ಮೈಸೂರು,ಅಕ್ಟೋಬರ್,4,2025 (www.justkannada.in): ಮೈಸೂರು ದಸರಾ ವೇಳೆ ಸಿಎಂ, ಡಿಸಿಎಂ, ಸಚಿವರು ತೆರೆದ ಜೀಪ್ ನಲ್ಲಿ ಪರೇಡ್ ನಡೆಸಿದ ವೇಳೆ ಸಚಿವ ಹೆಚ್ .ಸಿ ಮಹದೇವಪ್ಪ ಪುತ್ರ ಜೀಪ್ ನಲ್ಲಿ ಕಾಣಿಸಿಕೊಂಡ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಬಗ್ಗೆ ಇದೀಗ ಸ್ವತಃ ಸಚಿವ ಹೆಚ್.ಸಿ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಅಲ್ಲಿ ಯಾವ ಪ್ರೋಟೊಕಾಲ್ ಕೂಡ ಉಲ್ಲಂಘನೆಯಾಗಿಲ್ಲ. ಅದು ಪ್ರೋಟೊಕಾಲ್ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಪೇರೆಡ್ ಅಲ್ಲ, ಮತ್ತು ಅಲ್ಲಿ ಯಾವ ಧ್ವಜ ವಂದನೆಯೂ ಇರಲಿಲ್ಲ. ಕೇವಲ ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವು. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಈ ರೀತಿಯ ಸುದ್ದಿ ಹಬ್ಬಿಸುತ್ತಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಯಶಸ್ವಿ ದಸರಾ ಮಾಡಿದ್ದೇವೆ. ಈ ಬಾರಿ ಜನರ ದಸರಾ ಆಗಿದೆ. 11 ದಿನದಲ್ಲಿ ಒಂದು ಸಾವಿರ ಟನ್ ಕಸ ಸಂಗ್ರಹ ಆಗಿತ್ತು. ಪೌರ ಕಾರ್ಮಿಕರ ಪರಿಶ್ರಮದಿಂದ ಇಡೀ ನಗರ ಸ್ವಚ್ಚವಾಗಿದೆ. ಪೌರಕಾರ್ಮಿಕರಿಗೆ ನನ್ನ ಮೊದಲ ಕೃತಜ್ಞತೆಗಳು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಲ್ಲರು ತಮ್ಮ ಮನೆಯ ಹಬ್ಬದ ರೀತಿ ದಸರಾ ಮಾಡಿದರು. ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ಅದನ್ನೆಲ್ಲ ಬಗೆ ಹರಿಸಿಕೊಂಡು ಯಶಸ್ವಿಯಾಗಿ ದಸರಾ ಮಾಡಿದ್ದೇವೆ. ನಮಗೆ ದಸರಾದಲ್ಲಿ ಯಾವ ರಾಜಕೀಯ ಅಜೆಂಡಾ ಇರಲಿಲ್ಲ. ಈಗಾಗಿ ಆತಂಕವಿಲ್ಲದೆ ದಸರಾ ಮಾಡಿದ್ದೇವೆ ಎಂದು ಸಚಿವ ಮಹದೇವಪ್ಪ ಹೇಳಿದರು.
ನಾಯಕತ್ವ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಅವರೇ ಮುಂದುವರೆಯುತ್ತಾರೆ. ಆಯಾಯಾ ಕಾಲಕ್ಕೆ ರಾಜಕೀಯ ನಿರ್ಧಾರಗಳನ್ನ ನಮ್ಮ ಹೈ ಕಮಾಂಡ್ ತೆಗೆದುಕೊಳ್ಳುತ್ತದೆ. ನಮಗೆ ಹೈ ಕಮಾಂಡ್ ಇದೆ. ಹೈ ಕಮಾಂಡ್ ಎಲ್ಲಾ ನಿರ್ಧಾರಗಳನ್ನ ಮಾಡುತ್ತದೆ. ಹೈ ಕಮಾಂಡ್ ಬಿಟ್ಟು ಉಳಿದವರು ಏನೇ ಮಾತನಾಡಿದರು ಅದರಲ್ಲಿ ಪ್ರಯೋಜನವೂ ಇಲ್ಲ ಅರ್ಥವೂ ಇಲ್ಲ ಎಂದು ತಿಳಿಸಿದರು.
Key words: Mysore Dasara, success, Minister, H.C. Mahadevappa







