ಮೈಸೂರು, ಏಪ್ರಿಲ್,29,2026 (www.justkannada.in): ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಹರಾಜು ಕಾರ್ಯ ವಿಧಾನದಲ್ಲಿ ಸುಧಾರಣೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಸಂಸದ ಯದುವೀರ್ ಒಡೆಯರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಪ್ರಸಕ್ತ ಋತುವಿನಲ್ಲಿ ಸಮಗ್ರ ಅವಲೋಕನ, ರೈತರು ಎದುರಿಸುತ್ತಿರುವ ಸವಾಲುಗಳಿಗೆ ದೀರ್ಘಾವಧಿಯ ರಚನಾತ್ಮಕ ಪರಿಹಾರ ಒದಗಿಸಲು ತುರ್ತು ಕ್ರಮ, ಏಕಸ್ವಾಮ್ಯ ನಿಯಂತ್ರಣ ತಪ್ಪಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.
ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯ
ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಖರೀದಿದಾರರ ವ್ಯಾಪಕ ಭಾಗವಹಿಸುವಿಕೆಯನ್ನು ಅನುಮತಿಸುವ ಪ್ರಾಮುಖ್ಯತೆ ಬಗ್ಗೆ ಗಮನ ಸೆಳೆಯಲಾಯಿತು. ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯವಿದೆ. ರೈತರಿಗೆ ಪಾರದರ್ಶಕತೆ, ನ್ಯಾಯಯುತ ಬೆಲೆ ಆವಿಷ್ಕಾರ ಮತ್ತು ಸಂಗ್ರಹಣೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹರಾಜು ಕಾರ್ಯವಿಧಾನಗಳಲ್ಲಿ ಸುಧಾರಣೆಗಳಿಗೆ ಆದ್ಯತೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಪಿಯೂಷ್ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.
ಅಕ್ರಮ ಸಿಗರೇಟ್ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು, ರೈತರು ಮತ್ತು ಕಾನೂನುಬದ್ಧ ಉದ್ಯಮದ ಪಾಲುದಾರರನ್ನು ರಕ್ಷಿಸಲು ಕಠಿಣ ನಿಯಂತ್ರಣ ಮತ್ತು ಸುಧಾರಣಾ ಯೋಜನೆಗಳನ್ನು ಜಾರಿಗೊಳಿಸುವಿಕೆ ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸಂಸದ ಯದುವೀರ್ ಹೇಳಿದ್ದಾರೆ.
ರೈತರ ಜೀವನೋಪಾಯವನ್ನು ರಕ್ಷಿಸುವುದು, ಸ್ಥಿರ ಆದಾಯವನ್ನು ಖಚಿತಪಡಿಸುವುದು ಮತ್ತು ಎಲ್ಲ ಸವಾಲುಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗಿದೆ ಎಂದು ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ತಿಳಿಸಿದ್ದಾರೆ.
ಕೊಡಗು ಕಾಫಿ ಮಂಡಳಿ ಸಮಸ್ಯೆ ನಿವಾರಣೆಗೆ ಮನವಿ
2015 ರಲ್ಲಿ ಸಾಲ ಮನ್ನಾ ಖಾತರಿಪಡಿಸಿದ ಬಗ್ಗೆ, ಕೊಡಗು ಕಾಫಿ ಸಹಕಾರಿ ಸಂಘ ಮತ್ತು ಕಾಫಿ ಮಂಡಳಿಯ ನಡುವೆ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಯನ್ನು ಚರ್ಚಿಸಲಾಯಿತು. ನ್ಯಾಯಾಲಯದ ನಿರ್ದೇಶನ ಇರುವುದರಿಂದ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಸಣ್ಣ ಬೆಳೆಗಾರರು ಕೂರ್ಗ್/ಕೊಡಗು ಕಾಫಿ ಬ್ರ್ಯಾಂಡ್ ಅನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಅನುಕೂಲವಾಗುತ್ತದೆ ಮತ್ತು ಸಹಕಾರಿ ಸಂಸ್ಥೆಯನ್ನು ಬೆಂಬಲಿಸಲು ಸಕಾಲಿಕ ಕ್ರಮ ಕೈಗೊಳ್ಳಬೇಕೆಂದು ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
Key words: MP, Yaduveer, tobacco auction, procedures, Union Minister, Piyush Goyal







