ಹದಿ ಹರೆಯದವರ, ಅತಿರೇಕದ ಹುಚ್ಚಾಟಗಳಿಗೆ ಬೇಕಾಗಿದೆ BREAK….!

 

ಮೈಸೂರು, ಸೆ.17, 2021 : ( www.justkannada.in news )ಕಳೆದ ಒಂದು ತಿಂಗಳ ಅವಧಿಯಲ್ಲಿ ಸಾಕಷ್ಟು ಸಾವು ನೋವುಗಳ ಬಗ್ಗೆ ಕೇಳಿದ್ದೇವೆ. ಬಹುತೇಕ ಸಾವಿನ ಪ್ರಕರಣಗಳಲ್ಲಿ ಯುವಜನತೆಯ ಹುಚ್ಚಾಟ, ಅತಿರೇಕದ ವರ್ತನೆಗಳು ಎದ್ದು ಕಾಣಿಸುತ್ತವೆ. ಪ್ರತಿನಿತ್ಯ ಇಂಥಹ ಘಟನೆಗಳು ವರದಿಯಾದಾಗ ನಮ್ಮ ಕಣ್ಮುಂದೆ ಬೆಳೆದು ದೊಡ್ಡವರಾಗುತ್ತಿರುವ ಮಕ್ಕಳ ಬಗ್ಗೆ ಒಂದು ಕ್ಷಣ ಆತಂಕ, ಭಯ ಹುಟ್ಟುತ್ತದೆ. ಮುಂದೆ ನಮ್ಮ ಮಕ್ಕಳನ್ನು ಯಾವ ರೀತಿ ಪ್ರಬುದ್ಧರನ್ನಾಗಿ ಬೆಳೆಸಬೇಕು, ಇವರಿಗೆ ಎಂಥಹ ಮಾರ್ಗದರ್ಶನ ನೀಡಬೇಕು ಅನ್ನೋದ್ರ ಬಗ್ಗೆ ಯೋಚಿಸುವಂತಾಗುತ್ತದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಶಾಸಕರ ಪುತ್ರ ಸೇರಿ ೭ ಮಂದಿ ದಾರುಣವಾಗಿ ಸಾವನ್ನಪ್ಪಿದ್ರು. ಹಿಂದೆ ಬರುತ್ತಿದ್ದ ವಾಹನವೋ ಅಥವಾ ಮತ್ತೊಂದರಿಂದಲೋ ಸಂಭವಿಸಿದ ಅವಘಡ ಅದಾಗಿರಲಿಲ್ಲ. ಪಾರ್ಟಿ ಮಾಡಿ ರಾತ್ರಿ ಪೂರಾ ಮನಬಂದಂತೆ ಅಲೆದಾಡಿ ಪೊಲೀಸರಿಂದ ಹೀಗೆಲ್ಲಾ ನೈಟ್ ಕರ್ಫ್ಯೂನಲ್ಲಿ ಓಡಾಡ್ಬೇಡಿ ಅಂತ ಬುದ್ಧಿ ಮಾತು ಹೇಳಿಸಿಕೊಂಡ ಕೆಲವೇ ಘಂಟೆಗಳಲ್ಲಿ ಬಾಳಿ ಬದುಕಬೇಕಿದ್ದ ೭ ಜೀವಗಳು ಇಹಲೋಕದ ಯಾತ್ರೆ ಮುಗಿಸಿದ್ವು.

ಪೊಲೀಸರ ಮಾತನ್ನು ಸ್ವಲ್ಪ ಸೀರಿಯಸ್ ಆಗಿ ತೆಗೆದುಕೊಂಡು ಬೈದು ಹೇಳಿದವರು ಬದುಕಲು ಹೇಳಿದ್ರು ಎಂದುಕೊಂಡು ಮನೆಗೆ ತೆರಳಿದ್ದಿದ್ರೆ ಬಹುಶಃ ಆ ಜೀವಗಳು ಇಂದು ನಮ್ಮೆಲ್ಲರ ಮಧ್ಯೆ ಜೀವಂತವಾಗಿರುತ್ತಿದ್ದವೇನೋ. ಹೋದವರೇನೋ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ರು. ಆದರೆ ಜೀವನದ ಸಂಧ್ಯಾಕಾಲದಲ್ಲಿ ನಮ್ಮ ಮಕ್ಕಳು ಆಸರೆಯಾಗ್ತಾರೆ, ಮೊಮ್ಮಕ್ಕಳನ್ನು ನೋಡಿಕೊಂಡು ನೆಮ್ಮದಿಯಾಗಿ ಬದುಕೋಣ ಎಂದು ಕನಸು ಕಾಣುತ್ತಿದ್ದ ಹೆತ್ತವರು ಮಾಡಿದ ತಪ್ಪಾದ್ರೂ ಏನು? ಸಾಕಿ ಸಲಹಿದ ಮಕ್ಕಳು ಹೀಗೆ ಕಣ್ಣ ಮುಂದೆಯೇ ದಾರುಣವಾಗಿ ಸಾವನ್ನಪ್ಪಿದ್ರೆ ಅದನ್ನ ಸಹಿಸೋದಾದ್ರೂ ಹೇಗೆ? ಪುತ್ರ ಶೋಕ ನಿರಂತರ ಅನ್ನೋ ಮಾತಿದೆ. ಸಾವನ್ನಪ್ಪಿದ ಯುವಕ ಯುವತಿಯರ ಪೋಷಕರ ಬಗ್ಗೆ ಒಮ್ಮೆ ಯೋಚಿಸಿದ್ರೆ ಕಣ್ಣಾಲಿಗಳು ತೇವಗೊಳ್ಳದೆ ಇರವು.

