ಸರ್ವೀಸ್  ರಸ್ತೆ ಮಾಡದೆ ದಶಪಥ ರಸ್ತೆ ಉದ್ಘಾಟನೆಗೆ  ಬಿಡಲ್ಲ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಫೆಬ್ರವರಿ,20,2023(www.justkannada.in): ಸರ್ವೀಸ್  ರಸ್ತೆ ಮಾಡದೆ ದಶಪಥ ರಸ್ತೆ ಉದ್ಘಾಟನೆ ಮಾಡಲು  ಬಿಡಲ್ಲ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈಗಲಾದರೂ ಡಿಕೆ ಶಿವಕುಮಾರ್ ಅವರಿಗೆ ಬಡವರ ಬಗ್ಗೆ ಕಾಳಜಿ ಬಂತಲ್ಲ. ನಾವು ಸರ್ವೀಸ್ ರಸ್ತೆ ಕೊಟ್ಟ ಬಳಿಕವೇ ಓಡಾಟಕ್ಕೆ ಅವಕಾಶ ನೀಡುತ್ತೇವೆ. ಅಲ್ಲಿಯವರೆಗೂ ಟೋಲ್ ರಸ್ತೆಯಲ್ಲಿ ಬೈಕ್‌ ಗಳಿಗೆ ಪ್ರವೇಶ ನೀಡುತ್ತೇವೆ. ಅಲ್ಲಿಯವರೆಗು ನಾವು ಯಾರಿಗೂ ಸಮಸ್ಯೆ ಮಾಡಲ್ಲ. ಯಾರಿಗೂ ಅವಕಾಶ ಇಲ್ಲ ಎಂದು ತಪ್ಪು ತಿಳುವಳಿಕೆ ಬೇಡ ಎಂದರು.

ಮೈಸೂರಿಂದ ಗುಂಡ್ಲುಪೇಟೆ ಮಾರ್ಗವಾಗಿ ಹೋಗುತ್ತೇವೆ ಅಲ್ಲಿ ಸರ್ವೀಸ್ ರಸ್ತೆಯೇ ಇಲ್ಲ. ಇದು ಸಿದ್ದರಾಮಯ್ಯನವರ ಸರ್ಕಾರದಲ್ಲೇ ಆಗಿದ್ದು ಆ ವೇಳೆ ಯಾಕೆ ಆಗಿಲ್ಲ. ನಿಮ್ಮ ಹೇಳಿಕೆ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಆ ಮೂಲಕ ನಿಮ್ಮ ಮಾತನ್ನ ನಾವು ಪರಿಗಣಿಸುತ್ತೇವೆ. ಪ್ರಶ್ನೆ ಮಾಡುವ ಮೊದಲು ತಾವು ಏನು ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು  ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ  ಚಾಮರಾಜನಗರ- ನಂಜನಗೂಡು 4 ಲೈನ್ ರಸ್ತೆಗೆ ಯಾಕೆ ಸರ್ವಿಸ್ ರೋಡ್ ಬಿಟ್ಟಿಲ್ಲ.? ಅಂದು ಬಡವರು ಡಿಕೆಶಿ ಕಣ್ಣಿಗೆ ಕಾಣಲಿಲ್ಲವ.? ಇಲ್ಲಿಯವರೆ  ಸಿಎಂ, ಪಿಡಬ್ಲ್ಯೂಡಿ ಸಚಿವರಾಗಿದ್ದರು.  ಅಂದು ಯಾಕೆ ಈ ಬಗ್ಗೆ ಮಾತನಾಡಲಿಲ್ಲ. ಡಿಕೆಶಿ ಅವರ ಹೇಳಿಕೆಯನ್ನ ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಸರ್ವಿಸ್ ರೋಡ್ ನಿರ್ಮಾಣದ ಬಳಿಕವೇ ಉದ್ಘಾಟನೆ ಆಗಲಿದೆ. ದ್ವಿಚಕ್ರವಹನ, ಸಣ್ಣಪುಟ್ಟ ವಾಹನಗಳಿಗೆ  ಸರ್ವಿಸ್ ರೋಡ್ ಇರಲಿದೆ. ಡಿಕೆ ಶಿವಕುಮಾರ್  ಮೊದಲು ನೆನೆಗುದಿಗೆ ಬಿದ್ದಿರುವ ಮಳವಳ್ಳಿ ಬೆಂಗಳೂರು ಮಾರ್ಗ ಸರಿಪಡಿಸಲಿ. ಹಾಸನ-ಬೆಂಗಳೂರು ರಸ್ತೆ ನಿರ್ಮಾಣ ಮಾಡಿದಾಗಲು ಸರ್ವೀಸ್ ರೋಡ್ ಮಾಡಿರಲಿಲ್ಲ. ಅಂದು ಯಾಕೆ ಡಿಕೆಶಿಗೆ ಬಡವರ ಪರ ಕಾಳಜಿ ಇರಲಿಲ್ಲ ಎಂದು  ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.

