ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ: ಅಭಿವೃದ್ಧಿ ಮೇಲೆ ಜನರ ಬಳಿ ಮತಯಾಚನೆ- ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

ಮೈಸೂರು,ಮಾರ್ಚ್,23,2024(www.justkannada.in):  ನಾವು ಕೂಲಿ ಮಾಡಿದ್ದೇವೆ, ಕೂಲಿಗೆ ಸಂಬಳ ಕೇಳುತ್ತೇವೆ. ಅಭಿವೃದ್ಧಿಯ ಮೇಲೆ ಜನರ ಬಳಿ ಮತ ಕೇಳುತ್ತೇವೆ ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದರು.

ಇಂದು ಮೈಸೂರಿನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಕಾಂಗ್ರೆಸ್ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. 47 ವರ್ಷಗಳ ಬಳಿಕ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ 24/7 ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ನ ಹಿರಿಯ ಶಾಸಕ ತನ್ವೀರ್ ಸೇಠ್ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಸಹಕಾರದೊಂದಿಗೆ ಮುಂದೆ ಸಾಗುತ್ತೇನೆ ಎಂದರು.

ನನ್ನ ವಿರುದ್ಧ ಯಾವುದೇ ರೀತಿಯ ಗುರುತರ ಆರೋಪಗಳಿಲ್ಲ. ಶಾಸಕರು ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ನಮ್ಮ ಶಾಸಕರ ಅನುಮತಿಯ ಬಳಿಕವೇ ಕೆಲಸ ಮಾಡುತ್ತೇನೆ. ಅಭ್ಯರ್ಥಿ ಗೆಲುವಿಗೆ ಶಾಸಕರ ಪಾತ್ರ ಮುಖ್ಯ ಎಂದು ಎಂ ಲಕ್ಷಣ್ ಹೇಳಿದರು.

ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರನಿಗೆ 700 ಕೆ.ಜಿ. ಬೆಳ್ಳಿ ಗಿಫ್ಟ್- ಮಾಜಿ ಶಾಸಕ ಎಚ್.ಪಿ. ಮಂಜುನಾಥ್

ಸಂವಾದದಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಪಿ. ಮಂಜುನಾಥ್,  ಮಲೆ ಮಹದೇಶ್ವರನಿಗೆ ಸಿಎಂ ಸಿದ್ದರಾಮಯ್ಯ  700 ಕೆ.ಜಿ. ಬೆಳ್ಳಿ ಗಿಫ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಭೆ, ಸಮಾರಂಭಗಳಲ್ಲಿ ಉಡುಗೊರೆ ಬಂದಿತ್ತು. ಬೆಳ್ಳಿ ಗದೆ, ಬೆಳ್ಳಿ ಕತ್ತಿ ಹೀಗೆ ಅನೇಕ ಉಡುಗೊರೆ ಬಂದವು.  ಅದೆಲ್ಲವನ್ನೂ ಸಿಎಂ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಟ್ಟುಬಿಟ್ಟರು. ಅದನ್ನು ಪ್ರಚಾರ ಮಾಡಿಕೊಳ್ಳಲಿಲ್ಲ. ನಾವು ಸೀತಾರಾಮ ಅಂತ ನಮಸ್ಕಾರ ಮಾಡುತ್ತೇವೆ. ಬಿಜೆಪಿಯವರು ಜೈ ಶ್ರೀರಾಮ್ ಅಂತ ಕೂಗುತ್ತಾರೆ. ಯಾವ ರೀತಿ ಭಕ್ತಿ ಬೇಕು ಅಂತ ನಾವು ಡಿಸೈಡ್ ಮಾಡಬೇಕು. ಈಗಾಗಲೇ ಅನೇಕ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರೂ ಕಾಂಗ್ರೆಸ್ ನತ್ತ ಬರಬಹುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

Key words: mysore-kodagu- Congress -candidate -M. Laxman- development