Saturday, August 1, 2026

BDA Apartments

Home Front Page ಮೈಸೂರು ಅರಮನೆ ಮುಂಭಾಗ ಟಾಂಗಾ ಸ್ಟ್ಯಾಂಡ್‌ ಗೆ ತೀವ್ರ ವಿರೋಧ.

ಮೈಸೂರು ಅರಮನೆ ಮುಂಭಾಗ ಟಾಂಗಾ ಸ್ಟ್ಯಾಂಡ್‌ ಗೆ ತೀವ್ರ ವಿರೋಧ.

ಮೈಸೂರು,ಮಾರ್ಚ್,16,2026 (www.justkannada.in): ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಜಾರಿಗೆ ತಂದಿರುವ ‘ಸ್ವದೇಶ ದರ್ಶನ 2.0’ ಯೋಜನೆಯಡಿ ಮೈಸೂರಿನಲ್ಲಿ ಹೆರಿಟೇಜ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿ ವಿವಾದ ಎದ್ದಿದೆ.

ಯೋಜನೆ ನೆಪದಲ್ಲಿ ಅರಮನೆ ಮುಂಭಾಗದ ಪಾದಚಾರಿ ಮಾರ್ಗದಲ್ಲೇ ಟಾಂಗಾ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಕ್ರಮಕ್ಕೆ ಮೈಸೂರಿನ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸ್ವದೇಶ ದರ್ಶನ 2.0 ಯೋಜನೆ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಉತ್ತಮ ಅನುಭವ ಒದಗಿಸುವುದು ಹಾಗೂ ಸ್ಥಳೀಯ ಪರಂಪರೆ–ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆಯಾಗಿದೆ. ಈ ಯೋಜನೆಯಡಿ ಮೈಸೂರಿನ ಕೆಲವು ಪ್ರಮುಖ ಪ್ರದೇಶಗಳಲ್ಲಿ ಹೆರಿಟೇಜ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಪಡಿಸುವ ಪ್ರಸ್ತಾವನೆ ರೂಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವರಾಹ ಗೇಟ್ ಟಾಂಗಾ ಸ್ಟ್ಯಾಂಡ್, ಬಲರಾಮ ಗೇಟ್ ಟಾಂಗಾ ಸ್ಟ್ಯಾಂಡ್, ಮೈಸೂರು ಮೃಗಾಲಯ ಪ್ರವೇಶದ್ವಾರ ಟಾಂಗಾ ಸ್ಟ್ಯಾಂಡ್, ಕುಕ್ಕರಹಳ್ಳಿ ಕೆರೆ ಸ್ಟೇಬಲ್, ನಜರಾಬಾದ್ ಸ್ಟೇಬಲ್, ಕುಕ್ಕರಹಳ್ಳಿ ಕೆರೆ ಸರ್ಕ್ಯೂಟ್, ಶಾ ಪಸಂದ್ ಮಹಾರಾಜ ಸರ್ಕ್ಯೂಟ್ ಹಾಗೂ ಮಹಾರಾಜ ಸರ್ಕ್ಯೂಟ್ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಗರ ಪಾಲಿಕೆ ‘ನೋ ಆಬ್ಜೆಕ್ಷನ್ ಸರ್ಟಿಫಿಕೆಟ್’ (NOC) ನೀಡಿದೆ.

ಆದರೆ ಅರಮನೆ ಮುಂಭಾಗದ ಪಾದಚಾರಿ ಮಾರ್ಗದಲ್ಲೇ ಟಾಂಗಾ ನಿಲ್ದಾಣ ಸ್ಥಾಪಿಸುವ ಯೋಚನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾದಚಾರಿಗಳಿಗೆ ನಿರ್ಮಿಸಲಾದ ಮಾರ್ಗವನ್ನು ಯೋಜನೆ ಹೆಸರಿನಲ್ಲಿ ಒತ್ತುವರಿ ಮಾಡುವುದು ಅವೈಜ್ಞಾನಿಕ ಕ್ರಮ ಎಂದು ನಾಗರಿಕರು ಟೀಕಿಸಿದ್ದಾರೆ.

ಸಂಚಾರ ವ್ಯವಸ್ಥೆ, ಪಾದಚಾರಿಗಳ ಸುರಕ್ಷತೆ ಹಾಗೂ ಪ್ರವಾಸಿಗರ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಗರ ಪಾಲಿಕೆ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಮೈಸೂರಿನ ಜನತೆ ಒತ್ತಾಯಿಸಿದ್ದಾರೆ. ಹಲವರು ಇದನ್ನು ನಗರ ಪಾಲಿಕೆಯ ಬೇಜವಾಬ್ದಾರಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: strong opposition, Tonga stand, in front, Mysore Palace.