ಮೈಸೂರಿನಲ್ಲೊಂದು ಪ್ರಹಸನದ ‘ರಾಜೀ’ ನಾಮೆ..

ಮೈಸೂರು, ಜೂ.07, 2021 : (www.justkannada.in news ) ‘ನನ್ನ ರಾಜೀನಾಮೆ ಸಾರ್ಥಕವಾಗಿದೆ’ ಹೀಗೊಂದು ಅಚ್ಚರಿ ಹೇಳಿಕೆ ಮೈಸೂರು ಮಹಾನಗರ ಪಾಲಿಕೆ ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್ ಬಾಯಿಂದ ಬಂದಿದ್ದನ್ನ ಬಹಳಷ್ಟು ಮಂದಿ ಗಮನಿಸಿದ್ದಾರೆ.jk
ಕಳೆದ ಗುರುವಾರ ಸಂಜೆ ಮಾಧ್ಯಮಗಳ ಮುಂದೆ ಬಂದು ಅಂದಿನ ಡಿಸಿ ರೋಹಿಣಿ ಸಿಂದೂರಿ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿ ಇನ್ಯಾವ ಜಿಲ್ಲೆಗೂ ಇಂಥ ಡಿಸಿ ಬೇಡ ಅಂದವರು, ಪುಟಗಟ್ಟಲೆ ಬರೆದು ತಂದಿದ್ದ ರಾಜೀನಾಮೆ ಪತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ರು. ಆ ಮೂಲಕ ಮೈಸೂರು ಮಹಾನಗರ ಪಾಲಿಕೆ, ಅಕ್ಷರಶಃ ಹಿಂದೆಂದೂ ಕಂಡಿರದ ಪ್ರಹಸನಕ್ಕೆ ಸಾಕ್ಷಿಯಾಗಿತ್ತು!symptoms - black fungus- hospital –treatment-Mysore DC- Rohini Sindhuri
ಈ ಘಟನೆ ನಡೆದ ಮರು ದಿನ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಮೈಸೂರಿಗೆ ಬಂದಿದ್ದು, ರಾಜೀನಾಮೆ ಪ್ರಹಸನ ಮಠದ ಅಂಗಳಕ್ಕೆ ಶಿಫ್ಟ್ ಆಗಿದ್ದು, ಮಧ್ಯಾಹ್ನದ ವೇಳೆಗೆ ಶಿಲ್ಪಾನಾಗ್ ಅವರನ್ನು ಪ್ರತ್ಯೇಕವಾಗಿ ಕರೆಸಿ ಸಿಎಸ್ ರವಿಕುಮಾರ್ ಅವರು ಮಾತನಾಡಿದ್ದು ಎಲ್ಲವೂ ಆಯ್ತು. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿಯಿತು.

