Friday, October 16, 2026

Dasara Wishes

Happy Dasara
Home Front Page ಮೈಸೂರು : ಮುಡಾ ಸೈಟ್ ಪಡೆದವರ ಎದೆಯಲ್ಲಿ ಶುರುವಾಯ್ತು ಢವ-ಢವ!

ಮೈಸೂರು : ಮುಡಾ ಸೈಟ್ ಪಡೆದವರ ಎದೆಯಲ್ಲಿ ಶುರುವಾಯ್ತು ಢವ-ಢವ!

ಮೈಸೂರು,ಆಗಸ್ಟ್,28,2026 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ ಮಂಜೂರಾಗಿದ್ದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ನಿವೇಶನ ಪಡೆದವರು, ಮಾರಾಟ ಮಾಡಿದವರು ಹಾಗೂ ಖರೀದಿಸಿದವರಲ್ಲಿ ಆತಂಕ ಹೆಚ್ಚಾಗಿದೆ.

ಅಕ್ರಮವಾಗಿ ಮಂಜೂರಾಗಿರುವ ಬದಲಿ ಹಾಗೂ ಪ್ರೋತ್ಸಾಹದಾಯಕ ನಿವೇಶನಗಳನ್ನು ಮರಳಿ ಪಡೆಯುವ ಪ್ರಕ್ರಿಯೆಗೆ ಮುಡಾ ಚಾಲನೆ ನೀಡಿದೆ. ಎಂಡಿಎ ಪ್ರಭಾರ ಆಯುಕ್ತ ಬಿ.ಆರ್. ಮಹೇಶ್ ನೇತೃತ್ವದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ಕಾರ್ಯವನ್ನು ತ್ವರಿತಗೊಳಿಸಿದ್ದಾರೆ.

3 ದಿನಗಳ ಡೆಡ್‌ಲೈನ್

ಮುಡಾದಿಂದ ಮಂಜೂರಾಗಿರುವ ನಿವೇಶನಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಆರಂಭವಾಗಿದೆ. ಈ ಸಂಬಂಧ ಸಂಬಂಧಪಟ್ಟ ಸಬ್‌ ರಿಜಿಸ್ಟ್ರಾರ್‌ ಗಳಿಗೆ ಮೂರು ದಿನಗಳ ಒಳಗಾಗಿ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ನೀಡುವಂತೆ ಡೆಡ್‌ ಲೈನ್ ನೀಡಲಾಗಿದೆ.ಮೈಸೂರು muda

ನಿವೇಶನ ಹಂಚಿಕೆಗೆ ಸಂಬಂಧಿಸಿದ ಮೂಲ ದಾಖಲೆಗಳು ಹಾಗೂ ನೋಂದಣಿ ದಾಖಲೆಗಳನ್ನು ಪರಸ್ಪರ ತಾಳೆ ಮಾಡುವ ಮೂಲಕ ಅಕ್ರಮ ಮಂಜೂರಾತಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮಾರಾಟ-ಮರುಮಾರಾಟದ ಮೇಲೂ ಕಣ್ಣು

ಮುಡಾದಿಂದ ನಿವೇಶನ ಪಡೆದ ಬಳಿಕ ಅವುಗಳನ್ನು ಮಾರಾಟ ಮಾಡಲಾಗಿದೆಯೇ? ಮರುಮಾರಾಟವಾಗಿದೆಯೇ? ಎಂಬುದನ್ನು ಎನ್‌ ಕಂಬರೆನ್ಸ್ ಸರ್ಟಿಫಿಕೇಟ್ (ಇಸಿ) ಮೂಲಕ ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ.

ಹೀಗಾಗಿ ಕೇವಲ ನಿವೇಶನ ಪಡೆದವರಷ್ಟೇ ಅಲ್ಲದೆ, ಆ ನಿವೇಶನಗಳನ್ನು ಮಾರಾಟ ಮಾಡಿದವರು ಹಾಗೂ ಖರೀದಿಸಿದವರ ಮೇಲೂ ಈಗ ಮುಡಾದ ಪರಿಶೀಲನೆಯ ಕಣ್ಣು ಬಿದ್ದಿದೆ.

ಮನೆ ಕಟ್ಟಿರುವ ನಿವೇಶನಗಳ ವಿಚಾರದಲ್ಲಿ ಕಾನೂನು ಸಲಹೆ

ಈಗಾಗಲೇ ಕೆಲವು ನಿವೇಶನಗಳಲ್ಲಿ ಮನೆ ಸೇರಿದಂತೆ ಕಟ್ಟಡ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಅಂತಹ ನಿವೇಶನಗಳನ್ನು ಮರಳಿ ಪಡೆಯುವ ಸಂದರ್ಭದಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಮುಡಾ ಮುಂದಾಗಿದೆ.

