ಮೈಸೂರು ದಸರಾ: ಅ.23 ರಂದು ಏರ್ ಶೋ, ಅ.18ರಿಂದ ಯುವ ದಸರಾ ಆಯೋಜನೆ.

ಮೈಸೂರು,ಅಕ್ಟೋಬರ್,10,2023(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ  ಸಿದ್ಧತೆ ನಡೆಯುತ್ತಿದ್ದು, ಅಕ್ಟೋಬರ್ 23 ರಂದು ಏರ್ ಶೋ ಮತ್ತು ಅಕ್ಟೋಬರ್ 18 ರಿಂದ ಯುವ ದಸರಾ ನಡೆಯಲಿದೆ.

ದಸರಾ ಸಿದ್ದತೆ ಕುರಿತು ಅರಮನೆ ಮಂಡಳಿ ಕಚೇರಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಐದು ವರ್ಷಗಳ ಬಳಿಕ ದಸರಾ ಮಹೋತ್ಸವದಲ್ಲಿ ಏರ್ ಶೋ ಅನಾವರಣಗೊಳ್ಳಲಿದೆ.  ಅಕ್ಟೋಬರ್ 22 ಮತ್ತು 23 ರಂದು ದಸರಾ ಅಂಗವಾಗಿ ಏರ್ ಶೋ ಆಯೋಜನೆ ಮಾಡಲಾಗಿದೆ. ಅಕ್ಟೋಬರ್‌ 22ರಂದು ಏರ್ ಶೋ ರಿಹರ್ಸಲ್, ಅಕ್ಟೋಬರ್ 23ರಂದು ಪೂರ್ಣಪ್ರಮಾಣದ ಏರ್ ಶೋ ಆಯೋಜನೆ ಮಾಡಲಾಗಿದೆ. ರಿಹರ್ಸಲ್ ಮತ್ತು ಪೂರ್ಣ ಪ್ರಮಾಣದ ಏರ್ ಶೋ ಎರಡು ಕೂಡ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿವೆ. ಸಂಜೆ 4 ಗಂಟೆಗೆ ಏರ್ ಶೋ ಆರಂಭವಾಗಲಿದ್ದು, ಒಟ್ಟು 45 ನಿಮಿಷ ಏರ್ ಶೋ‌ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಮಾಹಿತಿ ನೀಡಿದರು.

ಈ ಬಾರಿ ಬರದ ಪರಿಣಾಮ ದಸರಾ ಮಹೋತ್ಸವವನ್ನು ಅದ್ದೂರಿಯೂ ಅಲ್ಲದೇ, ಸರಳವೂ ಅಲ್ಲದೇ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಸೂಚನೆ ಮೇರೆಗೆ ಮಾರ್ಗಸೂಚಿಯನ್ವಯ ಸಾಂಪ್ರದಾಯಿಕ ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಸಿದ್ದತೆ ಮಾಡಲಾಗುತ್ತಿದೆ. ಮೈಸೂರಿನ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಸರಳ ದಸರಾ ಎಂದು ಚರ್ಚೆ ನಡೆದರೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಸರಳ ದಸರಾ ಚರ್ಚೆ ಅನಗತ್ಯ. ಬಹುತೇಕ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದ ಮೂಲಕ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಚಿಂತನೆಯಿದೆ ಎಂದು ಡಿಸಿ ಡಾ ಕೆ ವಿ ರಾಜೇಂದ್ರ ಹೇಳಿದರು.

ಅಕ್ಟೋಬರ್ 18 ರಿಂದ 21 ರವರೆಗೆ ಯುವ ದಸರಾ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಸೀಮಾ ಲಾಟ್ಕರ್, ಅಕ್ಟೋಬರ್ 18 ರಿಂದ 21ರವರೆಗೆ ಯುವ ದಸರಾ ಆಯೋಜನೆ ಮಾಡಲಾಗಿದ್ದು ಉದ್ಘಾಟನೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ. ಕನ್ನಡ ಹಿನ್ನೆಲೆ ಗಾಯಕ ಸಂಚಿತ್  ಹೆಗ್ಡೆ ಮತ್ತು ತಂಡ  ಯುವ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಸಂಭ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಸಂಜೆ 6.30 ರಿಂದ ರಾತ್ರಿ 10.30 ರವರಿಗೆ ಯುವ ದಸರಾ  ನಡೆಯಲಿದೆ.  ಮೊದಲ ದಿನ ಸಾಧು ಕೋಕಿಲ ಮತ್ತು ತಂಡದಿಂದ ಸಂಗೀತದ ರಸದೌತಣ, ಕನ್ನಡ ರ್ಯಪರ್ ಅಲೋಕ್ (All ok) ತಂಡದಿಂದ ಸಂಗೀತ ಕಾರ್ಯಕ್ರಮ, ಬಾಲಿವುಡ್ ಹಾಡುಗಾರರು ಕೂಡ ಈ ಬಾರಿ ಯುವ ದಸರಾದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೂ  ಈ ಬಾರಿ ಯುವ ದಸರಾ ಸಂಭ್ರಮದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು.

Key words: Mysore Dasara oct 23- Air show -yuva Dasara –oct 18