ಶಿಲ್ಪನಾಗ್ ಅವರಿಂದ ರಾಜೀನಾಮೆ ಹಿಂಪಡೆಯುವ ಮಾತೂ ಬರಲಿಲ್ಲ. ಆದರೆ ಶನಿವಾರ ತಡರಾತ್ರಿ ರಾಜ್ಯ ಸರ್ಕಾರ ಇಬ್ಬರೂ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಮರುದಿನ ಮಧ್ಯಾಹ್ನ ನೂತನ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಲು ಪಾಲಿಕೆಗೆ ಆಗಮಿಸಿದ್ದ ಶಿಲ್ಪನಾಗ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ರಾಜೀನಾಮೆ ವಾಪಸ್ ಪಡೆಯೋದಾಗಿ ಹೇಳಿಕೆ ನೀಡಿದ್ರು. ಅಲ್ಲಿಯವರೆಗೂ ತುಂಬಾ ಯೋಚಿಸಿಯೇ ರಾಜೀನಾಮೆ ನಿರ್ಧಾರ ಮಾಡಿದ್ದಾಗಿ ಹೇಳಿದ್ದ ಶಿಲ್ಪಾನಾಗ್ ಏಕಾಏಕಿ ತಮ್ಮ ರಾಜೀನಾಮೆ ವಿಚಾರದಲ್ಲಿ ಉಲ್ಟಾ ಹೊಡೆದಿದ್ರು. ಅಲ್ಲದೆ ನನ್ನ ರಾಜೀನಾಮೆ ನಿರ್ಧಾರ ವ್ಯರ್ಥವಾಗಲಿಲ್ಲ ಎಂದರು.
ಡಿಸಿ ರೋಹಿಣಿ ಸಿಂಧೂರಿ ಕಿರುಕುಳದಿಂದ ನಿಜವಾಗಿಯೂ ಬೇಸತ್ತಿದ್ರೆ, ಶಿಲ್ಪಾನಾಗ್ ರಜೆಯ ಮೇಲೆ ತೆರಳಬಹುದಿತ್ತು, ಮಾಧ್ಯಮಗಳ ಮುಂದೆ ಬರುವ ಮುನ್ನ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಬಹುದಿತ್ತು. ಇಲ್ಲವೇ ವರ್ಗಾವಣೆ ಕೇಳಬಹುದಿತ್ತು. ಆದರೆ, ಇದ್ಯಾವುದನ್ನೂ ಮಾಡದೇ ತಮ್ಮ ರಾಜೀನಾಮೆಗೆ ಡಿಸಿ ಸಿಂಧೂರಿ ಕಾರಣ ಎಂದು ನೇರವಾಗಿ ಆರೋಪ ಮಾಡಿ ಹೊರಡುವ ಅಗತ್ಯವೇನಿತ್ತು.
ಭೂಗಳ್ಳರು, ಪ್ರಭಾವಿ ರಾಜಕಾರಣಿಗಳ ಬಣ್ಣ ಬಯಲು ಮಾಡಲು ಮುಂದಾಗಿದ್ದ ಡಿಸಿ ರೋಹಿಣಿ ಸಿಂಧೂರಿ ಹಣಿಯಲು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಡಲು ಹೊರಟಿದ್ದವರು ಕಡೆಗೆ ಶಿಲ್ಪಾನಾಗ್ ರನ್ನೆ ಬುಲೆಟ್ ಮಾಡಿಕೊಂಡ್ರು ಎಂಬುದು ಶಿಲ್ಪಾ ನಾಗ್ ರ ಹೇಳಿಕೆ ಗಮನಿಸಿದರೆ ಸ್ಪಷ್ಟವಾಗುತ್ತದೆ. ಜತೆಗೆ ಗುರಿ ಸಾಧಿಸಿದ್ದು ಸಾಭೀತಾಗುತ್ತದೆ.
ಇಷ್ಟೆಲ್ಲಾ ನಾಟಕೀಯ ಬೆಳವಣಿಗೆಗಳ ಹಿಂದೆ ಇದ್ದದ್ದು ಓರ್ವ ದಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿಸೋದು. ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮೈಸೂರನ್ನು ಹೇಗಾದರೂ ಮಾಡಿ ಕೊರೊನಾ ಮುಕ್ತ ಮೈಸೂರು ಮಾಡಬೇಕೆಂದು ಪಣತೊಟ್ಟಿದ್ದ ಜಿಲ್ಲಾಧಿಕಾರಿ ರೋಹಿಣಿಯನ್ನು ವರ್ಗಾವಣೆ ಮಾಡಿಸುವ ಮೂಲಕ ತಾವು ಕೊಟ್ಟಿದ್ದ ರಾಜೀನಾಮೆಯ ಸಾರ್ಥಕತೆಯನ್ನು ಶಿಲ್ಪಾನಾಗ್ ಅನುಭವಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಉತ್ತರವನ್ನು ಅವರೇ ಕೊಡಬೇಕು.
ಡಿಸಿ ರೋಹಿಣಿ ವರ್ಗಾವಣೆಯಿಂದ ಭೂಗಳ್ಳರು ಸದ್ಯಕ್ಕೆ ಬಚಾವ್ ಆದ್ವಿ ಅಂತಾ ನಿಟ್ಟುಸಿರು ಬಿಟ್ಟಿದ್ದು ಸುಳ್ಳಲ್ಲ. ಈ ಪ್ರಹಸನದಲ್ಲಿ ಗೆದ್ದಿದ್ದು ಭ್ರಷ್ಟಾಚಾರ, ರಾಜಕಾರಣ. ಆದರೆ ಸೋತಿದ್ದು ಮಾತ್ರ ಮೈಸೂರಿನ ಜನ!
– ಸಾಹಿತ್ಯ ಯಜಮಾನ್, ಹಿರಿಯ ಪತ್ರಕರ್ತರು

key words: mysore-DC-Transfer-Rohini sinduri- shilpanag-Resignation