‘ಪಂಚ – ಪಾಂಡವ’ ರಲ್ಲಿ ಯಾರು ಹಿತವರು..!

 

ಪಾಂಡವಪುರ, ಆ.14, 2021 ; (www.justkannada.in news) ವಿಧಾನಸಭಾ ಚುನಾವಣೆಗೆ ಒಂದು ವರ್ಷ ಒಂಬತ್ತು ತಿಂಗಳು ಬಾಕಿಯಿರುವ ಸಂದರ್ಭದಲ್ಲಿಯೇ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಕ್ಷೇತ್ರದಲ್ಲಿ ರಾಜಕೀಯ ನಾಯಕರು ಮುಂದಾಗಿದ್ದಾರೆ.

ರಾಜಕಾರಣವೇ ಹಾಸುಹೊಕ್ಕಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಈವರಗೆ ಜೆಡಿಎಸ್ ಹಾಗೂ ರೈತಸಂಘಗಳೇ ಪ್ರಾಬಲ್ಯ ಸಾಧಿಸಿವೆ. ಈ ನಡುವೆ ಮುಂದಿನ ಬಾರಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕೂಡ ಸ್ಪರ್ಧೆ ನಡೆಸಲು ಸದ್ದಿಲ್ಲದೇ ತಯಾರಿ ನಡೆಸಿಕೊಳ್ಳುತ್ತಿವೆ.

ಜೆಡಿಎಸ್ ಪಕ್ಷದಿಂದ ಹಾಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ರೈತಸಂಘದಿಂದ ಕಳೆದ ಬಾರಿ ಸ್ಪರ್ಧೆ ನಡೆಸಿ ಪರಾಜಯಗೊಂಡಿದ್ದ ದರ್ಶನ್ ಪುಟ್ಟಣ್ಣಯ್ಯ ಅವರ ಸ್ಪರ್ಧೆ ಬಗ್ಗೆ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ಕೊಂಚ‌ ದೂರವೇ ಉಳಿದಿರುವ ಕಾರಣ ರೈತಸಂಘದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಈವರಗೆ ಸ್ಪಷ್ಟವಾಗಿಲ್ಲ. ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಸಹ ದರ್ಶನ್ ಪುಟ್ಟಣ್ಣಯ್ಯ ಅವರ ಅನುಪಸ್ಥಿತಿಯಲ್ಲಿ ರೈತಸಂಘದ ಕಾರ್ಯಕರ್ತರು ಚುನಾವಣೆ ಎದುರಿಸಿದ್ದಾರೆ.

ಈ‌ ನಡುವೆ ಕ್ಷೇತ್ರದಲ್ಲಿ ಕಳೆದ ಬಾರಿಯಿಂದಲೂ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಓಡಾಡುತ್ತಿದ್ದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಕಳೆದ ಬಾರಿ ರೈತ ಸಂಘಕ್ಕೆ ಬೆಂಬಲ ನೀಡಿ ಚುನಾವಣಾ ಕಣಕ್ಕೆ ಧುಮುಕದೆ ಹಿಮ್ಮುಖವಾಗಿದ್ದರು. ಈ ಬಾರಿ ಕೂಡ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿ ಕ್ಷೇತ್ರದಾದ್ಯಂತ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆಗ್ಗಾಗ್ಗೆ ಕ್ಷೇತ್ರದಲ್ಲಿ ಕಾಣಿಸಿಕೊಂಡು ಕಣ್ಮರೆಯಾಗುತ್ತಿದ್ದಾರೆ.

