ಎಂ.ಕೆ ಅಶೋಕ್ ಗೆ ನೀಡಿದ್ದ ಕನ್ನಡ ರಾಜ್ಯೋತ್ಸವ ಪುರಸ್ಕಾರ ವಾಪಸ್ ಪಡೆದ ಮೈಸೂರು ಜಿಲ್ಲಾಡಳಿತ.

ಮೈಸೂರು,ನವೆಂಬರ್,22,2023(www.justkannada.in): ಅಪರಾಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ ಎಂ.ಕೆ.ಅಶೋಕ್  ಅವರಿಗೆ ನೀಡಿದ್ದ 2023ನೇ ಸಾಲಿನ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು ಹಿಂಪಡೆಯಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ , ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗೌರವಾನ್ವಿತರಿಗೆ ಸನ್ಮಾನಿಸುವ ಮೂಲಕ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು  ಪ್ರತಿವರ್ಷ ಜಿಲ್ಲಾಡಳಿತದಿಂದ ನೀಡುತ್ತಿದ್ದು, ಅದರಂತೆ ಈ ಬಾರಿಯೂ ದಿನಾಂಕ: 30-10-2023 ರಂದು ನಡೆದ ಜಿಲ್ಲಾ ಮಟ್ಟದ ಸನ್ಮಾನ ಉಪಸಮಿತಿ ಸಭೆಯಲ್ಲಿ 50 ಗೌರವಾನ್ವಿತರಿಗೆ ಪುರಸ್ಕರಿಸಿ ಸನ್ಮಾನಿಸಲು ತೀರ್ಮಾನಿಸಲಾಗಿತ್ತು.

ಸನ್ಮಾನಿತರ ಅಪರಾಧ ಹಿನ್ನಲೆಯ ಕುರಿತು ಅರಕ್ಷಕ ಇಲಾಖೆಯಿಂದ ಮಾಹಿತಿ ಪಡೆಯಲು ಕ್ರಮವಹಿಸಲಾಗಿತ್ತು. ಆದರೆ ಕಾಲಾವಕಾಶದ ಕೊರತೆಯಿಂದ ಆಯ್ಕೆ ಪಟ್ಟಿ ಪ್ರಕಟಿಸಿ  ನವೆಂಬರ್ 01, 2023ರಂದು ಓವೆಲ್ ಮೈದಾನ, ಮೈಸೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಆಯ್ಕೆಪಟ್ಟಿಯಂತೆ ಎಲ್ಲರನ್ನೂ ಸನ್ಮಾನಿಸಲಾಗಿತ್ತು.

ಪ್ರಸ್ತುತ ಸದರಿ ಆಯ್ಕೆ ಮಾಡಲಾದ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 49ರಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ಪರಿಗಣಿಸಿ ಸನ್ಮಾನಿಸಲಾಗಿದ್ದ ಎಂ.ಕೆ.ಅಶೋಕ, ಜನನಿ ಸೇವಾ ಟ್ರಸ್ಟ್. #1 ಸೀತಾ ವಿಲಾಸ ರಸ್ತೆ, ಮೈಸೂರು ಇವರ ವಿರುದ್ಧ ಲಷ್ಕರ್ ಪೊಲೀಸ್ ಠಾಣೆ, ಮೈಸೂರು ಇಲ್ಲಿನ ಮೊಕದ್ದಮೆ ಸಂಖ್ಯೆ: 54/16 ಹಾಗೂ ದೇವರಾಜ ಪೊಲೀಸ್ ಠಾಣೆ, ಮೈಸೂರು ಇಲ್ಲಿನ ಮೊಕದ್ದಮೆ ಸಂಖ್ಯೆ: 215/08ರಂತೆ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಅರಕ್ಷಕ ಇಲಾಖೆಯಿಂದ ಮಾಹಿತಿ ಸ್ವೀಕೃತವಾಗಿರುವ ಹಿನ್ನಲೆಯಲ್ಲಿ ಎಂ.ಕೆ.ಅಶೋಕ ಇವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ಅರ್ಹರಿರದ ಕಾರಣ, ದಿನಾಂಕ: 01-11-2023 ರಂದು ಪ್ರದಾನ ಮಾಡಲಾಗಿದ್ದ ಮೈಸೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೈಸೂರು ಜಿಲ್ಲಾಡಳಿತವು ವಾಪಸ್ಸು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

Key words: Mysore- district- Kannada -Rajyotsava -award – MK Ashok – returned