ನೀವು ಕೇವಲ ರಾಜಕಾರಣಿಗಳ ವಿರುದ್ಧದ ಫೇಸ್‌ ಬುಕ್ ಪೋಸ್ಟ್ ಗಳನ್ನು ಮಾತ್ರ  ಗಂಭೀರವಾಗಿ ಪರಿಗಣಿಸುವಿರೇನು? ಪೊಲೀಸರಿಗೆ ಕೋರ್ಟ್ ತರಾಟೆ

ಪುಣೆ, ಸೆಪ್ಟೆಂಬರ್, 22, 2022(www.justkannada.in): ಬಾಂಬೆ ಉಚ್ಛ ನ್ಯಾಯಾಲಯ ಮಹಿಳಾ ವಕೀಲರೊಬ್ಬರ ಸುರಕ್ಷತೆಯ ವಿಷಯಕ್ಕೆ ಸಂಬಂಧಪಟ್ಟಂತೆ ಪುಣೆಯ ಹಿರಿಯ ಪೋಲಿಸ್ ನಿರೀಕ್ಷಕರೊಬ್ಬರನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಹಾಗೂ ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ವಿಭಾಗೀಯ ಪೀಠ, ವಕೀಲ ನೂರ್ ಯಾಕೂಬ್ ಸೈಯ್ಯದ್ ಅವರು ದಾಖಲಿಸಿರುವಂತಹ ಎರಡು ಮನವಿಗಳ ವಿಚಾರಣೆ ನಡೆಸಿತ್ತು. ಈ ಪ್ರಕರಣದಲ್ಲಿ ವಕೀಲೆ ನೂರ್ ಯಾಕೂಬ್ ಸೈಯ್ಯದ ಅವರು, ತಮಗೆ ಸಾಮಾಜಿಕ ಮಾಧ್ಯಮದ ಮೂಲಕ ಬಂದಿರುವಂತಹ ಬೆದರಿಕೆಗಳನ್ನೂ ಒಳಗೊಂಡಂತೆ ಬಂದಿರುವಂತಹ ಕೊಲೆ ಬೆದರಿಕೆಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರೂ ಸಹ, ಆ ಠಾಣೆಯ ಪೋಲಿಸ್ ನಿರೀಕ್ಷಕ ಸರ್ದಾರ್ ಪಾಟೀಲ್ ಅವರು ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಆರೋಪಿಸಿದ್ದರು. ಮೇಲಾಗಿ ದೂರನ್ನು ನೀಡಲು ಹೋದಾಗ ಆ ಪೋಲಿಸ್ ಅಧಿಕಾರಿ ವಕೀಲೆಯನ್ನು ಅವಮಾನಿಸಿದ್ದಾಗಿಯೂ ಸಹ ದೂರಿದ್ದರು.

ಈ ಮನವಿಯ ವಿಚಾರಣೆ ನಡೆಸುವ ವೇಳೆ  ನ್ಯಾಯಾಲಯ ಪೀಠವು, “ನೀವು ಕೇವಲ ರಾಜಕಾರಣಿಗಳ ವಿರುದ್ಧದ ಫೇಸ್‌ ಬುಕ್ ಪೋಸ್ಟ್ ಗಳನ್ನು ಮಾತ್ರ ಪರಿಗಣಿಸುವಿರೇನು? ಇದು ಸೂಕ್ಷ್ಮವಾದ ವಿಚಾರವಲ್ಲವೇ? ಅವಹೇಳನಕಾರಿ ಪದಗಳನ್ನು ಬಳಸಿದರೆ ಅದು ಅಪರಾಧವಲ್ಲವೇ? ಜನರು ನ್ಯಾಯವನ್ನು ಕೋರಿ ಪೋಲಿಸ್ ಠಾಣೆಗೆ ತೆರಳುತ್ತಾರೆ. ಆದರೆ ನೀವು ಅಲ್ಲಿ ಅವರಿಗೆ ರಕ್ಷಣೆ ನೀಡುವ ಸಲುವಾಗಿ ಇರುವಿರೋ? ಅಥವಾ ಪಕ್ಷಪಾತ ಮಾಡಲು ಇರುವಿರೋ? ನಾವು ಪೋಲಿಸ್ ಅಧಿಕಾರಿಯ ನಡವಳಿಕೆ ಹಾಗೂ ಬಳಸಿದ ಭಾಷೆಯನ್ನು ಅಸಮ್ಮತಿಸುತ್ತೇವೆ,” ಎಂದು ನ್ಯಾಯಮೂರ್ತಿ ದೆರೆ ಹೇಳಿದರು.

ದೂರುದಾರರು ಆರೋಪಿಸಿದಂತೆ, ಪೋಲಿಸ್ ಅಧಿಕಾರಿ, ದೂರುದಾರರು ದೂರು ನೀಡಲು ಹೋದಾಗ, ಮತ್ತೊಂದು ಧರ್ಮದ ಕುಟುಂಬಕ್ಕೆ ತೊಂದರೆ ನೀಡಿರುವುದಕ್ಕೆ ನಿಮಗೆ ನಾಚಿಕೆ ಆಗುವುದಿಲ್ಲವೇ, ಎಂದು ಅವಮಾನಿಸಿದ್ದರಂತೆ.

“ಅಧಿಕಾರಿ ಉಪಯೋಗಿಸಿರುವ ಭಾಷೆಯನ್ನು ನಾವು ಅಸಮ್ಮತಿಸುತ್ತೇವೆ. ಅವರು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ.  ಇದನ್ನು ನಾವು ಹೇಗೆ ಅನುಮತಿಸುವುದಕ್ಕೆ ಸಾಧ್ಯ? ಈಗ ಈ ದೂರನ್ನು ದಾಖಲಿಸಿಕೊಂಡು, ನ್ಯಾಯೋಚಿತ ಅಂತ್ಯವನ್ನು ನೀಡಬೇಕಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಿಮ್ಮ ಕೆಲಸ,” ಎಂದು ನ್ಯಾಯಮೂರ್ತಿ ದೆರೆ ತಿಳಿಸಿದರು. ಜೊತೆಗೆ ನ್ಯಾಯಾಲಯದಲ್ಲಿ ಹಾಜರಿದ್ದಂತಹ ಪೋಲಿಸ್ ಅಧಿಕಾರಿ ಪಾಟೀಲ್ ಅವರಿಗೆ ದೂರುದಾರರ ದೂರಿನ ಪ್ರಕಾರ ಕಾನೂನು ಕ್ರಮ ಜರುಗಿಸುವಂತೆಯೂ, ಎಲ್ಲಾ ಪೂರಕ ದಿನಾಂಕಗಳ ಸಿಸಿಟಿವಿ ಫುಟೇಜ್ ಅನ್ನು ಸೇವ್ ಮಾಡುವುದಾಗಿಯೂ ಸೂಚಿಸಿದರು.

Key words: Bombay -High Court – Pune- police