ಇತ್ತ, ಕಾಂಗ್ರೆಸ್ ಪಕ್ಷದಿಂದಲೇ ಮತ್ತೊಬ್ಬ ಅಭ್ಯರ್ಥಿ ಡಾ.ರವೀಂದ್ರ ಅವರು ಚುನಾವಣಾ ಕಣಕ್ಕೆ ಧುಮುಕುವ ಸಾಧ್ಯತೆಗಳಿವೆ ಎಂದು ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಮೂಲಗಳ ಪ್ರಕಾರ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಡಾ.ರವೀಂದ್ರ ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ ಕ್ಷೇತ್ರದಲ್ಲಿ ಈವರಗೆ ಬಲವಾಗಿ ಬೇರೂರಿರದ ಬಿಜೆಪಿ ಪಕ್ಷದ ಅಭ್ಯರ್ಥಿ ಯಾರೆಂಬುದು ಕೂಡ ಕುತೂಹಲ ಮೂಡಿಸಿದೆ. ತಾಲೂಕಿನಲ್ಲಿ ಈವರಗೆ ಕೊಂಚವೂ ನೆಲೆ ಕಾಣದ ಬಿಜೆಪಿ ಪಕ್ಷವನ್ನ ಸಂಘಟಿಸಲು ನಾಯಕರು ಮನಸು ಮಾಡಿದಿರುವುದು ಬಿಜೆಪಿ ಪಕ್ಷದ ಅಭ್ಯರ್ಥಿ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಈ ನಡುವೆ ತಾಲೂಕಿನಾದ್ಯಂತ ಪರಿವರ್ತನ ಟ್ರಸ್ಟ್ ಮೂಲಕ ಯುವಪಡೆಯನ್ನು ಒಗ್ಗೂಡಿಸುತ್ತಿರುವ ಡಾ.ಎನ್.ಎಸ್.ಇಂದ್ರೇಶ್ ಎಂಬ ಹೊಸಮುಖವನ್ನ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂಬುದು ಕ್ಷೇತ್ರದ ಜನರ ಅಂಬೋಣ.

