ಸೆ.4 ರಂದು ಮೈಸೂರು ಅರಮನೆಗೆ ದಸರಾ ಗಜಪಡೆ: ಭರದಿಂದ ಸಾಗಿದ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ.

ಮೈಸೂರು,ಆಗಸ್ಟ್,21,2023(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ರಲ್ಲಿ ಪಾಲ್ಗೊಳ್ಳಲು  ದಸರಾ ಗಜಪಡೆ ಮೈಸೂರು ಆಗಮನಕ್ಕೆ ಎರಡು ವಾರ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 1ರಂದು ನಡೆಯಲಿರುವ ಗಜಪಯಣ ಸಮಾರಂಭ ನಡೆಯಲಿದೆ.

ಗಜಪಯಣ ಸಮಾರಂಭದ ಬಳಿಕ ಮೈಸೂರಿಗೆ ಆಗಮಿಸಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಸೆಪ್ಟೆಂಬರ್ 4ರಂದು ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಹೀಗಾಗಿ ಗಜಪಡೆಯ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಕೆಲಸ ಭರದಿಂದ ಸಾಗಿದೆ.

ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಲಿದ್ದು, ಎರಡನೇ ತಂಡದಲ್ಲಿ ಐದು ಆನೆಗಳು ಆಗಮಿಸಲಿವೆ.  ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ. ಹೀಗಾಗಿ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಈ ಕುರಿತು ಮಾತನಾಡಿದ ಡಿಸಿಎಫ್ ಸೌರಬ್ ಕುಮಾರ್, ಈ ಬಾರಿಯ ದಸರಾ ಮಹೋತ್ಸವಕ್ಕೆ ಆಗಮಿಸುವ ಗಜಪಡೆಗಳ ಆಗಮನಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿವೆ. ಎರಡನೇ ಹಂತದಲ್ಲಿ 5 ಆನೆಗಳ ಆಗಮಿಸಲಿದ್ದು. ಕಳೆದ ಬಾರಿ ಭಾಗವಹಿಸಿದ್ದ 8 ಆನೆಗಳು ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಹೊಸದಾಗಿ 3 ಆನೆಗಳು ಈ ಬಾರಿಯ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ ಯಾವ ಯಾವ ಆನೆಗಳು ಬರಲಿವೆ ಎಂಬ ಪಟ್ಟಿಯನ್ನು  ಬಿಡುಗಡೆ ಮಾಡುತ್ತೇವೆ. ಬಂಡಿಪುರದ ರಾಂಪುರ, ನಾಗರಹೊಳೆಯ ದುಬಾರೆ, ಮತ್ತಿಕಟ್ಟೆ ಆನೆ ಶಿಬಿರಾಗಳಿಂದ ಗಜ ಪಡೆಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದಸರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲಾ  ಹೆಣ್ಣು ಆನೆಗಳ ಗರ್ಭ ಪರೀಕ್ಷೆಯೂ  ನಡೆದಿದೆ. ಗರ್ಭ ಧರಿಸಿದ ಆನೆಗಳನ್ನೂ ಕರೆತರುವುದಿಲ್ಲ ಎಂದು ಮಾಹಿತಿ ನೀಡಿದರು.

ಅರಮನೆ ಮೈದಾನದಲ್ಲಿ ಎಂದಿನಂತೆ ಆನೆಗಳಿಗೆ ಶೆಡ್ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಆನೆಗಳ ಆಹಾರದಲ್ಲಿ ಎಂದಿನಂತೆ ಹಿಂದೆ ಇದ್ದ ಮೆನುಗಳೆ  ಮುಂದುವರೆಯಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಎಲ್ಲಾ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.

Key words: mysore dasara-Mysore Palace –gajapade-Construction – temporary shed