ಮನೆ ನಿರ್ಮಿಸಿರುವ ನಿವೇಶನಗಳನ್ನು ಯಾವ ರೀತಿಯಲ್ಲಿ ವಾಪಸ್ ಪಡೆಯಬೇಕು, ಪರಿಹಾರ ಅಥವಾ ಇತರೆ ಕಾನೂನು ಕ್ರಮಗಳ ಅಗತ್ಯವಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಸರ್ಕಾರಕ್ಕೂ ಪತ್ರ

ನಿವೇಶನಗಳ ರದ್ದುಪಡಿಸುವಿಕೆ ಮತ್ತು ಮರಳಿ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಸ್ಪಷ್ಟನೆಗಳನ್ನು ನೀಡುವಂತೆ ಸರ್ಕಾರಕ್ಕೆ ಮುಡಾದಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರದಿಂದ ಅಗತ್ಯ ಸ್ಪಷ್ಟನೆ ದೊರೆತ ಬಳಿಕ ಮುಂದಿನ ಕ್ರಮವನ್ನು ಮತ್ತಷ್ಟು ವೇಗಗೊಳಿಸುವ ಸಾಧ್ಯತೆ ಇದೆ.

50:50 ನಿವೇಶನಗಳ ಮೇಲೆ ಮುಡಾ ಆ್ಯಕ್ಷನ್

50:50 ಅನುಪಾತದಡಿ ಮುಡಾದಿಂದ ಹಂಚಿಕೆಯಾಗಿದ್ದ ನಿವೇಶನಗಳ ಅಕ್ರಮ ಮಂಜೂರಾತಿಯನ್ನು ರದ್ದುಪಡಿಸಿ, ಅವುಗಳನ್ನು ಮರಳಿ ಪಡೆಯುವ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ.

ಇದರೊಂದಿಗೆ ಮುಡಾದಲ್ಲಿ ಸೈಟ್ ಪಡೆದವರು, ಸೈಟ್ ಮಾರಿದವರು ಹಾಗೂ ಸೈಟ್ ಖರೀದಿಸಿದವರಲ್ಲೂ ನಡುಕ ಶುರುವಾಗಿದೆ.

ಯಾವ ನಿವೇಶನ ಅಕ್ರಮವಾಗಿ ಮಂಜೂರಾಗಿದೆ? ಯಾರ ಹೆಸರಿಗೆ ಹಂಚಿಕೆಯಾಗಿದೆ? ನಂತರ ಯಾರಿಗೆ ಮಾರಾಟವಾಗಿದೆ? ಮರುಮಾರಾಟವಾಗಿದೆಯೇ? ಪ್ರಸ್ತುತ ನಿವೇಶನ ಯಾರ ಹೆಸರಿನಲ್ಲಿದೆ? ಎಂಬುದರ ಸಂಪೂರ್ಣ ಸರಪಳಿಯನ್ನು ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ.ಮೈಸೂರು mysore urben mda

ಒಟ್ಟಿನಲ್ಲಿ, ಇಷ್ಟು ದಿನ ದಾಖಲೆಗಳಲ್ಲಿದ್ದ ಮುಡಾ 50:50 ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಇದೀಗ ನೆಲಮಟ್ಟದ ಕಾರ್ಯಾಚರಣೆಯ ಹಂತಕ್ಕೆ ಬಂದಿದ್ದು, ನಿವೇಶನ ಪಡೆದವರ ಎದೆಯಲ್ಲಿ ಢವ-ಢವ ಶುರುವಾಗಿದೆ.ಮುಡಾ ಸೈಟ್ ಪಡೆದವರ ಎದೆಯಲ್ಲಿ ಶುರುವಾಯ್ತು ಢವ jk02_new jk02 new

ಮುಂದಿನ ದಿನಗಳಲ್ಲಿ ದಾಖಲೆಗಳ ಪರಿಶೀಲನೆಯಿಂದ ಯಾರ ನಿವೇಶನ ಉಳಿಯಲಿದೆ, ಯಾರ ನಿವೇಶನ ಮುಡಾ ವಶಕ್ಕೆ ಬರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Key words: Mysore, MUDA, site, buyers, Anxiety