ಈವರಗೆ ಯಾವ ಪಕ್ಷದವರೊಂದಿಗೂ ಗುರುತಿಸಿಕೊಳ್ಳದೆ, ಯಾವ ರಾಜಕೀಯ ನಾಯಕರ ಜೊತೆ ಸಂಪರ್ಕ ಸಾಧಿಸದೆ ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಸೇವೆಯ ಮೂಲಕ ಜನರನ್ನ ತಲುಪುತಿದ್ದಾರೆ. ಬಡವರು, ಅನಾರೋಗ್ಯಪೀಡಿತರು, ಅಶಕ್ತರು, ವಿದ್ಯಾರ್ಥಿಗಳಿಗೆ ಧನ ಸಹಾಯ ಸೇರಿ ಕೋವಿಡ್ ನಂತಹ ಸಂದರ್ಭದಲ್ಲಿ ಸಮಾಜಸೇವೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದ ಜನರು ಡಾ.ಇಂದ್ರೇಶ್ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿ ಎಂದು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಜನರು ಈಗಾಗಲೇ ಡಾ.ಇಂದ್ರೇಶ್ ಕೂಡ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲಿ ಎಂದು ಆಶಿಸುತ್ತಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ. ಆದರೆ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯದ ಜೊತೆಗೆ ಮೊದಲ ಬಾರಿಗೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸಿದಂತೆ ಮೇಲುಕೋಟೆ ಕ್ಷೇತ್ರದಲ್ಲೂ ಕಮಲ ಅರಳಿಸಲು ಯೋಜನೆ ಸದ್ದಿಲ್ಲದೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದೆಲ್ಲದವರ ನಡುವೆ ಈ ಬಾರಿಯೂ ಜೆಡಿಎಸ್ ಪಕ್ಷ ಗೆಲುವಿನ ನಗೆ ಬೀರಲು ಕೊಂಚ ತೊಡಕಾಗುತ್ತದೆಯಾ ಎಂಬ ಅನುಮಾನ ಜೆಡಿಎಸ್ ವಲಯದಲ್ಲಿಯೇ ಕೇಳಿಬರುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಂತ್ರಿ ಸ್ಥಾನ ಲಭಿಸಲಿದೆ ಎಂಬ ಲೆಕ್ಕಾಚಾರ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಾದಿ ಏರುತ್ತಾರೆ ಎಂಬ ಜಾತಿ ಲೆಕ್ಕಚಾರದಿಂದ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷಕ್ಕೆ ಮತಹಾಕಿದ್ದರು. ಆ ಕಾರಣದಿಂದಲೇ ರೈತ ಸಂಘದ ಅಭ್ಯರ್ಥಿ ಪರಾಜಯಗೊಂಡಿದ್ದರು ಎಂಬುದು ಕ್ಷೇತ್ರದ ಜನರ ಮಾತು.
ಇತ್ತ, ಚುನಾವಣೆ ಸೋಲಿನ ಬಳಿಕ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಪುಟ್ಟಣ್ಣಯ್ಯನವರ ಅನುಪಸ್ಥಿತಿಯಲ್ಲಿ ರೈತ ಸಂಘದ ಕಾರ್ಯಕರ್ತರು ಪಕ್ಷ ಕಟ್ಟಲು ಹೆಣಗಾಡುತ್ತಿರುವುದು ಸುಳ್ಳಲ್ಲ ಎಂದು ರೈತ ಸಂಘದ ಕಾರ್ಯಕರ್ತರು ಬೇಸರದಿಂದಲೇ ಹೇಳುತ್ತಾರೆ.
ಮತ್ತೊಂದೆಡೆ, ಕಳೆದ ಚುನಾವಣೆಯಲ್ಲಿ ರೇವಣ್ಣ ಸ್ಪರ್ಧೆ ಮಾಡಿದ್ದರೆ ಈ ಬಾರಿ ಅನುಕೂಲ ಆಗುತ್ತಿತ್ತು. ಆದರೆ, ಅವರು ಸ್ಪರ್ಧೆಯಿಂದ ವಿಮುಖವಾಗಿದ್ದು ಅವರ ಮೇಲಿನ ವಿಶ್ವಾಸ ಕುಂದಲು ಕಾರಣವಾಗಿದೆ ಎಂಬುದು ಖುದ್ದು ರೇವಣ್ಣ ಅವರ ಅಭಿಮಾನಿಗಳ ಮಾತು.
ಈ‌ ನಡುವೆ ಕ್ಷೇತ್ರದಲ್ಲಿ ಹೊಸಮುಖವಾಗಿರುವ ಡಾ. ಎನ್.ಎಸ್.ಇಂದ್ರೇಶ್ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಕ್ಕರೆ ಬಿಜೆಪಿಗೆ ಪಕ್ಕದ ಕೆ.ಆರ್.ಪೇಟೆ ಕ್ಷೇತ್ರದಂತೆ ಮೇಲುಕೋಟೆಯಲ್ಲೂ ಬಿಜೆಪಿ ಖಾತೆ ತೆರೆಯಲು ಅವಕಾಶ ಸಿಗುತ್ತದೆ ಎಂಬ ಲೆಕ್ಕಾಚಾರ ಕೂಡ ಕ್ಷೇತ್ರದ ಜನರ ಮನದಲ್ಲಿದೆ.

ಈ ಮಧ್ಯೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳು ಗರಿಗೆದರಿದ್ದು ಜೆಡಿಎಸ್, ರೈತಸಂಘ ಹಾಗೂ ಕಾಂಗ್ರೆಸ್ ಪಕ್ಷಗಳ ಜೊತೆಗೆ ಬಿಜೆಪಿ ಕೂಡ ಪ್ರಬಲ ಸ್ಪರ್ಧೆ ಒಡ್ಡಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಒಟ್ಟಾರೆ, ಕ್ಷೇತ್ರದ ಜನತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಹೊಸಮುಖ ಬರಲಿ ಎಂದು ಅಪೇಕ್ಷೆ ಪಡುತ್ತಿರುವುದು ಸುಳ್ಳಲ್ಲ. ಆದರೆ, ಅದು ಸಾಧ್ಯವಾಗಲಿದೆಯ ಎಂಬುದನ್ನ ಕಾದುನೋಡಬೇಕಿದೆ.

key words : mysore-pandavapura-election-congress-jds-bjp