ಮೊನ್ನೆ ಮೊನ್ನೆ ಬೆಂಗಳೂರಿನ ಫ್ಲೈ ಓವರ್ ಮೇಲೆ ನಡೆದ ಅಪಘಾತದಲ್ಲಿ ಯುವಕ-ಯುವತಿ ಸಾವನ್ನಪ್ಪಿದ್ದು ಮತ್ತೊಂದು ದುರಂತ. ಇಡೀ ರಾಜ್ಯವೇ ದುರಂತ ನೋಡಿ ಮರುಗಿದೆ ಆದ್ರೆ ನೆನ್ನೆ ರಾತ್ರಿ ಕೆಲ ಯುವಕ-ಯುವತಿಯರು ಫ್ಲೈ ಓವರ್ ಮೇಲೆ ನಿಂತು ಡ್ಯಾನ್ಸ್ ಮಾಡಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಏನೆನ್ನಬೇಕು? ಕಳೆದ ತಿಂಗಳು ಮೈಸೂರಿನ ಲಲಿತಾದ್ರಿಪುರ ಬಡಾವಣೆಯಲ್ಲಿ ನಡೆದ ಗ್ಯಾಂಗ್‌ರೇಪ್ ಸಾಂಸ್ಕೃತಿಕ ನಗರಿಯ ನಿದ್ದೆಗೆಡಿಸಿತ್ತು. ಇದೇ ವೇಳೆ ಘಟನೆ ನಡೆದ ನಿರ್ಜನ ಪ್ರದೇಶಕ್ಕೆ ಕೆಲ ಯುವತಿಯರು ತೆರಳಿದ್ದಾರೆ. ಪೊಲೀಸರು ಪ್ರಶ್ನಿಸಿದ್ದಕ್ಕೆ ಸುಮ್ಮನೆ ನೋಡಿಕೊಂಡು ಹೋಗೋಕೆ ಬಂದಿದ್ವಿ ಎಂಬ ಉತ್ತರ ನೀಡಿದ್ರಂತೆ! ಬೈದು ಬುದ್ಧಿ ಹೇಳಿ ಕಳುಹಿಸಿದ ಪೊಲೀಸರು ಹಣೆ ಹಣೆ ಚಚ್ಚಿಕೊಂಡಿದ್ದಾರೆ.

