ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ : ಬಿ.ಶರತ್ ಕಾನೂನು ಹೋರಾಟಕ್ಕೆ ಈಗ ವರ್ಷ..!

 

ಮೈಸೂರು, ಸೆ.28, 2021 : (www.justkannada.in news ) ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ. ಶರತ್ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಈಗ ಭರ್ತಿ ಒಂದು ವರ್ಷ..!

ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ 2020ರ ಆ.28ರಂದು ಬಿ.ಶರತ್‌ ಅವರನ್ನು ನೇಮಕ ಮಾಡಿದ್ದ ಸರ್ಕಾರ, ಸೆ.28ರಂದು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಸೆ.28 ರಂದು ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿತ್ತು. ಇದನ್ನು ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದ ಶರತ್‌, ಸೇವಾ ನಿಯಮಗಳನ್ನು ಉಲ್ಲಂಘಿಸಿ 2 ವರ್ಷ ತುಂಬುವ ಮೊದಲೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. ಅವಧಿಪೂರ್ವ ವರ್ಗಾವಣೆಗೆ ಸಕಾರಣಗಳನ್ನೂ ನೀಡಿಲ್ಲ. ಸರ್ಕಾರದ ಈ ಕ್ರಮ ಕಾನೂನುಬಾಹಿರವಾಗಿದ್ದು, ತಮ್ಮ ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ ತೀರ್ಪು ಪ್ರಕಟಿಸಲು ವಿಳಂಬ ಮಾಡಿತ್ತು. ತೀರ್ಪು ಪ್ರಕಟಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕ ಬಿ. ಶರತ್ ಅವರ ವರ್ಗಾವಣೆ ವಿಚಾರವಾಗಿ ಸಕ್ಷಮ ಪ್ರಾಧಿಕಾರವೇ ನಿರ್ಣಯಿಸುವಂತೆ ಸೂಚಿಸಿ, ವರ್ಗಾಯಿಸಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರದ ವರ್ಗಾವಣೆ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಐಎಎಸ್ ಅಧಿಕಾರಿ ಬಿ. ಶರತ್, ಸಿಎಟಿ ಆದೇಶವನ್ನು ಕೂಡ ರದ್ದುಗೊಳಿಸಬೇಕು ಎಂದು ಕೋರಿದ್ದರು. ಜತೆಗೆ ರೋಹಿಣಿ ಸಿಂಧೂರಿ ನೇಮಕ ರದ್ದು ಗೊಳಿಸುವಂತೆಯೂ ಮನವಿ ಮಾಡಿದ್ದರು.
ಇದೇ ವೇಳೆ, ಅಧಿಕಾರಿಗಳ ವರ್ಗಾವಣೆಗೆ ಮಂಡಳಿ ರಚಿಸಲು ಸಿಎಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿದೆ.

key words : mysore-DC-rohini-sindhoori-b.shartah-cat-court-transfer