Tuesday, August 11, 2026

BDA Apartments

Home Front Page ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ

ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಿ: ಕೇಂದ್ರ ಸಚಿವರಿಗೆ ಸಂಸದ ಯದುವೀರ್‌ ಮನವಿ

ಮೈಸೂರು, ಫೆಬ್ರವರಿ,11,2026 (www.justkannada.in): ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲ ನಗರ ಯೋಜನೆಗೆ ಮರು ಚಾಲನೆ ನೀಡಬೇಕು, ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌  ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಸಂಸದ ಯದುವೀರ್, ಕೆಲವು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಯೋಜನೆ ನಿಧಾನಗತಿಯಲ್ಲಿ ಸಾಗಿದೆ ಅಥವಾ ನೆನೆಗುದಿಗೆ ಬಿದ್ದಿದೆ ಮೈಸೂರು (ಬೆಳಗೊಳ) – ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ  ಸ್ಥಗಿತಗೊಂಡಿದೆ. ಈ ಯೋಜನೆಗೆ ಪುನರುಜ್ಜೀವನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಮಧ್ಯಪ್ರವೇಶಿಸಬೇಕು ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೇ ಪ್ರಮುಖ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಕ್ಷೇತ್ರಗಳ ಆರ್ಥಿಕತೆಗೆ ಭಾರಿ ತೊಂದರೆಯಾಗುತ್ತಿದೆ. ಸಂಪೂರ್ಣವಾಗಿ ಸ್ಯಾಚುರೇಟೆಡ್ ರಸ್ತೆ ಸಂಪರ್ಕದ ಮೇಲೆ ಬೆಳೆಗಾರರು ಅವಲಂಬಿತಾಗಿದ್ದಾರೆ ಎಂದು  ಪತ್ರದಲ್ಲಿ ವಿವರಿಸಲಾಗಿದೆ ಎಂದು ಯದುವೀರ್ ತಿಳಿಸಿದ್ದಾರೆ.

ಸುಸ್ಥಿರ ಪ್ರವಾಸೋದ್ಯಮಕ್ಕೆ ಅವಕಾಶ

ಈ ಯೋಜನೆಯು ಕೊಡಗು ಜಿಲ್ಲೆಗೆ ಸುಸ್ಥಿರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇರಳ ಅವಕಾಶ ಒದಗಿಸುತ್ತದೆ. ಕೃಷಿ-ತೋಟಗಾರಿಕೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು ಕೊಡಗನ್ನು ಮೈಸೂರು ಮತ್ತು ಬೆಂಗಳೂರಿನ ಬೆಳವಣಿಗೆಯ ಕಾರಿಡಾರ್‌ ಗಳೊಂದಿಗೆ ಸಂಯೋಜಿಸುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ರೈಲ್ವೆ ಸಚಿವಾಲಯ ಹಾಗೂ ಅಧಿಕಾರಿಗಳ ಜೊತೆ ನಿರಂತರ ಫಾಲೋ ಅಪ್‌ ಮಾಡಿ ಎರಡೂ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ಸಂಸದ ಯದುವೀರ್ ಹೇಳಿದ್ದಾರೆ.

ಈ ಎರಡೂ ಮನವಿಯನ್ನು ಸ್ವೀಕರಿಸಿರುವ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ಮಾಹಿತಿ ನೀಡಿದ್ದಾರೆ.

ಚೆನ್ನೈ-ಬೆಂಗಳೂರು ಹೈಸ್ಪೀಡ್‌ ರೈಲಿಗೆ ಮೈಸೂರು ಸೇರಿಸಲು ಆಗ್ರಹ

ಇದೇ ವೇಳೆ ಕೇಂದ್ರ ಬಜೆಟ್‌ ನಲ್ಲಿ ಬೆಂಗಳೂರು-ಮೈಸೂರು ಹೈಸ್ಪೀಡ್‌ ರೈಲು ಯೋಜನೆ ಘೋಷಿಸಲಾಗಿದೆ. ಆದರೆ ಮೈಸೂರು ಕೈ ಬಿಡಲಾಗಿದೆ. ರೈಲ್ವೆ ಸಚಿವರು ಕೂಡಲೇ ಮಧ್ಯ ಪ್ರವೇಶಿಸಿ ಈ ಯೋಜನೆಗೆ ಸಾಂಸ್ಕೃತಿಕ ನಗರಿಯನ್ನೂ ಸೇರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಸಂಸದ ಯದುವೀರ್ ತಿಳಿಸಿದರು.

ಮೈಸೂರು ಈಗ ಪ್ರಮುಖ ಪ್ರವಾಸಿ ತಾಣವಾಗಿದೆ. ಐಟಿ ಹಬ್‌ ಆಗುತ್ತಿದೆ. ರಾಜಧಾನಿ ಬೆಂಗಳೂರಿನೊಂದಿಗೆ ಸೂಕ್ತ ಸಂಪರ್ಕ ಜಾಲ ಹೊಂದಿದರೆ ಆರ್ಥಿಕ ಪ್ರಗತಿಯಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರನ್ನು ಮೆಟ್ರೊ ಪಾಲಿಟನ್‌ ವಲಯದಿಂದ ದಟ್ಟಣೆ ಕಡಿಮೆ ಮಾಡಲು ಇದರು ನೆರವಾಗಲಿದೆ ಮತ್ತು ಹಲವಾರು ದಿನಗಳ ಬೇಡಿಕೆಯನ್ನು ಈಡೇರಿಸಲು ಸಚಿವರು ಮಂದಾಗಬೇಕು. ಈ ನಿಟ್ಟಿನಲ್ಲಿ ಚೆನ್ನೈ-ಬೆಂಗಳೂರು ಆರ್ಥಿಕ ಕಾರಿಡಾರ್‌ ಗೆ ಮೈಸೂರು ಕೂಡ ಸೇರ್ಪಡೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

Key words: Mysore-Kushalanagar, Railway, Project, MP, Yaduveer, Union Minister