ಘಟನೆ ನಡೆದ ವಾರಗಳ ನಂತರವೂ ನಿರ್ಜನ ಪ್ರದೇಶಗಳಲ್ಲಿ ಪಾರ್ಟಿ ಮಾಡಲು ತೆರಳಿದ್ದ ಸಾಕಷ್ಟು ಯುವಕ ಯುವತಿಯರು ಪೊಲೀಸರಿಂದ ವಾರ್ನಿಂಗ್ ಮಾಡಿಸಿಕೊಂಡು ಹೋಗಿದ್ದಾರೆ. ಇದೊಂಥರಾ ಬುರುಡೆ ಗಟ್ಟಿಯಾಗಿದೆ ಅಂತಾ ಬಂಡೆಗೆ ಚಚ್ಚಿಕೊಂಡಂತೆ. ಹೀಗೆಲ್ಲಾ ವರ್ತಿಸುವ ಮುನ್ನ ನಿಮ್ಮ ಹೆತ್ತವರ ಬಗ್ಗೆ ಒಮ್ಮೆ ಯೋಚಿಸಿ ನೋಡಿ. ನನ್ನ ಮಗಳೋ, ಮಗನೋ ಸ್ನೇಹಿತರ ಜೊತೆ ಸುತ್ತಾಡಲು ಹೋಗಿದ್ದಾರೆ. ಆಕೆ ಅಥವಾ ಆತ ಸುರಕ್ಷಿತವಾಗಿ ವಾಪಸ್ ಬರಲಿ ಎಂದೇ ಹಾರೈಸುತ್ತಿರುವ ತಂದೆ-ತಾಯಿ ನಿಮಗೋಸ್ಕರ ಕಾದಿರುತ್ತಾರೆ. ಮನೆಯಿಂದ ಸ್ಕೂಲಿಗೋ, ಕಾಲೇಜಿಗೋ ಹೊರಡುವ ವೇಳೆ ಹತ್ತು ಬಾರಿ ಜೋಪಾನ, ಜೋಪಾನ ಎನ್ನುವ ಅವರ ಮಾತುಗಳ ಹಿಂದಿನ ಕಾಳಜಿ ಅರಿಯಿರಿ. ನಮಗೆಲ್ಲಾ ತಿಳಿದಿದೆ ನಾವು ದೊಡ್ಡವರಾಗಿದ್ದೇವೆ ಎಂಬ ಅಹಂ ಬದಿಗಿಟ್ಟು ಜವಾಬ್ದಾರಿ ಬೆಳೆಸಿಕೊಳ್ಳುವುದು ಜಾಣತನ.
ಸೋಷಿಯಲ್ ಮೀಡಿಯಾಗಳಲ್ಲಿ ರಾತ್ರೋರಾತ್ರಿ ಫೇಮಸ್ ಆಗಬೇಕು ಎಂಬ ಆಸೆಯೋ ಅಥವಾ ವಯೋಸಹಜ ವರ್ತನೆಯೋ ಗೊತ್ತಿಲ್ಲ. ಆದ್ರೆ ಇಂಥಹ ಹುಚ್ಚಾಟಗಳಿಗೆ ಕೈ ಹಾಕಿದ್ರೆ ಬಲಿಯಾಗೋದು ಮಾತ್ರ ನಾವೇ ಅನ್ನೋ ಕನಿಷ್ಠ ಜ್ಞಾನವೂ ಇಲ್ಲದ ಮೇಲೆ ನಾವು ಓದುವ ಡಿಗ್ರಿಗಳಾದರೂ ಯಾವ ಸುಖಕ್ಕೆ?

mysore-accident-birthday-party-boy-death

ಇವತ್ತು ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಂಜಯನಗರದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತಂದೆ ೫೦೦ ರೂಪಾಯಿ ಕೊಡಲಿಲ್ಲ ಎಂದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಆತನ ತಂದೆ ಹೇಗೆ ಬದುಕಬೇಕು? ಕೇವಲ ೫೦೦ ರೂಪಾಯಿಗೋಸ್ಕರ ಮಗನನ್ನು ಕಳೆದುಕೊಂಡೆ ಎಂಬ ಕೊರಗು ಇನ್ಯಾವ ಪರಿ ಆ ನಿವೃತ್ತ ಹವಾಲ್ದಾರನನ್ನ ಕಾಡಬೇಡ.? ಇದಕ್ಕೋಸ್ಕರವೇನಾ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳ ಭವಿಷ್ಯ ರೂಪಿಸಲು ಹೆತ್ತವರು ಜೀವನಪೂರ್ತಿ ಹೆಣಗೋದು? ಯಾವುದೋ ಒಂದು ಸಣ್ಣ ಆಸೆ ಈಡೇರಲಿಲ್ಲವೆಂದು ಅತಿ ಚಿಕ್ಕ ವಯಸ್ಸಿನಲ್ಲಿ ಜೀವನವನ್ನೇ ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ಹದಿಹರೆಯದವರು ಬರುತ್ತಾರೆಂದರೆ ನಮ್ಮ ಶಿಕ್ಷಣ ವ್ಯವಸ್ಥೆ ಕಲಿಸುವುದಾದರೂ ಏನನ್ನು? ಮೊದಲು ಸೋಲುಗಳನ್ನು ಹೇಗೆ ಸ್ವೀಕರಿಸಬೇಕು, ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಶಾಲಾ ಹಂತದಲ್ಲಿಯೇ ಸಿದ್ಧತೆಯಾಗಬೇಕು. ಅದಿಲ್ಲದಿದ್ದರೆ ಯಾವ ಶಿಕ್ಷಣ ಕೊಟ್ಟರೂ ಅದು ವ್ಯರ್ಥ. ನಮ್ಮ ಮುಂದಿನ ಪೀಳಿಗೆಗೆ ಅಗತ್ಯವಾಗಿ ಬೇಕಾಗಿರುವುದು ನೈತಿಕ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ.

ಸಾಹಿತ್ಯ, ಹಿರಿಯ ಪತ್ರಕರ್ತರು, ಮೈಸೂರು
  • ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು, ಮೈಸೂರು.

key words : Mysore-Karnataka-youth-attitude-must-change-Bangalore-police-parents