ಬಿಜೆಪಿಯಿಂದ ಗ್ಯಾರಂಟಿಗಳ ನಕಲು- ಸಚಿವ ಎಂ‌. ಬಿ ಪಾಟೀಲ್ ಟೀಕೆ

ಬೆಂಗಳೂರು,ಜುಲೈ,17,2025 (www.justkannada.in): ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸುತ್ತಿತ್ತು. ಆದರೆ ತಾನು ಎಲ್ಲಾ ರಾಜ್ಯಗಳಲ್ಲೂ ಇದೇ ಮಾದರಿಯನ್ನು ನಕಲು ಮಾಡುತ್ತಿದೆ. ಈಗ ಚುನಾವಣೆಯ ಹತ್ತಿರವಿರುವ ಬಿಹಾರದಲ್ಲಿ ಬಿಜೆಪಿ-ಜೆಡಿಯು ಸಮ್ಮಿಶ್ರ ಸರಕಾರವು ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದೆ. ಇದು ಬಿಜೆಪಿಯ ದ್ವಂದ್ವವನ್ನು ತೋರಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ನಾವು ರಾಜ್ಯದಲ್ಲಿ ಮಹಿಳೆಯರ ನೆರವಿಗೆ ಗೃಹಲಕ್ಷ್ಮಿ ಯೋಜನೆಯನ್ನು  ತಂದೆವು. ಬಿಜೆಪಿ ಇದನ್ನು ಟೀಕಿಸಿತು. ಆದರೆ ಮಹಾರಾಷ್ಟ್ರದಲ್ಲಿ ಅದೇ ಬಿಜೆಪಿ ಸರಕಾರವು ಇದನ್ನು ಲಾಡ್ಲಿ ಬೆಹೆನ್ ಹೆಸರಿನಲ್ಲಿ ನಕಲು ಮಾಡಿತು. ದೆಹಲಿಯಲ್ಲೂ ಆ ಪಕ್ಷ ಇದನ್ನೇ ಮಾಡಿದೆ. ಈಗ ಬಿಹಾರವೂ ನಮ್ಮ ಮಾದರಿಯನ್ನೇ ಅನುಕರಿಸಿದೆ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿಯವರು ಗ್ಯಾರಂಟಿ ಕೊಟ್ಟರೆ ಮಾತ್ರ ಸರಿ, ನಾವು ಕೊಟ್ಟರೆ ಖಜಾನೆ ಖಾಲಿ ಆಗುತ್ತದೆ ಎನ್ನುವ ಧೋರಣೆ ಸರಿಯಲ್ಲ. ನಾವು ನೀಡುತ್ತಿರುವ ಗ್ಯಾರಂಟಿಗಳು ದೇಶಕ್ಕೇ ಮಾದರಿಯಾಗಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಶನಿವಾರ ಸಮಾವೇಶ ನಡೆಸಲಾಗುತ್ತಿದೆ. ಇದನ್ನು ಟೀಕಿಸುವುದರ ಬದಲು ಮುಖ್ಯಮಂತ್ರಿ ಹೇಳಿದ ಹಾಗೆ ಚರ್ಚೆ ಒಂದು ವೇದಿಕೆಗೆ ಬರಲಿ. ಅವರು ಏನು ಮಾಡಿದ್ದರು? ನಾವು ಏನು ಮಾಡಿದ್ದೇವೆ ಎನ್ನುವುದನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದರು. ಜನರಿಗೆ ಹೇಳಲು ನಮ್ಮ ಸಾಕಷ್ಟು ಸಾಧನೆಗಳಿವೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಒಬಿಸಿ ವರ್ಗಗಳ ಜನಪ್ರಿಯ ಮತ್ತು ಅಗ್ರಗಣ್ಯ ನಾಯಕರಾಗಿದ್ದಾರೆ. ಹೀಗಾಗಿ ಪಕ್ಷವು ಒಬಿಸಿ ವರ್ಗಗಳ ಶ್ರೇಯೋಭಿವೃದ್ಧಿಗೆ ಪಕ್ಷವು ಇಡಬೇಕಾದ ಹೆಜ್ಜೆಗಳ ಕುರಿತು ಚಿಂತಿಸಲು ಅವರ ನೇತೃತ್ವದಲ್ಲಿ ಸಭೆ ನಡೆಸಿದೆ ಎಂದು ಪಾಟೀಲ್ ನುಡಿದಿದ್ದಾರೆ.vtu

Key words: BJP, Copy, guarantees, Minister, M. B. Patil