ಉಡುಪಿ,ಸೆಪ್ಟಂಬರ್,25,2026 (www.justkannada.in) ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಿರಿಯ ಲೇಖಕಿ ವೈದೇಹಿ ಅಭಿಪ್ರಾಯಪಟ್ಟರು.
ದಸರಾ ಮಹೋತ್ಸವ ಅಂಗವಾಗಿ ಮೈಸೂರಿನಲ್ಲಿ ನಡೆಯುವ ಕವಿಗೋಷ್ಠಿ ಉದ್ಘಾಟನೆಗೆ ದಸರಾ ಕವಿಗೋಷ್ಠಿ ಉಪಸಮಿತಿಯು ಲೇಖಕಿ ವೈದೇಹಿ ಅವರಿಗೆ ಆಹ್ವಾನಿಸಿತು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಐದು ಕವಿಗೋಷ್ಠಿಗಳಿಗೆ ಜನರು ಹೆಚ್ಚು ನೆರೆಯುತ್ತಾರೆ. ಕೇಳುವವರೂ ಹೆಚ್ಚಿದ್ದಾರೆ. ಶ್ರವಣ ಮುಖ್ಯ. ಇದರಿಂದ ವಿವಿಧ ಕವಿಗಳ ಕವನಗಳನ್ನು ಆಲಿಸಲು ಸಹೃದಯರು ಹೆಚ್ಚುವುದು ಸಹಜ. ನನಗಂತೂ ಹೊಸ ತಲೆಮಾರಿನ ಕವಿಗಳು ಕಾವ್ಯಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ ಎಂದು ಹೇಳಿದರು.
ದಸರಾ ಮಹೋತ್ಸವವು ಶಕ್ತಿದೇವತೆಯಾದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಚೆನ್ನಾಗಿ ನಡೆಯಲಿ. ಯಾವ ಲೋಪದೋಷಗಳಾಗದಿರಲಿ. ಮಳೆಯಾಗಿ, ಚೆನ್ನಾಗಿ ಬೆಳೆ ಬಂದು ನಮ್ಮ ರೈತರ ಜೊತೆಗೆ ನಾಡಿನ ಜನತೆ ಖುಷಿಯಿಂದ ಇರುವಂತಾಗಲಿ ಎಂದು ಹಾರೈಸಿದರು.
೨೦೦೭ರಲ್ಲಿ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದೆ. ಇದಕ್ಕೂ ಮೊದಲೊಮ್ಮೆ ದಸರಾ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ್ದೆ ಎಂದು ಸ್ಮರಿಸಿದರು.
ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷರಾದ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಕವಿಗೋಷ್ಠಿ ಉಪಸಮಿತಿಯ ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅವರ ಅಳಿಯ ಟಿ.ಅನಿಲಕುಮಾರ್ ಉಪಸ್ಥಿತರಿದ್ದರು.