ಪ್ಯಾಲೇಸ್ ಮಾದರಿಯಲ್ಲಿ  ಒಂದೇ ಒಂದು ರಸ್ತೆ ನಿರ್ಮಾಣ ಮಾಡಲಿ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಪ್ರತಾಪ್ ಸಿಂಹ,  ಕಾಂಗ್ರೆಸ್ ನವರು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಡಿಕೆಶಿಗೆ ಒಮ್ಮೆ ಹೈವೇ ನಲ್ಲಿ ಬಂದು ಹೋಗಲು  ಹೇಳಿ. ರಸ್ತೆಯಲ್ಲಿ ಬರುವಾಗ ನೋಡಲು ಹೇಳಿ. ಪ್ಯಾಲೇಸ್ ಮಾದರಿ ರಸ್ತೆಯನ್ನು ಮೀರಿಸುವ ರಸ್ತೆ ನಿರ್ಮಾಣವಾಗಿದೆ ಎಂದರು.

ಮಂಡ್ಯದ ಹನಕೆರೆ ಬಳಿ ಅಂಡರ್ ಪಾಸ್‌ ಗೆ ರೈತರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ರಾಜ್ಯ ರೈತ ಸಂಘ, ನಮ್ಮ ಪಕ್ಷದವರು ಸಹ ಅಂಡರ್ ಪಾಸ್ ಬೇಕು ಎಂದು ಕೇಳಿದ್ದರು. ಆ ರಸ್ತೆ ಪ್ಲಾಟ್ ಇರೋ ಕಾರಣ 200 ಮೀ. ದೂರದಲ್ಲಿ ಇದೆ. ಈಗಾಗಲೇ ನ್ಯಾಷನಲ್ ಹೈವೇ ಅವರ ಬಳಿ ಮಾಹಿತಿ ಕೇಳಲಾಗಿದೆ. ಇದಕ್ಕಾಗಿ ಬೇರೆ ದಾರಿ ಹುಡುಕಿದ್ದೇವೆ. ರಸ್ತೆ ಪೂರ್ಣವಾದ ಬಳಿಕವೇ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದರು.

ರಾಜ್ಯ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಮೈಸೂರಿಗೂ ಈ ಬಾರಿಯ ಬಜೆಟ್ ಹಲವು ಯೋಜನೆ ನೀಡಿದೆ. ಮೋದಿ ಸರ್ಕಾರ ಯಾವುದೇ ಯೋಜನೆಗೆ ಬಜೆಟ್ ಗಾಗಿ ಕಾದು ಕುಳಿತುಕೊಳ್ಳುವುದಿಲ್ಲ. ಬೇಕೆಂದಾಗ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರ ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಳ ಮಾಡುವ  ಕೆಲಸ ಮಾಡಿದೆ. ಈ ಮೂಲಕ ಆ ಸಮುದಾಯಕ್ಕೆ ಉಪಯೋಗವಾಗುತ್ತಿದೆ. ಹತ್ತು ಲಕ್ಷ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಕೊಡುತ್ತಿದ್ದಾರೆ. ಅಪ್ಪರ್ ಭದ್ರ ಯೋಜನೆ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದರು.

Key words: MP -Pratap Simha – DK Shivakumar- statement -Daspatha Road-service road.