸಂಚಾರ, ಮಾಹಿತಿ..ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಹೊರಡಿಸುವ ಪ್ರಕಟಣೆಗಳು ಸಂಪೂರ್ಣ ಆಂಗ್ಲಮಯವಾಗಿರುತ್ತದೆ. ಸ್ಥಳೀಯ ಕನ್ನಡ ಭಾಷೆಯನ್ನು ಸಂಪೂರ್ಣ ಕಡೆಗಣಿಸಿ ಇಂಗ್ಲಿಷ್ ಗೆ ಮಣೆ ಹಾಕಲಾಗುತ್ತಿದೆ.

ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಪತ್ರಿಕಾ ಹೇಳಿಕೆಗಳು ಸಹ ಸಂಪೂರ್ಣ ಇಂಗ್ಲಿಷ್ ಭಾಷೆಯಲ್ಲಿದ್ದು ಕನ್ನಡ ಕೈ ಬಿಡಲಾಗಿದೆ. ಕರ್ನಾಟಕ ರಾಜ್ಯ ವಾರ್ತ ಇಲಾಖೆಯ ಅಧಿಕೃತ ವಾಟ್ಸ್ ಅಪ್ ಗ್ರೂಪ್ ಹಾಗೂ ಇ-ಮೇಲ್ ಮೂಲಕ ರೈಲ್ವೆ ಇಲಾಖೆ ಪ್ರಕಟಣೆಗಳು ಮಾಧ್ಯಮಗಳಿಗೆ ತಲುಪುತ್ತಿವೆ. ಆದರೆ ರೈಲ್ವೆ ಇಲಾಖೆ ಒದಗಿಸುವ ಈ ಮಾಹಿತಿ ಸಂಪೂರ್ಣ ಇಂಗ್ಲಿಷ್ ಮಯವಾಗಿದ್ದು ಕನ್ನಡ ಮಾಯವಾಗಿರುತ್ತದೆ.
ಈಗಾಲಾದರು ಸಂಬಂಧಪಟ್ಟವರು ಕನ್ನಡ ಕಡೆಗಣಿಸದೆ, ಆಧ್ಯತೆ ನೀಡುವರೆ..?

——-

key words : mysore-railways-department-kannada-neglected-english