ನ್ಯಾಯಾಂಗದ ಮೇಲಿನ ಪ್ರಹಾರ ಖಂಡಿಸಲು ಇಡೀ ದಿನವೇ ಬೇಕಾಯಿತೇ?- ಪ್ರಧಾನಿ ಮೋದಿಗೆ ಕುಟುಕಿದ ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಅಕ್ಟೋಬರ್,8,2025 (www.justkannada.in): ನಿನ್ನೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ಮೇಲೆ ಶೂ ಎಸೆತ ಘಟನೆಯನ್ನ ಖಂಡಿಸಿ ಪ್ರತಿಕ್ರಿಯಿಸಿಲು ಪ್ರಧಾನಿ ನರೇಂದ್ರ ಮೋದಿ ಅವರು ವಿಳಂಬ ಮಾಡಿದ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ರಾಮಲಿಂಗರೆಡ್ಡಿ, ಸಂವಿಧಾನದ ಹೃದಯದಂತಿರುವ ನ್ಯಾಯಾಂಗದ ಮುಖ್ಯಸ್ಥರ ಮೇಲೆ ಹಲ್ಲೆಯಾದಾಗ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಕ್ರೋಶದ ಕಟ್ಟೆಯೊಡೆಯಲು ತೆಗೆದುಕೊಂಡ ಸಮಯ ಬರೋಬ್ಬರಿ 9 ಗಂಟೆಗಳು! ವಿದೇಶಿ ನಾಯಕರ ಜನ್ಮದಿನಕ್ಕೆ ಮತ್ತು ಇತರೇ ವಿಚಾರಗಳಿಗೆ ಕ್ಷಣಮಾತ್ರದಲ್ಲಿ ಟ್ವೀಟ್ ಮಾಡುವ ಪ್ರಧಾನಿಯವರಿಗೆ, ನ್ಯಾಯಾಂಗದ ಮೇಲಿನ ಈ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ? ಎಂದು  ಕುಟುಕಿದ್ದಾರೆ.

“ಪ್ರತಿಯೊಬ್ಬ ಭಾರತೀಯನೂ ಕೆರಳಿದ್ದಾನೆ” ಎಂಬುದು ಪ್ರಧಾನಿಯವರ ಮಾತು. ಆದರೆ, ಆ ‘ಪ್ರತಿಯೊಬ್ಬರಲ್ಲಿ’ ದೇಶದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹಸಚಿವರು, ದೇಶದ ಆಡಳಿತ ನಡೆಸುವ ಕೇಂದ್ರ ಸಚಿವರು, ಮತ್ತು ಅವರದ್ದೇ ಆದ ಬಿಜೆಪಿ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಸೇರಿಲ್ಲವೇ? ಅವರೆಲ್ಲರ ಮೌನ, ಯಾರಿಗೆ ನೀಡುತ್ತಿರುವ ಸಮ್ಮತಿ? ಎಂದು ಸಚಿವ ರಾಮಲಿಂಗರೆಡ್ಡಿ ಪ್ರಶ್ನಿಸಿದ್ದಾರೆ.

ಒಂದೆಡೆ ಪ್ರಧಾನಿಗಳು ತಡವಾಗಿ ಕೆರಳಿದರೆ, ಇನ್ನೊಂದೆಡೆ ಅವರದ್ದೇ ವಿಚಾರಧಾರೆಯ ಬೆಂಬಲಿಗರು ಈ ಹೇಯ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮಾಚರಣೆಯ ಬಗ್ಗೆ ಪ್ರಧಾನಿಯವರು ಪ್ರತಿನಿಧಿಸುವ ಪಕ್ಷದ ನಾಯಕರು ತುಟಿ ಬಿಚ್ಚದಿರುವುದು, ಈ ಕೃತ್ಯಕ್ಕೆ ನೀಡುತ್ತಿರುವ ಪರೋಕ್ಷ ಪ್ರೋತ್ಸಾಹವಲ್ಲವೇ?

ಇದು ಕೇವಲ ವ್ಯಕ್ತಿಯೊಬ್ಬರ ಮೇಲಿನ ದಾಳಿಯಲ್ಲ; ಇದು ಪ್ರಜಾಪ್ರಭುತ್ವದ ಅಡಿಪಾಯವಾದ ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವ್ಯವಸ್ಥಿತ ದಾಳಿ. ‘ಮತ ಕಳ್ಳತನ’ದಂತಹ ಆರೋಪಗಳಿಗೆ ಬೀದಿಗಿಳಿದು ಹೋರಾಡುವವರು, ಸಂವಿಧಾನದ ಘನತೆಯನ್ನೇ ಪ್ರಶ್ನಿಸುವಾಗ ‘ಕುಂಭಕರ್ಣ ನಿದ್ರೆ’ಗೆ ಜಾರಿರುವುದರ ಹಿಂದಿನ ಮರ್ಮವೇನು? ನ್ಯಾಯಾಲಯದ ಪಾವಿತ್ರ್ಯತೆಗಿಂತ ರಾಜಕೀಯ ಲಾಭವೇ ಬಿಜೆಪಿಗೆ ಮುಖ್ಯವಾಯಿತೇ? ಎಂದು  ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿಯವರೇ, ನಿಮ್ಮ ನಿಜವಾದ ಆಕ್ರೋಶ ಇರಬೇಕಾಗಿದ್ದು ಈ ದಾಳಿಯ ಮೇಲಲ್ಲ; ಬದಲಾಗಿ, ಇಂತಹ ದಾಳಿಗಳನ್ನು ಮಾಡಲು ಪ್ರೇರೇಪಿಸುವ, ಸಂಭ್ರಮಿಸುವ ಮತ್ತು ಪೋಷಿಸುವ ನಿಮ್ಮದೇ ವಿಚಾರಧಾರೆಯ ವಿರುದ್ಧ. ಇಲ್ಲವಾದರೆ, ನಿಮ್ಮ 9 ಗಂಟೆಗಳ ತಡವಾದ ಖಂಡನೆ, ಕೇವಲ ರಾಜಕೀಯ ನಾಟಕವಾಗಿ ಉಳಿಯುತ್ತದೆ ಎಂದು ಟಾಂಗ್ ನೀಡಿದ್ದಾರೆ.

Key words: CJI, Shoe, condemn, PM Modi, Minister, Ramalingareddy