ಬೆಂಗಳೂರು,ಫೆಬ್ರವರಿ, 10,2026 (www.justkannada.in): ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ಸಾವಿರ ದಿನ ಪೂರೈಸುತ್ತಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ಹಾವೇರಿಯಲ್ಲಿ ಹಕ್ಕುಪತ್ರ ವಿತರಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸಮಾವೇಶದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತೇವೆ. ನಾವೇನು ಸರ್ಕಾರದ ಸಾವಿರ ದಿನದ ಸಂಭ್ರಮ ಮಾಡುತ್ತಿಲ್ಲ. ಬದಲಾಗಿ ಜನರ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ 2.20 ಲಕ್ಷ ಹಕ್ಕುಪತ್ರ ಕೊಟ್ಟಿದ್ದೇವೆ. ಹಕ್ಕು ಪತ್ರ ಅಂದರೆ ಕೇವಲ ಪೇಪರ್ ಅಲ್ಲ. ಇಸ್ವತ್ತು ಕೊಡಬಹುದಾದ ಗಣಕೀಕೃತ ದಾಖಲೆ ಇರಲಿದೆ. ನಕಲು ಮಾಡಲು ಆಗದ ಹಕ್ಕುಪತ್ರ ನಾವು ಕೊಡಿತ್ತಿದ್ದೇವೆ. ಹಕ್ಕುಪತ್ರ ಜತೆಗೆ ಉಪನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಲಾಗುತ್ತದೆ ಎಂದರು.
ಸಂಪೂರ್ಣ ಹಕ್ಕನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತಿದ್ದೇವೆ. ಗುಡಿಸಲುಗಳಿಗೂ ನಮ್ಮ ಸರ್ಕಾರ ಹಕ್ಕುಪತ್ರ ಕೊಡಲಿದೆ. ದಾಖಲೆಗಳಿಲ್ಲದ ಹಳ್ಳಿಗಳಲ್ಲಿ ವಾಸಿಸುವವರಿಗೆ ದರಖಾಸ್ತು ಬಗರ್ ಹುಕುಂ ಜಮೀನುಗಳಿಗೆ ದಾಖಲೆ ಇರಲಿಲ್ಲ, ಭೂ ಮಾಲೀಕತ್ವದ ವಿಚಾರವಾಗಿ ನಮ್ಮ ಸರ್ಕಾರ ಸ್ಪಷ್ಟತೆ ನೀಡಿದೆ. ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ. ಸಂಬಂಧಪಟ್ಟವರ ಹೆಸರಿಗೆ ಜಮೀನು ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
Key words: thousand days, state government, Minister, Krishna Bhairegowda







