ಚಾಮರಾಜನಗರದಲ್ಲಿ ಮುತ್ತಯ್ಯ ಮುರಳೀಧರನ್ ‘ಕೈಗಾರಿಕೋದ್ಯಮದ ಗೂಗ್ಲಿ’ !!

ಮೈಸೂರು, ಆಗಸ್ಟ್ 17, 2023 (www.justkannada.in): ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಚಾಮರಾಜನಗರದಲ್ಲಿ ತಂಪು ಪಾನೀಯ ಉತ್ಪಾದನಾ ಘಟಕ ಆರಂಭಿಸಲಿದ್ದಾರೆ.

ಹೌದು. ಖ್ಯಾತ ಸ್ಪಿನ್ ಮಾಂತ್ರಿಕ ಚಾಮರಾಜನಗರದಲ್ಲಿ ಉದ್ಯಮ ಆರಂಭಿಸಲು ಮುಂದೆ ಬಂದಿದ್ದಾರೆ. ಈ ಮೂಲಕ ಕ್ರಿಕೆಟರ್ ಪ್ರಮುಖ ಉದ್ಯಮವನ್ನು ಸ್ಥಾಪಿಸುವ ಮೂಲಕ ಕೈಗಾರಿಕೋದ್ಯಮಿಯಾಗಲಿದ್ದಾರೆ.

46 ಎಕರೆ ಭೂಮಿಯಲ್ಲಿ ಪಾನೀಯ ಉತ್ಪಾದನಾ ಘಟಕ ನಿರ್ಮಿಸುವ ಗುರಿ ಹೊಂದಿದ್ದಾರೆ. ಆ ಮೂಲಕ ಮೊದಲ ಹಂತದಲ್ಲಿ 800 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಉದ್ಯೋಗವಕಾಶವನ್ನು ಕಲ್ಪಿಸುತ್ತಿದ್ದಾರೆ.

ಚಾಮರಾಜನಗರ ಕೆಲ್ಲಂಬಳ್ಳಿ ಇಂಡಸ್ಟ್ರಿಯಲ್ ಏರಿಯಾದ ಬದನಗುಪ್ಪೆಯಲ್ಲಿ ಎಂ/ಎಸ್ ಮುತ್ತಯ್ಯ ಬೆವರೇಜ್ ಅಂಡ್ ಕಾನ್ಪೆಕ್ಸನರಿ ಪ್ರೈವೇಟ್ ಲಿಮಿಟೆಡ್‌ಗೆ ಕರ್ನಾಟಕ ಸರ್ಕಾರದಿಂದ ಭೂಮಿ ಮಂಜೂರಾಗಿದ್ದು, ಮುರಳೀಧರನ್ ಉದ್ಯಮದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಕರ್ನಾಟಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳು ಸಹ 46.30 ಎಕರೆ ಗುತ್ತಿಗೆ ಮಂಜೂರು ಮಾಡಿದ್ದಾರೆ. 900 ಎಕರೆ ಕೈಗಾರಿಕಾ ಪ್ರದೇಶ ಹೊಂದಿರುವ ಬದನಗುಪ್ಪೆಯಲ್ಲಿ ಮುಂದಿನ ವರ್ಷ ಜೂನ್ ಅಥವಾ ಜುಲೈ ವೇಳೆಗೆ ಉತ್ಪಾದನೆ ಆರಂಭವಾಗುವ ನಿರೀಕ್ಷೆ ಇದೆ.